ADVERTISEMENT

ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿ

ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 5:55 IST
Last Updated 4 ಅಕ್ಟೋಬರ್ 2022, 5:55 IST
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿದರು
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಿದರು   

ಹೊಸದುರ್ಗ: ‘ಮಕ್ಕಳನ್ನು ವಿದ್ಯಾವಂತ ರನ್ನಾಗಿಸುವುದು ದೊಡ್ಡದಲ್ಲ. ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಬಹು ದೊಡ್ಡ ಕೆಲಸ. ಆದರ್ಶದ ದಾರಿಯಲ್ಲಿದ್ದಾಗ ಮಾತ್ರ ಓದು ಸಾರ್ಥಕವಾಗುತ್ತದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕು ವೀರಶೈವ ನೌಕರರ ಸಂಘದ ವತಿಯಿಂದ ಸಾಣೇಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ದಶದೀವಿಗೆ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಲಿಂಗವಂತರೇ ನಿತ್ಯ ಲಿಂಗಪೂಜೆ ಪರಂಪರೆ ಬಿಡುತ್ತಿದ್ದಾರೆ. ಆರ್ಥಿಕ, ಸಾಮಾಜಿಕ ಸಂಘಟನೆಯಾಗುವುದು ಸುಲಭ. ಆದರೆ, ನೈತಿಕವಾಗಿ ಸಂಘಟನೆಯಾಗಲು ಮುಂದಾಗಬೇಕು. ಪ್ರತಿಯೊಬ್ಬರೂ ಧಾರ್ಮಿಕ ದಾರಿಯಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಹೇಳಿದರ ಅವರು, ‘ತಾಲ್ಲೂಕು ವೀರಶೈವ ಸಂಘಕ್ಕೆ ಮಠದ ವತಿಯಿಂದ ₹1 ಲಕ್ಷ ದತ್ತಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ‘ಯುವಕರು ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕೆ ಸೀಮಿತವಾಗಿರದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸರ್ಕಾರಿ ಸೇವೆಯಲ್ಲಿ ತೊಡಗಬೇಕು. ವೀರಶೈವ ಲಿಂಗಾಯತರಿಗೆ ಮೀಸಲಾತಿ ದೊರೆತರೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಲಿಂಗಾಯತ ಒಳಪಂಗಡಗಳೆಲ್ಲ ಒಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ’ ಎಂದರು.

ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಎಲ್.ಜಯಪ್ಪ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸಿದ್ದರಾಮಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ವಿಧಾನ ಪರಿಷತ್ ಸದಸ್ಯ ನವೀನ್, ಮುಖಂಡರಾದ ಎಸ್. ಲಿಂಗಮೂರ್ತಿ, ಹೆಬ್ಬಳ್ಳಿ ಓಂಕಾರಪ್ಪ, ಹೆಬ್ಬಳ್ಳಿ ಗುರುಸ್ವಾಮಿ, ಆರ್.ತಮ್ಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.