ADVERTISEMENT

ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವ 28ಕ್ಕೆ

ಕೋವಿಡ್ ಕಾರಣಕ್ಕೆ ಸರಳ ಆಚರಣೆಗೆ ನಿರ್ಧಾರ; ಮುನ್ನೆಚ್ಚರಿಕೆ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 2:51 IST
Last Updated 14 ಅಕ್ಟೋಬರ್ 2020, 2:51 IST
ಒಂಟಿಕಂಬದ ಮಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. ಶಾಸಕ ಎಂ.ಚಂದ್ರಪ್ಪ ಇದ್ದರು
ಒಂಟಿಕಂಬದ ಮಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು. ಶಾಸಕ ಎಂ.ಚಂದ್ರಪ್ಪ ಇದ್ದರು   

ಹೊಳಲ್ಕೆರೆ: ಪಟ್ಟಣದ ಒಂಟಿಕಂಬದ ಮಠದಲ್ಲಿ ಅ.28ರಂದು ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಪಟ್ಟಣದ ಒಂಟಿಕಂಬದ ಮಠದ ಆವರಣದಲ್ಲಿ ಮಂಗಳವಾರ ನಡೆದ ಸ್ಮರರ್ಣೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಹಾನ್ ಪಾಂಡಿತ್ಯ ಹೊಂದಿದ್ದರು. ಅವರ ಮನಸ್ಸು ಕುಸುಮದಷ್ಟೇ ಕೋಮಲ, ವಜ್ರದಷ್ಟೇ ಕಠೋರವಾಗಿತ್ತು. ಅವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಕೋವಿಡ್ ಕಾರಣಕ್ಕೆ ಈ ಬಾರಿ ಸರಳವಾಗಿ ಆಚರಿಸಲಾಗುವುದು. ಭಕ್ತರಿಗೆ ಸರಳ ಭೋಜನದ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

‘ಈ ವರ್ಷ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಉತ್ಸವಕ್ಕೆ ಡಿಜಿಟಲ್ ಟಚ್ ನೀಡಲಾಗುತ್ತಿದ್ದು, ಫೇಸ್‌ಬುಕ್, ಯುಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಿದ್ಧರಾಮ ಸ್ವಾಮೀಜಿ ಅವರು ಗ್ರಾಮೀಣ ಭಾಗದಲ್ಲಿ ಸುಮಾರು 10 ವಾಹನಗಳಲ್ಲಿ ದೊಡ್ಡ ಡಿಜಿಟಲ್ ಪರದೆಯ ಮೂಲಕ ಕಾರ್ಯಕ್ರಮ ಪ್ರಸಾರ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಿಂದ ಹೆಚ್ಚು ಜನ ಚಿತ್ರದುರ್ಗಕ್ಕೆ ಬಂದು ಕಾರ್ಯಕ್ರಮ ವೀಕ್ಷಿಸುವುದು ತಪ್ಪಲಿದೆ. ತಮ್ಮ ಗ್ರಾಮಗಳಲ್ಲೇ ಕಾರ್ಯಕ್ರಮ ವೀಕ್ಷಿಸಬಹುದು’ ಎಂದು ಹೇಳಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಮಧ್ಯ ಕರ್ನಾಟಕದ ಪ್ರಮುಖ ಉತ್ಸವ. ಮೈಸೂರು ದಸರಾದಷ್ಟೇ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುತ್ತದೆ. ಆದರೆ, ಈ ವರ್ಷ ಕೋವಿಡ್ ಪ್ರಪಂಚವನ್ನೇ ತಲ್ಲಣಗೊಳಿಸಿದ್ದು, ಸರಳ ಆಚರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ನಡೆಯುವ ಸ್ಮರಣೋತ್ಸವಕ್ಕೆ ಪ್ರತಿ ವರ್ಷದಂತೆ ನೆರವು ನೀಡಲಾಗುವುದು’ ಎಂದರು.

ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಜಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಎಲ್.ಬಿ.ರಾಜಶೇಖರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮುರುಗೇಶ್, ಬಿ.ಎಸ್.ರುದ್ರಪ್ಪ, ಮಲ್ಲಿಕಾರ್ಜುನ್, ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ, ದಯಾನಂದ್, ಮಾರುತೇಶ್ ಇದ್ದರು.

***

ಕೋವಿಡ್‌ಗೆ ಹೆದರಿ ಕೆಲವರು 6 ತಿಂಗಳಿನಿಂದ ಬಾಗಿಲು ಹಾಕಿಕೊಂಡು ಒಳಗಿದ್ದಾರೆ. ಆದರೆ, ನಾನು ನಿತ್ಯ ಜನರ ನಡುವೆಯೇ ಇದ್ದೇನೆ. ಕೋವಿಡ್‌ಗೆ ಹೆದರುವುದಕ್ಕಿಂತ ಎಚ್ಚರಿಕೆ ವಹಿಸುವುದು ಸೂಕ್ತ.

ಶಿವಮೂರ್ತಿ ಮುರುಘಾ ಶರಣರು

***

‘ಆ.8ರಂದೇ ಸ್ಮರಣೋತ್ಸವ ಮಾಡಿ’

ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಲಿಂಗೈಕ್ಯರಾದ ದಿನವಾದ ಆ.8ರಂದೇ ಸ್ಮರಣೋತ್ಸವ ಮಾಡುವುದು ಸೂಕ್ತ ಎಂದು ಶಾಸಕ ಎಂ.ಚಂದ್ರಪ್ಪ ಅವರು ಶಿವಮೂರ್ತಿ ಶರಣರಲ್ಲಿ ಕೇಳಿಕೊಂಡರು.

‘1994ರ ಆ.7ರಂದು ಶ್ರೀಗಳು ತೀರಿಕೊಂಡರು. ಆ.8ರಂದು ಇಲ್ಲಿನ ಒಂಟಿಕಂಬದ ಮಠದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೊದಲು ಆ.8ರಂದೇ ಸ್ಮರಣೋತ್ಸವ ಮಾಡಲಾಗುತ್ತಿತ್ತು. ಅದೇ ದಿನ ಸ್ಮರಣೋತ್ಸವ ಮಾಡುವುದು ಶ್ರೇಷ್ಠ’ ಎಂದು ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮುರುಘಾ ಮಠಕ್ಕೆ ರಾಜ್ಯದಾದ್ಯಂತ ಶಾಖೆಗಳಿದ್ದು, ನೂರಾರು ಸ್ವಾಮೀಜಿಗಳು, ಲಕ್ಷಾಂತರ ಭಕ್ತರಿದ್ದಾರೆ. ಪ್ರತಿ ವರ್ಷ ದಸರಾದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ರಾಜ್ಯದ ಎಲ್ಲ ಕಡೆಯಿಂದ ಭಕ್ತರು ಬರುತ್ತಾರೆ. ದೂರದ ಭಕ್ತರು ವರ್ಷದಲ್ಲಿ ಎರಡು ಬಾರಿ ಬರಲಾಗುವುದಿಲ್ಲ ಎಂದು ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನ ಸ್ಮರಣೋತ್ಸವ ನಡೆಸಲಾಗುತ್ತಿದೆ. ಆ.8ರಂದೇ ಸ್ಮರಣೋತ್ಸವ ಆಚರಿಸಬೇಕು ಎಂದು ಭಕ್ತರು ಹೇಳಿದರೆ ನಮ್ಮದೇನೂ ಅಭ್ಯಂತರ ಇಲ್ಲ’ ಎಂದು ಶಿವಮೂರ್ತಿ ಶರಣರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.