ADVERTISEMENT

ಚಿತ್ರದುರ್ಗ | ಉಕ್ಕುತ್ತಿದೆ ಮ್ಯಾನ್‌ಹೋಲ್‌; ಹೈರಾಣಾದ ವರ್ತಕರು

ನಗರಸಭೆ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಕೊಟ್ಟರೂ ಸರಿಯಾಗದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:14 IST
Last Updated 24 ಸೆಪ್ಟೆಂಬರ್ 2025, 2:14 IST
ಚಿತ್ರದುರ್ಗದ ವೀರ ಸಾವರ್ಕರ್‌ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಉಕ್ಕಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು
ಚಿತ್ರದುರ್ಗದ ವೀರ ಸಾವರ್ಕರ್‌ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಉಕ್ಕಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು   

ಚಿತ್ರದುರ್ಗ: ನಗರದ ವ್ಯಾಪಾರಿ ವಹಿವಾಟು ತಾಣ ವೀರ ಸಾವರ್ಕರ್‌ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಹಾಳಾಗಿ 4 ತಿಂಗಳಾಗಿದ್ದು ಕೊಳಚೆ ನೀರು ರಸ್ತೆಯಲ್ಲಿ ಹರಿಯತ್ತಿದೆ. ಚರಂಡಿ ನೀರಿನಿಂದ ರಸ್ತೆಯಲ್ಲಿ ದುರ್ವಾಸನೆ ಮಿತಿಮೀರಿದ್ದು ವರ್ತಕರು, ಗ್ರಾಹಕರು ರೋಗಭೀತಿಯಲ್ಲಿ ನರಳುವಂತಾಗಿದೆ.

ರಸ್ತೆಯ ಎರಡೂ ಕಡೆ ಮೊಬೈಲ್‌ ಅಂಗಡಿ, ಸೌಂಡ್‌ಸಿಸ್ಟಂ ಮಳಿಗೆ ಸೇರಿ ಹತ್ತಾರು ಅಂಗಡಿಗಳಿವೆ. ಸದಾ ಮ್ಯಾನ್‌ಹೋಲ್‌ನಲ್ಲಿ ಕೊಳಚೆ ನೀರು ಉಕ್ಕುತ್ತಿರುವ ಕಾರಣ ಅಲ್ಲಿ ಸಹಿಸಲು ಸಾಧ್ಯವಾಗದಷ್ಟು ವಾಸನೆ ಹರಡಿದೆ. ಇಳಿಜಾರಿನ ಪ್ರದೇಶವಾಗಿರುವ ಕಾರಣ ಮಳೆ ಬಂದಾಗ ಅಪಾರ ಪ್ರಮಾಣದ ಕೊಳಚೆ ನೀರು ಮ್ಯಾನ್‌ಹೋಲ್‌ನಿಂದ ನುಗ್ಗಿ ಅಂಗಡಿ ಮುಂದಕ್ಕೆ ಬಂದು ನಿಲ್ಲುತ್ತದೆ.

4 ತಿಂಗಳುಗಳಿಂದಲೂ ಕೊಳಚೆ ನೀರಿನ ಕಾರಣಕ್ಕೆ ಅಂಗಡಿ ಮಾಲೀಕರು, ಸಿಬ್ಬಂದಿ ಗಂಟಲು ಬೇನೆ, ಜ್ವರ, ಕಣ್ಣಿನ ಉರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೊಳಕಿನಿಂದಾಗಿ ಇಲ್ಲಿಯ ಅಂಗಡಿಗಳಿಗೆ ಗ್ರಾಹಕರು ಬಾರದೇ ವರ್ತಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅಂಗಡಿ ಮಾಲೀಕರು ಜುಲೈ 25ರಂದೇ ನಗರಸಭೆ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ನೀಡಿ ಮ್ಯಾನ್‌ಹೋಲ್‌ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.

ADVERTISEMENT

ಜೊತೆಗೆ ನಗರಸಭೆ ಆರೋಗ್ಯಾಧಿಕಾರಿಗಳು, ಎಂಜಿನಿಯರ್‌ಗಳಿಗೂ ಕರೆ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ಸಂಬಂಧಿಸಿದ ಚಿತ್ರಗಳನ್ನೂ ಅಧಿಕಾರಿಗಳಿಗೆ ನೀಡಿದ್ದಾರೆ. ಆದರೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಈ ಕುರಿತು ಸ್ಪಂದಿಸದ ಕಾರಣ ಅಂಗಡಿ ಮಾಲೀಕರು, ಸಿಬ್ಬಂದಿ ಕೊಳಚೆ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಲವರು ದುರ್ವಾಸನೆ ತಡೆಯಲಾಗಿದೆ ಅಂಗಡಿ ಬಾಗಿಲು ಮುಚ್ಚಿದ್ದಾರೆ.

ರಸ್ತೆಯ ಸಮೀಪದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ತಗಡಿನ ಶೀಟ್‌ ಹಾಕಿದ್ದಾರೆ. ಕೊಳಕು ನೀರು ಹರಿಯುತ್ತಿರುವ ಕಾರಣ ಕೆಲವರು ಅಲ್ಲಿಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಡೀ ವಾತಾವರಣ ಹಾಳಾಗಿದೆ. ಸದಾ ಕಾಲ ಗ್ರಾಹರಿಂದ ಗಿಜಿಗುಡುತ್ತಿದ್ದ ಅಂಗಡಿಗಳು ಈಗ ಬಿಕೊ ಎನ್ನುತ್ತಿವೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವ ಕಾರಣ ಬೀದಿನಾಯಿಗಳ ಹಾವಳಿಯೂ ವಿಪರೀತವಾಗಿದೆ.

‘ನಗರಸಭೆ ಅಧಿಕಾರಿಗಳಿಗೆ 4 ತಿಂಗಳಿಂದಲೂ ಒಂದು ಸಮಸ್ಯೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಎಷ್ಟು ಬಾರಿ ಕರೆ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ಈಗಲಾದರೂ ನಗರಸಭೆ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು’ ಎಂದು ಅಂಗಡಿ ಮಾಲೀಕರಾದ ಚಂದ್ರ, ನರಪತ್‌ಸಿಂಗ್‌, ಶಿವು, ಒಂಪ್ರಕಾಶ್‌ ಒತ್ತಾಯಿಸಿದರು.

ಮ್ಯಾನ್‌ಹೋಲ್‌ ಒಡೆದಿರುವ ಮಾಹಿತಿ ಸಿಕ್ಕಿದೆ. ಕೂಡಲೇ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಆದಷ್ಟು ಬೇಗ ಮ್ಯಾನ್‌ಹೋಲ್‌ ಸರಿಪಡಿಸಿ ಅಲ್ಲಿಯ ಪರಿಸರವನ್ನು ಸ್ವಚ್ಛಗೊಳಿಸಲಾಗುವುದು.
– ಎಸ್‌.ಲಕ್ಷ್ಮಿ, ನಗರಸಭೆ ಪೌರಾಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.