ADVERTISEMENT

ಮಾರ್ಕಾಂಡಮುನಿ ಸ್ವಾಮೀಜಿ ಅಂತಿಮ ದರ್ಶನ: ಹರಿದುಬಂದ ಜನಸಾಗರ

ಮಾರ್ಕಾಂಡಮುನಿ ಸ್ವಾಮೀಜಿಗೆ ಮಠಾಧೀಶರ ನೇತೃತ್ವದಲ್ಲಿ ಅಂತಿಮ ವಿಧಿ–ವಿಧಾನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:38 IST
Last Updated 7 ನವೆಂಬರ್ 2021, 3:38 IST
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಮಾರ್ಕಾಂಡಮುನಿ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಮಾರ್ಕಾಂಡಮುನಿ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದರು.   

ಧರ್ಮಪುರ: ಹೃದಯಾಘಾತದಿಂದ ಗುರುವಾರ ರಾತ್ರಿ ಲಿಂಗೈಕ್ಯರಾದಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನದ ಮಾರ್ಕಾಂಡಮುನಿ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು.

ಧಾರ್ಮಿಕ ಪರಂಪರೆಯ ಮೂಲಕ ಸಮುದಾಯದ ಏಳಿಗೆ ಮತ್ತು ಸಮಾಜಮುಖಿ ಕ್ರಿಯಾಶೀಲತೆಯನ್ನು ಹೊಂದಿದ್ದ ಮಾರ್ಕಾಂಡಮುನಿ ಸ್ವಾಮೀಜಿ ತಮ್ಮ 71ನೇ ವಯಸ್ಸಿನವರೆಗೂ ರಾಜ್ಯ ಮತ್ತುಹೊರ ರಾಜ್ಯಗಳಲ್ಲಿನಸಮುದಾಯದವರನ್ನು ಭೇಟಿ ಮಾಡುವುದರ ಮೂಲಕ ಸಾಮಾಜಿಕ ಕಳಕಳಿ, ಸಮುದಾಯದ ಅಭ್ಯುದಯ, ಮೌಢ್ಯ ದೂರು ಮಾಡುವ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿನ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ್ದರು. ಮಠವನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಜಾತ್ಯತೀತ ತತ್ವಗಳನ್ನು ಮೈಗೂಡಿಸಿಕೊಂಡು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದ್ದರು.

ಸ್ವಾಮೀಜಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಬೆಳಿಗ್ಗೆ 9ಕ್ಕೆ ಆದಿಜಾಂಬವ ಮಠದ ಪರಂಪರೆಯ ಶೈವ ಸಂಪ್ರದಾಯದಂತೆ ಸಹೋದರ ಗುರುಪ್ರಕಾಶ್ ಮುನಿ ಸ್ವಾಮಿ ನೆರವೇರಿಸಿದರು.

ADVERTISEMENT

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ರಘುಮೂರ್ತಿ, ಚಂದ್ರಪ್ಪ, ಶಿರಾ ಶಾಸಕ ರಾಜೇಶ್ ಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ಎನ್. ಚಂದ್ರಪ್ಪ, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಡಿ.ಸುಧಾಕರ್, ಬಿ.ಜಿ.ಗೋವಿಂದಪ್ಪ, ತಿಮ್ಮರಾಯಪ್ಪ, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಶಿವಮೂರ್ತಿ ಮರುಘಾ ಶರಣರು, ಮಾದಾರ ಚನ್ನಯ್ಯ ಸ್ವಾಮೀಜಿ,ರಾಷ್ಟ್ರೀಯ ಮಾದಿಗ ಜನಾಂಗದ ಅಧ್ಯಕ್ಷ ಮಂದಕೃಷ್ಣ ಮಾದಿಗ ಅಂತಿಮ ದರ್ಶನ ಪಡೆದರು.

ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರುಅಂತಿಮ ದರ್ಶನ ಪಡೆದರು.

ಮಠದ ಪರಂಪರೆ: ದಕ್ಷಿಣ ಭಾರತದ ಆದಿಜಾಂಬವ ಪಂಚ ಮಠಗಳಲ್ಲಿ ಮೂಲ ಮಠವಾಗಿರುವ ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠ 12ನೇ ಶತಮಾನದಲ್ಲಿ ಇಲ್ಲಿ ಪ್ರಾರಂಭವಾಗಿದ್ದು, ಆದಿಜಾಂಬವ ಅಂಬಾನಂದ ಮುನಿ ಸ್ವಾಮೀಜಿ ಮೂಲ ಸ್ವಾಮೀಜಿಯಾಗಿದ್ದರು. ಅವರ ಬಳಿಕ ಹಲವರು ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ರುದ್ರಾಕ್ಷಿಮುನಿ ಸ್ವಾಮೀಜಿ ಅವರ ತರುವಾಯ ಪೀಠಾಧ್ಯಕ್ಷರಾದ ಮಾರ್ಕಾಂಡಮುನಿ ಸ್ವಾಮೀಜಿ 1950ರಲ್ಲಿ ಆನಂದಮುನಿ, ಸರಸ್ವತಮ್ಮ ಅವರ ಎರಡನೇ ಪುತ್ರರಾಗಿ ಜನಿಸಿದ್ದರು. ಮಾಧ್ಯಮಿಕ ಶಿಕ್ಷಣದ ತರುವಾಯ ಮನೆಯಿಂದ ಹೊರಬಂದು ಶಿರಾದ ತಾಲ್ಲೂಕಿನ ಹನುಮನಹಳ್ಳಿ ಮಠದ ಬೂತಪ್ಪಸ್ವಾಮಿಯ ಅವರಿಂದ ದೀಕ್ಷೆ ಪಡೆದಿದ್ದರು.

ಇಪ್ಪತ್ತನೇ ವಯಸ್ಸಿನಲ್ಲಿದ್ದಾಗಲೇ ಮಠದ ಜವಾಬ್ದಾರಿಯನ್ನು ಹೊತ್ತು ಸುಮಾರು 50 ವರ್ಷಗಳವರೆಗೆ ಮಠದ ಅಭಿವೃದ್ಧಿಯನ್ನು ಎತ್ತರಕ್ಕೆ ಕೊಂಡೊಯ್ದು ಸಮುದಾಯದ ಜನರಲ್ಲಿ ಹೊಸ ಮನ್ವಂತರ ಬೆಳೆ‌‌ಸಿದ್ದರು.

ಜಂಬೂನಾಥ ದೇವಸ್ಥಾನ ನಿರ್ಮಾಣ, ಧ್ಯಾನ ಹಾಗೂ ದಾಸೋಹ ಮಂದಿರ, ಸಾಮೂಹಿಕ ವಿವಾಹ ಏರ್ಪಡಿಸುವುದರ ಮೂಲಕ ಸಮುದಾಯದವರ ಬಗ್ಗೆ ಕಾಳಜಿ ಹೊಂದಿದ್ದರು. ಶೈಕ್ಷಣಿಕ ವ್ಯವಸ್ಥೆಗೆ ಶಾಲೆ ಆರಂಭ, ವಸತಿ ನಿಲಯ, ವಾಣಿಜ್ಯ ಸಂಘ, ಉದ್ಯಮಶೀಲತೆಗೆ ಪ್ರೋತ್ಸಾಹ, ಮಾತಂಗ ಸಂಘಗಳ ಸ್ಥಾಪನೆ ಮೂಲಕ ಅಭಿವೃದ್ಧಿ ಕೈಗೊಂಡಿದ್ದರು.

‘ಮಾರ್ಕಾಂಡೇಯ ಮುನಿ ಸ್ವಾಮಿಯವರ ನಿಧನ ತುಂಬಾಲಾರದ ನಷ್ಟ. ಗ್ರಾಮಗಳಲ್ಲಿ ನ್ಯಾಯ ಪಂಚಾಯಿತಿ ಮಾಡುವುದರ ಮೂಲಕ ಅವರು ನ್ಯಾಯಾಧೀಶರಾಗಿದ್ದರು. ನಮಗೆ ದಾರಿ ತೋಚದಂತಾಗಿದೆ’ಎಂದು ಕಡೂರು ತಾಲ್ಲೂಕಿನ ಮರವಂಜಿ ಗ್ರಾಮದ ಎಂ.ಸಿ. ರಂಗಪ್ಪ ಕಣ್ಣೀರುಹಾಕಿದರು.

‘ಆದಿಜಾಂಬವ ಬೃಹನ್ಮಠದ ಮಾರ್ಕಾಂಡ ಮುನಿ ಸ್ವಾಮೀಜಿ ಅವರ ನಂತರಉತ್ತರಾಧಿಕಾರಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಎಲ್ಲಾ ವಿಧಿ–ವಿಧಾನಗಳು ಮುಗಿದ ಬಳಿಕ ಸಮುದಾಯದ ಗಣ್ಯರು ತೀರ್ಮಾನಿಸುತ್ತಾರೆ’ ಎಂದು ಸ್ವಾಮೀಜಿ ಅವರ ಸಹೋದರ ಗುರುಪ್ರಕಾಶ್ ಮುನಿ ಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.