ಚಿತ್ರದುರ್ಗ: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ವಿವಾಹ ನಡೆಸಲು ಹಲವರುಕಷ್ಟಪಡುತ್ತಿದ್ದಾರೆ. ಆದರೆ, ಇಲ್ಲಿನಮುರುಘಾಮಠದಲ್ಲಿ ಬುಧವಾರ ನಡೆದ 31ನೇ ವರ್ಷದ 5ನೇ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮದುವೆ ನಡೆಯುವ ವೇದಿಕೆಯ ಮೇಲ್ಭಾಗದಲ್ಲಿ ವಧು–ವರರು ಹಾಗೂ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು–ಸ್ವಾಮೀಜಿಗಳು ಸೇರಿ 30 ಕುರ್ಚಿಯಲ್ಲಿ ಆಸೀನರಾಗಿದ್ದರು. ಕೆಳಭಾಗದಲ್ಲಿ ಗಂಡು–ಹೆಣ್ಣಿನ ಪೋಷಕರಿಗಾಗಿ 30 ಕುರ್ಚಿ ಇಡಲಾಗಿತ್ತು. ನೆರೆದಿದ್ದ ಎಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡರು. ಈ ಮೂಲಕ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಲಾಯಿತು.
ಎಂತಹ ಪರಿಸ್ಥಿತಿ ಎದುರಾದರೂ ಮಠದಲ್ಲಿ ಪ್ರತಿ ತಿಂಗಳ 5ನೇ ತಾರೀಖಿನಂದು ಸಾಮೂಹಿಕ ಕಲ್ಯಾಣ ನಡೆಯುತ್ತ ಬಂದಿದೆ. ಕೋವಿಡ್ ಸೇರಿ ಯಾವುದೇ ಕಾರಣಕ್ಕೆ ಇದು ಸ್ಥಗಿತಗೊಂಡಿಲ್ಲ. ಮಾರ್ಗಸೂಚಿ ಪಾಲನೆಗಾಗಿ ಮಠದ ಆಡಳಿತ ಮಂಡಳಿ ವಿವಾಹವಾಗಲು ಇಚ್ಛಿಸುವವರಿಗೆ ಮುಂಚಿತವಾಗಿಯೇ ವಧು–ವರ, ತಂದೆ–ತಾಯಿಗೆ ಮಾತ್ರ ಅವಕಾಶ ನೀಡಿತ್ತು. ಇದನ್ನು ಮೀರಿ ಕೆಲವರು ಬಂದಿದ್ದರು. ಆದರೆ, ಮಠದೊಳಗೆ ಅವರನ್ನು ಬಿಟ್ಟುಕೊಳ್ಳದೇ ವಾಪಾಸು ಕಳುಹಿಸಲಾಯಿತು.
ವಧು–ವರರನ್ನು ಹರಸಿದ ಶರಣರು, ‘ಕೋವಿಡ್ ಸಾಂಕ್ರಾಮಿಕ ರೋಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಹೋಗುತ್ತದೆ ಎಂಬುದು ತಿಳಿದಿಲ್ಲ. ಆದ್ದರಿಂದ ಜಗತ್ತನ್ನು ಮೀರಿದ ಕಾಲ ಧರ್ಮವೇ ಇದಕ್ಕೆ ಉತ್ತರ ನೀಡಲಿದೆ’ ಎಂದು ಅಭಿಪ್ರಾಯಪಟ್ಟರು.
‘ಮಾನವನ ಬದುಕಿಗೆ ಕೊರೊನಾ ಎಂಬುದು ಕಟ್ಟುಪಾಡಿಗೆ ಒಳಗಾಗುವಂತೆ ಮಾಡುತ್ತಿದೆ. ಕಣ್ಣಿಗೆ ಕಾಣದ ವೈರಾಣು ವಿಶ್ವದಾದ್ಯಂತ ಎಲ್ಲರ ಬದುಕಿನಲ್ಲಿ ತಳಮಳ ಉಂಟುಮಾಡಿದೆ. ಯಾವಾಗ, ಯಾರಿಗೆ ಬರುತ್ತದೆಯೋ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.
‘ಜಗತ್ತಿನ ಸಕಲ ಜೀವರಾಶಿಗಳು ಸಂತಾನ ಉತ್ಪತ್ತಿ ಮಾಡುತ್ತವೆ. ಆದರೆ, ಮಾನವರಲ್ಲಿ ಸಂತಾನ ಅಭಿವೃದ್ಧಿಗಾಗಿ ಕಲ್ಯಾಣದ ಪ್ರಕ್ರಿಯೆ ಆರಂಭವಾಯಿತು. ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಶ್ರೀಮಠದಲ್ಲಿ ಸರ್ವಧರ್ಮ ಸಾಮೂಹಿಕ ಕಲ್ಯಾಣ ಮಹೋತ್ಸವ ಆಚರಿಸುತ್ತ ಬರಲಾಗಿದೆ’ ಎಂದರು.
***
ಕೋವಿಡ್ ವಿರುದ್ಧದ ಹೋರಾಟದಲ್ಲಿ ಮನೆಯೇ ಮದ್ದು. ಅನಗತ್ಯ ಸಂಚಾರ ಸರಿಯಲ್ಲ. ನಿತ್ಯ ಅರಿಶಿನ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ತುಳಸಿ ಸೇರಿ ಗಿಡಮೂಲಿಕೆ ಪದಾರ್ಥ ಸೇವಿಸಿ.
–ಮಹಾಂತ ರುದ್ರೇಶ್ವರ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.