
ಚಿತ್ರದುರ್ಗ: ‘ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) ಹಾಗೂ ಸೇಂಟ್ ಜಾನ್ಸ್ ತಂಡ ಮಹತ್ವದ ಹೆಜ್ಜೆ ಇಟ್ಟಿದೆ. ಈ ಬೆಳವಣಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಶಾವಾದ ಮೂಡಿಸಿದೆ’ ಎಂದು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಖ್ಯಸ್ಥೆ ಡಾ. ಸುಮನ್ ರಾವ್ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್)ನ 2ನೇ ಸಹ–ವಿನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗಿರುವುದು ಈ ಬದಲಾವಣೆಗೆ ಮುಖ್ಯ ಕಾರಣ. ಈಗ ಆರೋಗ್ಯ ಪ್ರಜ್ಞೆ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದು ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಸಹಕಾರಿಯಾಗಿದೆ’ ಎಂದು ಹೇಳಿದರು.
‘ಮಗುವಿನ ಮೆದುಳಿನ ಶೇ 80ರಷ್ಟು ಬೆಳವಣಿಗೆ ಮೊದಲ ಎರಡು ವರ್ಷಗಳಲ್ಲೇ ನಡೆಯುತ್ತದೆ. ಜನನದ ಸಮಯದಲ್ಲಿ ಇರುವ ಮೆದುಳಿನ ಕೋಶಗಳನ್ನು ಸರಿಯಾದ ರೀತಿಯಲ್ಲಿ ಉತ್ತೇಜಿಸಿದರೆ ಪ್ರತಿ ಮಗುವನ್ನೂ ಪ್ರತಿಭಾವಂತನನ್ನಾಗಿ ಮಾಡಬಹುದು. ಈ ಹಿನ್ನೆಲೆಯಲ್ಲಿ ಮಗುವಿನ ಜೀವನದ ಮೊದಲ 1,000 ದಿನಗಳು ವಿಶೇಷ ಆರೈಕೆ ನೀಡುವ ಮಾದರಿಯನ್ನು ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ’ ಎಂದು ಹೇಳಿದರು.
‘ಆರೋಗ್ಯ ಕ್ಷೇತ್ರದಲ್ಲಿ ವ್ಯವಸ್ಥಿತವಾದ ಯೋಜನೆ ಮತ್ತು ನಿರಂತರವಾದ ಸಣ್ಣ ಬದಲಾವಣೆಗಳು ತಾಯಿ–ಶಿಶು ಮರಣ ದರ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಘಟಿತ ಪ್ರಯತ್ನದ ಫಲವಾಗಿ ಮೂರು ತಿಂಗಳುಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಿಲ್ಲ’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್ ತಿಳಿಸಿದರು.
‘ಕಳೆದ ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಹೆರಿಗೆ ಸಂದರ್ಭದಲ್ಲಿ ಯಾವುದೇ ತಾಯಿ ಮೃತಪಟ್ಟಿಲ್ಲ. ಭೌಗೋಳಿಕವಾಗಿ ಸವಾಲುಗಳಿಂದ ಕೂಡಿದ ಜಿಲ್ಲೆಯಲ್ಲಿ ಇದು ಅತ್ಯಂತ ಗಮನಾರ್ಹ ಸಾಧನೆ. ಈ ಯಶಸ್ಸಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮುಖ್ಯವಾಗಿ ತಳಮಟ್ಟದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂ ನರ್ಸ್‍ಗಳು ಕಾರಣರಾಗಿದ್ದಾರೆ’ ಎಂದರು.
ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಲ್. ಫಾಲಾಕ್ಷಯ್ಯ, ಐಎಪಿ ಅಧ್ಯಕ್ಷ ಡಾ. ಪೃಥ್ವೀಶ್, ಜಿಲ್ಲಾ ಆಸ್ಪತ್ರೆ ಸ್ತ್ರೀರೋಗ ತಜ್ಞ ರವಿಕುಮಾರ್, ಬಸವೇಶ್ವರ ಆಸ್ಪತ್ರೆಯ ನವಜಾತ ಶಿಶು ತಜ್ಞ ಬಸವಂತಪ್ಪ, ರೋಟರಿ ಸಂಸ್ಥೆ ಅಧ್ಯಕ್ಷೆ ಭಾಗ್ಯಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.