ADVERTISEMENT

ಶರಣೆ ಗೊಗ್ಗವ್ವೆ ಐಕ್ಯಮಂಟಪ ಪುನರುಜ್ಜೀವನಗೊಳ್ಳಲಿ

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಲೇಖಕಿ ಜಯಶ್ರೀ ಸುಕಾಲೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:13 IST
Last Updated 18 ಆಗಸ್ಟ್ 2021, 5:13 IST
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.
‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.   

ಸಾಣೇಹಳ್ಳಿ (ಹೊಸದುರ್ಗ): ‘ಬೀದರ್‌ ನಿಂದ 30 ಕಿ.ಮೀ ದೂರದಲ್ಲಿರುವ ಧೂಪದ ಮಹಾಗಾವ್‌ನಲ್ಲಿರುವ ಶರಣೆ ಗೊಗ್ಗವ್ವೆ ಐಕ್ಯಮಂಟಪವನ್ನು ಪುನರುಜ್ಜೀವನಗೊಳಿಸಬೇಕು’ ಎಂದು ಬೀದರ್‌ನ ಲೇಖಕಿ ಜಯಶ್ರೀ ಸುಕಾಲೆ ಒತ್ತಾಯಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 17ನೇ ದಿನವಾದ ಮಂಗಳವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಗೊಗ್ಗವ್ವೆ ವಿಷಯ ಕುರಿತು ಅವರು ಮಾತನಾಡಿದರು.

‘ಮಾನವರಲ್ಲಿ ಮಾನವೀಯತೆಯ ಶಿವಬೀಜವನ್ನು ಬಿತ್ತಿದ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕೇರಳದಿಂದ ಕಲ್ಯಾಣಕ್ಕೆ ಬಂದವಳು ಶರಣೆ ಗೊಗ್ಗವ್ವೆ. ಅಲ್ಲಿ ಆಕೆ ಶಿವಭಕ್ತರಿಗೆ ಧೂಪವನ್ನು ಅರ್ಪಿಸುವ ಕಾಯಕ ಮಾಡುತ್ತಿದ್ದುದರಿಂದ ಧೂಪದ ಗೊಗ್ಗವ್ವೆ ಎಂದೇ ಖ್ಯಾತಳಾಗಿದ್ದಾಳೆ. ಅನುಭವ ಮಂಟಪದಲ್ಲಿ ಬೆರೆತು ನಾಸ್ತಿನಾಥ ಅಂಕಿತದಲ್ಲಿ ವಚನಗಳನ್ನೂ ಬರೆದಿರುವಳು. ಸದ್ಯ ಈಕೆಯ ಆರು ವಚನಗಳು ದೊರೆತಿವೆ. ಅಕ್ಕಮಹಾದೇವಿಯಂತೆ ಈಕೆಯೂ ನಾಸ್ತಿನಾಥ ಅಂದರೆ ಶಿವನನ್ನೇ ಪತಿಯನ್ನಾಗಿ ಸ್ವೀಕರಿಸಿ ಶರಣಸತಿ ಲಿಂಗಪತಿ ಭಾವದ ಪರಮಾನಂದವನ್ನು ಅನುಭವಿಸುವಳು’ ಎಂದು ತಿಳಿಸಿದರು.

ADVERTISEMENT

‘ಕಲ್ಯಾಣ ಕ್ರಾಂತಿಯ ನಂತರ ಬೀದರ್‌ನಿಂದ 30 ಕಿ.ಮೀ ದೂರದಲ್ಲಿರುವ ಮಹಾಗಾವಿ ಎಂಬ ಗ್ರಾಮದಲ್ಲಿ ನೆಲೆಸಿ ಅಲ್ಲಿಯೇ ಐಕ್ಯಳಾದಳು. ಹೀಗಾಗಿ ಆ ಹಳ್ಳಿಗೆ ಧೂಪದ ಮಹಾಗಾವ್ ಎಂಬ ಹೆಸರು ಬಂದಿದೆ. ಈ ಐಕ್ಯ ಮಂಟಪದ ವಿಶೇಷವೆಂದರೆ ಗದ್ದುಗೆಯ ಮೇಲೆ ಚೌಕಾಕಾರದ ಕಲ್ಲನ್ನು ಬಿಟ್ಟು ಬೇರೆ ಯಾವುದೇ ತರಹದ ಮೂರ್ತಿಯಿಲ್ಲ. ಇದಕ್ಕೆ ಕುಂಕುಮ, ಅರಿಸಿಣ, ವಸ್ತ್ರಾಲಂಕಾರ ಮಾಡದೇ ಕೇವಲ ವಿಭೂತಿ ಮಾತ್ರ ಹಚ್ಚುವರು. ಎಲ್ಲ ಜಾತಿ, ಜನಾಂಗದ ಭೇದವಿಲ್ಲದೆ ಮನೆದೇವರು ಎಂದು ಪೂಜಿಸುವರು. ಅನುಯಾಯಿಗಳು ಇಷ್ಟಲಿಂಗ ಪೂಜೆ ಬಿಟ್ಟು ಬೇರೆ ಯಾವುದೇ ದೇವ–ದೇವತೆಗಳ ಪೂಜೆ ಮಾಡುವುದಿಲ್ಲ’ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘12ನೇ ಶತಮಾನಕ್ಕೂ ಪೂರ್ವದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಪುರುಷರ ದಬ್ಬಾಳಿಕೆ ಪ್ರಶ್ನೆ ಮಾಡುವ ಮಹಿಳೆಯರು ಅನುಭವಮಂಟಪದಲ್ಲಿದ್ದರು. ಅವರಲ್ಲಿ ಗೊಗ್ಗವ್ವೆಯೂ ಒಬ್ಬಳು. ಬಾಲ್ಯದಲ್ಲಿಯೇ ವೈರಾಗ್ಯ ತಾಳಿ ಶಿವಭಕ್ತಿಯ ಮಾರ್ಗವನ್ನು ಹಿಡಿದವಳು. ಗೊಗ್ಗವ್ವೆ ತನ್ನ ಜೀವನವನ್ನೇ ಶಿವನಸೇವೆಗೆ ಮುಡುಪಾಗಿಟ್ಟಳು. ಈಕೆಯ ಭಕ್ತಿಯ ಉತ್ಕಟತೆ, ಸಾಮಾಜಿಕ ಕಾಳಜಿ, ಧಾರ್ಮಿಕ ಒಲವು ಅನನ್ಯವಾದುದು. ನಾಸ್ತಿನಾಥ ಎನ್ನುವ ವಚನಾಂಕಿತದಿಂದ ಗೊಗ್ಗವ್ವೆಯ ಆರು ವಚನಗಳು ಲಭ್ಯವಿವೆ. ನಾಸ್ತಿನಾಥ ಎಂದರೆ ರೂಪವಿಲ್ಲದ ಶಿವ. ಇಂದು ಶಿಕ್ಷಣ ಸೌಲಭ್ಯ ಪುರುಷರಷ್ಟೇ ಸಮಾನವಾಗಿ ಮಹಿಳೆಯರಿಗೆ ಸಿಕ್ಕಿದ್ದರೂ ಗೊಗ್ಗವ್ವೆಯಂತಹ ತಾಯಂದಿರನ್ನು ಕಾಣುವುದು ದುಸ್ತರ’ ಎಂದು ತಿಳಿಸಿದರು.

ದಾವಣಗೆರೆಯ ಎಲ್.ಎಸ್. ಪ್ರಭುದೇವ್ ಸ್ವಾಗತಿಸಿದರು.

ಶಿವಸಂಚಾರದ ಕೆ.ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಹಾಗೂ ಸಾಣೇಹಳ್ಳಿಯ ಭರತ ನಾಟ್ಯ ಶಾಲೆಯ ಡಿ.ಎಸ್‌. ಸುಪ್ರಭೆ ಹಾಗೂ ಡಿ.ಜೆ. ಮುಕ್ತ ವಚನ ನೃತ್ಯ
ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.