ADVERTISEMENT

ಕೋವಿಡ್: ಊಟವಿಲ್ಲದೇ ನರಳುತ್ತಿದ್ದವರಿಗೆ ಸಹಕಾರ

ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸುವವರಿಗೆ ಉಚಿತ ಊಟ ವಿತರಿಸಲು ಮುಂದಾದ ಪರಿವರ್ತನಾ ಫೌಂಡೇಶನ್‌ ಟ್ರಸ್ಟ್‌

ಕೆ.ಎಸ್.ಪ್ರಣವಕುಮಾರ್
Published 8 ಮೇ 2021, 3:40 IST
Last Updated 8 ಮೇ 2021, 3:40 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಹೊರಭಾಗದಲ್ಲಿ ರೋಗಿಗಳ ಸಂಬಂಧಿಕರಿಗೆ ಊಟ ವಿತರಿಸುತ್ತಿರುವ ಪರಿವರ್ತನಾ ಫೌಂಡೇಶನ್ ಟ್ರಸ್ಟ್‌ನ ಪದಾಧಿಕಾರಿಗಳು
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಹೊರಭಾಗದಲ್ಲಿ ರೋಗಿಗಳ ಸಂಬಂಧಿಕರಿಗೆ ಊಟ ವಿತರಿಸುತ್ತಿರುವ ಪರಿವರ್ತನಾ ಫೌಂಡೇಶನ್ ಟ್ರಸ್ಟ್‌ನ ಪದಾಧಿಕಾರಿಗಳು   

ಚಿತ್ರದುರ್ಗ: ಕೋವಿಡ್ ದೃಢಪಟ್ಟು ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದ ಹಾಗೂ ಬೇರೆ ಊರಿನಿಂದ ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೆಲ ವೇಳೆ ಊಟ ಸಿಗದೇ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೂ ನೆರವು ನೀಡಲು ‘ಪರಿವರ್ತನಾ ಫೌಂಡೇಶನ್‌ ಟ್ರಸ್ಟ್‌’ ಮುಂದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸಿದರೆ ಊಟ ಪೂರೈಕೆ ಮಾಡಲಿದೆ.

ಮೂರು ದಿನಗಳಿಂದ ಈ ಕಾರ್ಯದಲ್ಲಿ ತೊಡಗಿರುವ ಟ್ರಸ್ಟ್‌ಗೆ ಈವರೆಗೆ 12 ಕರೆಗಳು ಬಂದಿವೆ. ಅವರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ವಿತರಿಸಲಾಗುತ್ತಿದೆ. ಮಧ್ಯಾಹ್ನದ ಊಟಕ್ಕೆ ಬೆಳಿಗ್ಗೆ 10ರೊಳಗೆ, ರಾತ್ರಿ ಊಟಕ್ಕೆ ಸಂಜೆ 4ರೊಳಗೆ ಮಾಹಿತಿ ನೀಡಿದರೆ ಸಾಕು. ತಲುಪಿಸುವ ಕೆಲಸವನ್ನು ಟ್ರಸ್ಟ್‌ ಮಾಡುತ್ತದೆ. ಸದ್ಯಕ್ಕೆ ಚಿತ್ರದುರ್ಗ ನಗರಕ್ಕೆ ಮಾತ್ರ ಈ ಸೇವೆಯನ್ನು ಸೀಮಿತಗೊಳಿಸಲಾಗಿದೆ.

ಕೋವಿಡ್ ದೃಢಪಟ್ಟು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಳ್ಳಕೆರೆ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಎರಡು ದಿನಗಳಿಂದ ಆಹಾರ ಸಿಗದೇ ಕಂಗಾಲಾಗಿದ್ದರು. ಸಂಬಂಧಿಕರಿಗೆ ಹೇಳಿದರು ಸ್ಪಂದನೆ ಸಿಕ್ಕಿರಲಿಲ್ಲ. ವಾಟ್ಸ್‌ಆ್ಯಪ್‌ ಸೇರಿ ಇತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂದೇಶ ಗಮನಿಸಿ ಕೊನೆಗೆ ಟ್ರಸ್ಟ್‌ ಅನ್ನು ಸಂಪರ್ಕಿಸಿದ್ದಾರೆ. ತಿಂಡಿ ಹೊರತುಪಡಿಸಿ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ADVERTISEMENT

ನಗರ ವ್ಯಾಪ್ತಿಯ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಊಟ ನೀಡಲಾಗುತ್ತಿದೆ. ಆದರೆ, ಕೆಲ ಖಾಸಗಿ ಆಸ್ಪತ್ರೆಯವರು ಕೆಲಸದ ಒತ್ತಡದ ಕಾರಣಕ್ಕೆ ತಿಂಡಿ, ಊಟದ ವ್ಯವಸ್ಥೆಗೆ ನೀವು ಕುಟುಂಬ ಇಲ್ಲವೇ ಸ್ನೇಹಿತರನ್ನು ಸಂಪರ್ಕಿಸಿ ತರಿಸಿಕೊಳ್ಳಬೇಕು. ಅದನ್ನು ಕೊಡುವ ಜವಾಬ್ದಾರಿ ಮಾತ್ರ ನಮ್ಮದು ಎಂಬುದಾಗಿ ದಾಖಲಾತಿಗೂ ಮೊದಲೇ ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದಾಗಿ ಕೆಲವರು ಟ್ರಸ್ಟ್‌ ಸಂಪರ್ಕಿಸುತ್ತಿದ್ದಾರೆ.

ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಟ್ರಸ್ಟ್‌ನ ಪದಾಧಿಕಾರಿಗಳು ಮುಂದಾಗಿದ್ದಾರೆ. ಕೊರೊನಾ ಸೋಂಕಿತರ ಪೈಕಿ ಯಾರೇ ಕರೆ ಮಾಡಿದರೂ ಸ್ಪಂದಿಸಲು ಮುಂದಾಗುತ್ತಿದ್ದಾರೆ.

ವಿತರಣೆ ಹೇಗೆ?: ಟ್ರಸ್ಟ್‌ನಲ್ಲಿ 30 ಸದಸ್ಯರಿದ್ದಾರೆ. ಅದರಲ್ಲಿ 20 ಜನ ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಕೆಲ ಖಾಸಗಿ ಆಸ್ಪತ್ರೆಯ ಮುಂಭಾಗದವರೆಗೂ ಊಟ ತೆಗೆದುಕೊಂಡು ಹೋಗುತ್ತಾರೆ. ನಿಮ್ಮ ಊಟದ ಪೊಟ್ಟಣ ಬಂದಿದೆ. ಯಾರನ್ನಾದರೂ ಕಳುಹಿಸಿ, ಇಂತಹ ಸ್ಥಳದಲ್ಲಿ ಇಟ್ಟಿದ್ದೇವೆ ಎಂಬುದಾಗಿ ಕರೆ ಮಾಡಿದವರಿಗೆ ಮೊಬೈಲ್‌ ಮೂಲಕ ಸಂಪರ್ಕಿಸುತ್ತಾರೆ. ಆಸ್ಪತ್ರೆಯ ನರ್ಸ್‌ ಅಥವಾ ಸಿಬ್ಬಂದಿ ಊಟ ತೆಗೆದುಕೊಂಡು ಕೊಡುತ್ತಿದ್ದಾರೆ. ಇನ್ನೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ವಿಳಾಸ ಪಡೆದು ಗೇಟ್‌ ಬಳಿ ಇಟ್ಟು ಬರುತ್ತಿದ್ದಾರೆ.

ಊಟದ ಜತೆಗೆ ಡ್ರೈಫ್ರುಟ್ಸ್‌, ತರಕಾರಿ, ಹಣ್ಣು, ಮೊಟ್ಟೆ ಹೀಗೆ ನಿತ್ಯ ಪೌಷ್ಟಿಕಾಂಶದ ಆಹಾರವನ್ನು ಕೂಡ ನೀಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಬಳಿ ಒಳರೋಗಿಗಳ ಸಂಬಂಧಿಕರು ಪರದಾಡುತ್ತಿರುವುದನ್ನು ಗಮನಿಸಿರುವ ಪದಾಧಿಕಾರಿಗಳು 100 ಜನರಿಗೆ ಮಧ್ಯಾಹ್ನದ ಊಟ ವಿತರಿಸಲು ಮುಂದಾಗಿದ್ದಾರೆ. ಈ ಸೇವೆ ಎರಡು ದಿನಗಳಿಗೊಮ್ಮೆ ಸಿಗಲಿದೆ.

ರುಚಿ, ಗುಣಮಟ್ಟದಲ್ಲಿ ವ್ಯತ್ಯಾಸವಿದ್ದರೆ ಸಂದೇಶದಲ್ಲಿ ತಿಳಿಸಬಹುದು. ಇನ್ನೂ ಹೆಚ್ಚಿನ ಊಟ ಬೇಕು ಎಂದವರಿಗೆ ಹೆಚ್ಚು, ಕಡಿಮೆ ಬೇಕು ಎಂದವರಿಗೆ ಕಡಿಮೆ ಊಟ ಕಳುಹಿಸುತ್ತಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷ ಎಂ. ಕಾರ್ತಿಕ್‌, ಕಾರ್ಯದರ್ಶಿ ಸಿ. ಹರೀಶ್, ಸಂಘಟನಾ ಕಾರ್ಯದರ್ಶಿ ಸುನೀಲ್‌, ನಿರ್ದೇಶಕರಾದ ಅವಿನಾಶ್, ವರದರಾಜು, ಸುಪ್ರೀತ್ ಸೇರಿ ಹಲವರು ಈ ಕಾರ್ಯದಲ್ಲಿಸಕ್ರಿಯರಾಗಿದ್ದಾರೆ.

ಹಾಸಿಗೆಗಳಿಗೂ ಸಂಪರ್ಕಿಸಬಹುದು
‘ಐಸಿಯು, ಆಮ್ಲಜನಕ ಸಹಿತ ಹಾಸಿಗೆಗಳು ಯಾವ ಆಸ್ಪತ್ರೆಗಳಲ್ಲಿ ಖಾಲಿಯಾಗುತ್ತಿವೆ ಎಂಬ ಮಾಹಿತಿಯನ್ನು ಮೂರು ದಿನಗಳಿಂದ ಪಡೆಯಲು ಮುಂದಾಗಿದ್ದೇವೆ. ಯಾರಾದರೂ ಕರೆ ಮಾಡಿ ಸಂಪರ್ಕಿಸಿದರೆ, ಎಲ್ಲಿ ಖಾಲಿ ಇವೆ ಎಂಬ ಮಾಹಿತಿ ಕೊಡುತ್ತೇವೆ. ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುವವರಿಗೆ ಆಂಬುಲೆನ್ಸ್‌ಗೆ ಕರೆ ಮಾಡಿ ರೋಗಿಯ ವಿಳಾಸ ಕೊಡುತ್ತಿದ್ದೇವೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ಕಾರಣಕ್ಕೆ ಅನೇಕರಿಗೆ ತೊಂದರೆಯಾಗಿದೆ. ರೋಗಿಗಳಿಗೆ ನೆರವು ನೀಡಬೇಕು ಎಂಬ ಆಲೋಚನೆ ಮೂಡಿತು. ಅದಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಸೋಂಕಿತರಿಗೆ ಊಟಕ್ಕೆ ತೊಂದರೆ ಆದಲ್ಲಿ 9844563094, 9986818001, 9743584156, 9739328218 ಈ ಮೊಬೈಲ್‌ ಸಂಖ್ಯೆಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸಿದರೆ ಸ್ಪಂದಿಸಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.