ADVERTISEMENT

ಕಾಯಕ ಜೀವಿಗಳೇ ಕಲ್ಯಾಣಕ್ರಾಂತಿಯ ಜೀವಾಳ: ವೈದ್ಯಾಧಿಕಾರಿ ಡಾ.ರಾಜಶೇಖರ ನಾರನಾಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 3:00 IST
Last Updated 11 ಆಗಸ್ಟ್ 2021, 3:00 IST
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ನಡೆಯುತ್ತಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದೆ ವಚನನೃತ್ಯ ಪ್ರದರ್ಶಿಸಿದರು. 
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ನಡೆಯುತ್ತಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದೆ ವಚನನೃತ್ಯ ಪ್ರದರ್ಶಿಸಿದರು.    

ಸಾಣೇಹಳ್ಳಿ(ಹೊಸದುರ್ಗ): ‘ಶ್ರಮಿಕ ವರ್ಗದ ಕಾಯಕ ಜೀವಿಗಳೇ ಕಲ್ಯಾಣ ಕ್ರಾಂತಿಯ ಜೀವಾಳ. ವಿದ್ಯೆ ಕೆಲವರ ಗುತ್ತಿಗೆಯಾಗಿದ್ದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ ಕಲಿತದ್ದು ಪವಾಡವೇ ಸರಿ’ ಎಂದು ಗಂಗಾವತಿಯ ವೈದ್ಯಾಧಿಕಾರಿ ಡಾ. ರಾಜಶೇಖರ ನಾರನಾಳ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ಮತ್ತೆ ಕಲ್ಯಾಣ ಅಂತರ್ಜಾಲ ಕಾರ್ಯಕ್ರಮದ 10ನೇ ದಿನವಾದ ಮಂಗಳವಾರ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಾದಾರ ಧೂಳಯ್ಯ’ ವಿಷಯ ಕುರಿತು ಅವರು ಮಾತನಾಡಿದರು.

‘ಅನುಭವ ಮಂಟಪದ 770 ಅಮರಗಣಗಳಲ್ಲಿ ಶ್ರಮಿಕರೇ ಹೆಚ್ಚು. ಅವರು ಒಳ-ಹೊರಗಿನ ಹಂಗಿಲ್ಲದೆ, ಅಸ್ಪೃಶ್ಯತೆಯ ಭೇದವಿಲ್ಲದೆ ಬಾಳಿ ಬದುಕಿದವರು. ಮಾದಾರ ಧೂಳಯ್ಯನವರದು ಚರ್ಮ ಹದ ಮಾಡಿ ಚಪ್ಪಲಿ ಮಾಡುವ ಕಾಯಕ. ಈ ಕಾಯದಲ್ಲಿ ಶರಣತ್ವ ಪಡೆದ ನಿಜ ಶರಣ. ಈ ವೈಚಾರಿಕ, ವೈಜ್ಞಾನಿಕ ನಿಜಶರಣನ ಜೀವನದ, ಕೌಟುಂಬಿಕ ಹಿನ್ನೆಲೆಯ ದಾಖಲೆಗಳು ಸಿಗದಿರುವುದು ದುರದೃಷ್ಟಕರ ಸಂಗತಿ’ ಎಂದರು.

ADVERTISEMENT

‘ಷಡಕ್ಷರಿ ಪಂಡಿತನ ಅಂಗೋದಕ ಮಹಿಮೆ ಎನ್ನುವ ಕೃತಿಯಲ್ಲಿ ಮಾದಾರ ಧೂಳಯ್ಯ ಸ್ನಾನ ಮಾಡಿದ ನೀರಿನಿಂದ ವಿವಿಧ ರೀತಿಯ ಚರ್ಮರೋಗಗಳಿಂದ ಬಳಲುತ್ತಿದ 300 ಜನ ಬ್ರಾಹ್ಮರು ಗುಣವಾದ ಪವಾಡದ ಮಾಹಿತಿ ಬರುತ್ತದೆ. ಇಂಥ ಪವಾಡಗಳಿಗೆ ಹೊರತಾದ ದಾಖಲೆಗಳ ಸಂಶೋಧನೆ ಅವಶ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ನಡೆದ ಸಮಾಜೋದ್ಧಾರ್ಮಿಕ ಪರಿವರ್ತನೆಯ ಕಾರ್ಯ 21ನೇ ಶತಮಾನದಲ್ಲೂ ಸಾಧ್ಯವಾಗಿಲ್ಲ. ಇಂದು ಮನುಷ್ಯ ಆಧುನಿಕ ತಂತ್ರಜ್ಞಾನಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಮನುಷ್ಯನಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿದಿಲ್ಲ. ಆಧುನಿಕ ಉಪಕರಣಗಳಿಂದಾಗಿ ಪ್ರತಿ ಮನೆಯ ಗೋಡೆಗೂ ಕಿವಿ, ಕಣ್ಣು, ಮೂಗು ಬಂದು, ಒಬ್ಬರು ಮತ್ತೊಬ್ಬರನ್ನು ಅನುಮಾನದಿಂದ ನೊಡುವ ವಾತಾವರಣ ಸೃಷ್ಟಿಯಾಗಿರುವುದು ದುರದೃಷ್ಟಕರ ಸಂಗತಿ’ ಎಂದು ತಿಳಿಸಿದರು.

ಯಳ್ಳಂಬೆಳಸೆಯ ವೈ.ವಿ. ದಿವ್ಯಾ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಕ್ಷಾಯಣಿ, ಎಚ್.ಎಸ್. ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನನೃತ್ಯ
ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.