
ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರದ ದುರ್ಗದಸಿರಿ ರೈತ ಉತ್ಪಾದಕ ಕಂಪನಿಯ ಸಿರಿಧಾನ್ಯ ಸಂಸ್ಕರಣಾ ಘಟಕದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸಾವೆ ಹಾಗೂ ನವಣೆ ಖರೀದಿಗೆ ಶುಕ್ರವಾರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ತಾಲ್ಲೂಕಿನಲ್ಲಿ 40,000 ಕ್ವಿಂಟಲ್ ಖರೀದಿಗೆ ಸರ್ಕಾರ ಅವಕಾಶ ನೀಡಿದೆ, ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಸಾವೆ ಮತ್ತು ನವಣೆ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಲ್‍ಗೆ ಕೇಂದ್ರದಿಂದ ₹4,886 ಹಾಗೂ ರಾಜ್ಯ ಸರ್ಕಾರದಿಂದ ₹114 ಸೇರಿದಂತೆ ಒಟ್ಟು ₹5,000 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
‘ನೋಂದಣಿಗೆ ಡಿ.15 ಕೊನೆಯ ದಿನವಾಗಿದೆ. ಶನಿವಾರದವರೆಗೆ 860 ರೈತರು 20,000 ಕ್ವಿಂಟಲ್ ಸಾವೆ ಖರೀದಿಗೆ ನೋಂದಣಿ ಮಾಡಿಸಿದ್ದಾರೆ. ಇನ್ನೂ 20,000 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ಜನವರಿಯಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ನೋಂದಣಿಗೆ ಬರುವ ರೈತರಿಗೆ ತೊಂದರೆಯಾಗದಂತೆ ನೀರು, ನೆರಳು, ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಗಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ದುರ್ಗದಸಿರಿ ರೈತ ಉತ್ಪಾದಕರ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮಾಹಿತಿ ನೀಡಿದರು.
ಸಿರಿದಾನ್ಯಗಳ ನಾಡು ಎಂದು ಹೆಸರಾಗಿರುವ ಹೊಸದುರ್ಗ ತಾಲ್ಲೂಕಿನ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಪ್ರದೇಶ ಹೆಚ್ಚು. ಬೆಂಬಲ ಬೆಲೆಯಡಿ ಖರೀದಿಸುವಂತೆ ಪ್ರಸ್ತಾಪಿಸಿ ಶಾಸಕ ಬಿ.ಜಿ. ಗೋವಿಂದಪ್ಪ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈಗ ಖರೀದಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಜ.1 ರಿಂದ ಖರೀದಿ ಆರಂಭ: ಜನವರಿ 1 ರಿಂದ ಮಾರ್ಚ್ 31 ರವರೆಗೆ ಸಿರಿಧಾನ್ಯ ಖರೀದಿ ನಡೆಯಲಿದೆ. ರೈತರು ಎಫ್.ಐ.ಡಿ. ಹೊಂದಿರಬೇಕು. ಅದರಲ್ಲಿ ಕಡ್ಡಾಯವಾಗಿ ಸಾವೆ ಅಥವಾ ನವಣೆ ಎಂದು ನಮೂದಿಸಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.