ಚಿತ್ರದುರ್ಗ: ‘ಗಣಿಗಾರಿಕೆಗೆ ಅನುಮತಿ ನೀಡಲು ಇರುವ ನಿಯಮಾವಳಿಗಳನ್ನು ಸರಳಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕ ಗಣಿ ಮಾಫಿಯಾದಲ್ಲಿ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದೆ’ ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಆರೋಪಿಸಿದರು.
ರಾಜ್ಯ ಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅತ್ಯಂತ ಸುಲಭವಾಗಿ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ. ಅನುಮತಿಗಾಗಿ ಈಗ ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆಯೇ ಬೇಕಾಗಿಲ್ಲ. ಅತೀ ಸುಲಭವಾಗಿ ಅನುಮತಿ ಪಡೆದು ಪ್ರಾಕೃತಿಕ ಸಂಪನ್ಮೂಲವನ್ನು ಲೂಟಿ ಮಾಡಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ ಗಣಿ ಲೂಟಿಕೋರರಿಗೆ ಬುದ್ಧಿ ಕಲಿಸುವುದಾಗಿ ಹೇಳಿದ್ದರು. ಪಾಕೃತಿಕ ಸಂಪನ್ಮೂಲವನ್ನು ರಕ್ಷಿಸುವುದಾಗಿ ಮಾತು ಕೊಟ್ಟಿದ್ದರು. ಮುಖ್ಯಮಂತ್ರಿಯಾದ ನಂತರ ತಾವು ಕೊಟ್ಟಿದ್ದ ಮಾತು ಮರೆತಿದ್ದಾರೆ. ಬೇಕಾಬಿಟ್ಟಿಯಾಗಿ ಗಣಿಗಾರಿಕೆಗೆ ನಡೆಸಲು ಅನುಮತಿ ನೀಡುತ್ತಿದ್ದಾರೆ’ ಎಂದು ದೂರಿದರು.
‘ಅಕ್ರಮ ಗಣಿಗಾರಿಕೆ ನಡೆಸಿ ಜೈಲಿಗೆ ಹೋದವರಿಗೆ ಎಲ್ಲ ಪಕ್ಷಗಳೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತಿವೆ. ಆರೋಪಿಗಳು ಶಾಸಕರಾಗಿ ಗೆದ್ದು ಸಂಪನ್ಮೂಲಗಳನ್ನು ಮತ್ತಷ್ಟು ಲೂಟಿ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.