
ಹಿರಿಯೂರು: ಸಮಾಜದ ಆಗುಹೋಗುಗಳ ಅರಿವಿಲ್ಲದೇ, ನೋವು–ನಲಿವುಗಳ ಪರಿವಿಲ್ಲದೇ, ಹೆತ್ತವರಿಂದ ದೂರ ಇರುವ ಬುದ್ಧಿಮಾಂದ್ಯ ಮಕ್ಕಳ ಸೇವೆಯನ್ನು ನಿಸ್ವಾರ್ಥದಿಂದ, ಅಂತಃಕರಣ ಶುದ್ಧಿಯಿಂದ ಮಾಡಿದಲ್ಲಿ ನೂರು ದೇವರಿಗೆ ಪೂಜೆ ಸಲ್ಲಿಸಿದ ಪುಣ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದ ಪ್ರವಾಸಿ ಮಂದಿರ ವೃತ್ತ ಸಮೀಪದ ಸಿದ್ದೇಶ್ವರ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಶನಿವಾರ ಭೇಟಿ ನೀಡಿದ್ದ ಅವರು, ಸಮಯ ಲೆಕ್ಕಿಸದೇ ಮಕ್ಕಳ ಜೊತೆ ಸಂವಹನ ನಡೆಸಿದರು. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಮಕ್ಕಳ ಪ್ರಶ್ನೆಗಳಿಗೂ ಖುಷಿಯಿಂದ ಉತ್ತರಿಸಿದರು.
‘ಇಲ್ಲಿನ ಮಕ್ಕಳು ಎಲ್ಲರಂತೆ ಸಹಜವಾಗಿ ಬದುಕಬೇಕು. ಇದಕ್ಕೆ ಅಗತ್ಯವಿರುವ ತಾಂತ್ರಿಕ ನೆರವನ್ನು ಒದಗಿಸಲು ಸಿದ್ಧನಿದ್ದೇನೆ. ಕೆಲವು ಮಕ್ಕಳು ಸಾಮಾನ್ಯರಂತೆ ಚಿಂತನೆ ನಡೆಸಿರುವುದು ಅವರ ವರ್ತನೆಗಳಿಂದ ಕಂಡುಬರುತ್ತಿದೆ. ಶಿಕ್ಷಕರಿಗೂ ಅಪಾರ ತಾಳ್ಮೆ ಬೇಕು. ಮಗುವಿನಂತಹ ಮನಸ್ಸು ಇದ್ದರೆ ಮಾತ್ರ ಮಕ್ಕಳಲ್ಲಿ ಗಮನಾರ್ಹ ಬೆಳವಣಿಗೆ ಕಾಣಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಮಕ್ಕಳಿಗೆ ಉತ್ತಮ ಸೌಲಭ್ಯ ಕೊಡಿ. ಗುಣಮಟ್ಟದ ಶಿಕ್ಷಣ ನೀಡಿ ಸಾಮಾನ್ಯ ಮಕ್ಕಳಂತೆ ಬದಲಾಯಿಸಲು ಯತ್ನಿಸಿ. ಇದು ನನ್ನ ಬದುಕಿನ ಅತ್ಯಂತ ಪುಣ್ಯದ ದಿನ. ಈ ಮಕ್ಕಳೊಡನೆ ಬೆರೆಯುವ ಅವಕಾಶ ಸಿಕ್ಕಿತು. ಸರ್ಕಾರದ ಕಡೆಯಿಂದ, ವೈಯಕ್ತಿಕವಾಗಿ ಎಲ್ಲ ರೀತಿಯ ನೆರವು ಕೊಡಿಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.
ನಗರಸಭೆ ಪೌರಾಯುಕ್ತ ಎ.ವಾಸೀಂ, ವಸತಿ ಶಾಲೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.