ಮೊಳಕಾಲ್ಮುರು: ‘ಬಾಲ್ಯವಿವಾಹದಿಂದಾಗಿ ಹೆಣ್ಣುಮಕ್ಕಳು ಭವಿಷ್ಯದಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಾಲ್ಯವಿವಾಹಕ್ಕೆ ಅವಕಾಶ ನೀಡಬಾರದು’ ಎಂದು ಸಿಡಿಪಿಒ ನವೀನ್ ಕುಮಾರ್ ಹೇಳಿದರು.
ತಮ್ಮೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘18 ವರ್ಷದ ಒಳಗಿನ ಹೆಣ್ಣು, 21 ವರ್ಷದ ಒಳಗಿನ ಗಂಡು ಮಕ್ಕಳಿಗೆ ಮದುವೆ ಮಾಡುವುದನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಇದಕ್ಕೆ ಸಾಮಾಜಿಕ, ಆರೋಗ್ಯದ ಹಿತದೃಷ್ಟಿ ಮುಖ್ಯ ಕಾರಣವಾಗಿದೆ. ಬಾಲ್ಯ ವಿವಾಹ ಮಾಡಿದಲ್ಲಿ ಅಪೌಷ್ಟಿಕ ಮಗು ಜನನ, ಹೆರಿಗೆ ಸಮಯದಲ್ಲಿ ತಾಯಿ ಮರಣ ಸಾಧ್ಯತೆ, ಶಿಕ್ಷಣ ಪ್ರಗತಿ ಕುಂಠಿತವಾಗುವ ಸಾಧ್ಯತೆ ಇದೆ. ವಿವಾಹವಾಗುವ ಗಂಡು ಹಾಗೂ ಪಾಲಕರ ವಿರುದ್ಧವೂ ಕಾನೂನು ಕ್ರಮಕ್ಕೆ ಅವಕಾಶವಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.
ಅಂಗನವಾಡಿ ಮೇಲ್ವಿಚಾರಕಿ ಲೀಲಾಬಾಯಿ, ಮುಖ್ಯಶಿಕ್ಷಕ ಯಲ್ಲಪ್ಪ ಹಾಗೂ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.