ADVERTISEMENT

ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಶಾಸಕ ಎಂ.ಚಂದ್ರಪ್ಪ ಅಧಿಕಾರ ಸ್ವೀಕಾರ

ಸಾರಿಗೆ ಕ್ಷೇತ್ರದಲ್ಲಿ ಗರಿಗೆದರಿದ ನಿರೀಕ್ಷೆಗಳು

ಸಾಂತೇನಹಳ್ಳಿ ಸಂದೇಶ ಗೌಡ
Published 1 ಸೆಪ್ಟೆಂಬರ್ 2020, 13:33 IST
Last Updated 1 ಸೆಪ್ಟೆಂಬರ್ 2020, 13:33 IST
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಂಗಳವಾರ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಂಗಳವಾರ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು   

ಹೊಳಲ್ಕೆರೆ: ಶಾಸಕ ಎಂ.ಚಂದ್ರಪ್ಪ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದು, ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಸಾರಿಗೆ ವ್ಯವಸ್ಥೆ ಸುಧಾರಿಸುವ ನಿರೀಕ್ಷೆಗಳು ಗರಿಗೆದರಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಚ್ಚು ಆಪ್ತರಾಗಿದ್ದ ಶಾಸಕ ಎಂ.ಚಂದ್ರಪ್ಪ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಮುಖ್ಯಮಂತ್ರಿ ಅವರು ಚಂದ್ರಪ್ಪ ಅವರನ್ನು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಪ್ರಬಲ ನಿಗಮವಾದರೂ, ಸಚಿವಾಕಾಂಕ್ಷಿಯಾಗಿದ್ದ ಚಂದ್ರಪ್ಪ ಅಧಿಕಾರ ಸ್ವೀಕರಿಸಲು ಆಸಕ್ತಿ ತೋರಿರಲಿಲ್ಲ. ಈಗ ಒಲ್ಲದ ಮನಸ್ಸಿನಿಂದಲೇ ಅಧಿಕಾರ ಸ್ವೀಕರಿಸಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಯಾವುದೇ ಕ್ಷೇತ್ರವಾದರೂ ಬದ್ಧತೆಯಿಂದ ಕೆಲಸ ಮಾಡುವ ಚಂದ್ರಪ್ಪ ಅವರು ಸಾರಿಗೆ ಕ್ಷೇತ್ರದಲ್ಲಿಯೂ ಸುಧಾರಣೆ ತರುವ ಭರವಸೆ ಮೂಡಿಸಿದ್ದಾರೆ.

‘ಚಿತ್ರದುರ್ಗ ರಾಜ್ಯದ ಮಧ್ಯಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ-48 ಹಾಗೂ ರಾಷ್ಟ್ರೀಯ ಹೆದ್ದಾರಿ-13 ರಲ್ಲಿರುವ ಪ್ರಮುಖ ನಗರವಾಗಿದೆ. ಆದರೂ ಸಾರಿಗೆ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಳೆಯದಾಗಿದ್ದು, ಡಿಪೊ ಹತ್ತಿರ ಇರುವ 13 ಎಕರೆ ಜಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಆಗಬೇಕಿದೆ. ಹಿಂದುಳಿದಿರುವ ಮೊಳಕಾಲ್ಮುರು ಪಟ್ಟಣದಲ್ಲಿ ಬಸ್ ನಿಲ್ದಾಣ, ಡಿಪೊ ನಿರ್ಮಾಣ ಆಗಬೇಕು. ಹಿರಿಯೂರಿನಲ್ಲಿ 20 ಎಕರೆ ಜಾಗ ಮೀಸಲಿಟ್ಟು, 10 ವರ್ಷಗಳಾದರೂ ಡಿಪೊ ಆಗಿಲ್ಲ. ಹೊಳಲ್ಕೆರೆಯಲ್ಲಿಯೂ ಡಿಪೊ ತಲೆ ಎತ್ತಬೇಕಿದೆ’ ಎನ್ನುತ್ತಾರೆ ರೈತ ಸಂಘದ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ.

ADVERTISEMENT

ಜಿಲ್ಲೆಯಿಂದ ಚೆನ್ನೈ, ಹೈದರಾಬಾದ್, ಮುಂಬೈ ಮತ್ತಿತರ ಹೊರರಾಜ್ಯಗಳ ನಗರಗಳಿಗೆ ನೇರ ಬಸ್ ಸಂಚಾರ ಆರಂಭಿಸಬೇಕು. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಬೇಕು. ಜಿಲ್ಲೆಗೆ ಹೆಚ್ಚು ವೋಲ್ವೊ ಬಸ್‌ಗಳನ್ನು ಒದಗಿಸಬೇಕು. ರೈತರು, ವ್ಯಾಪಾರಿಗಳು, ಅಂಗವಿಕಲರು, ವೃದ್ಧರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಾಮೀಣ ಸಾರಿಗೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.