ADVERTISEMENT

ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌ ಆಸ್ತಿ ಘೋಷಣೆ: ₹ 16 ಕೋಟಿಯ ಕೃಷಿಯೇತರ ಭೂಮಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 14:11 IST
Last Updated 23 ನವೆಂಬರ್ 2021, 14:11 IST
ಕೆ.ಎಸ್‌.ನವೀನ್‌
ಕೆ.ಎಸ್‌.ನವೀನ್‌   

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಚಿತ್ರದುರ್ಗ–ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್.ನವೀನ್‌, ₹ 16 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ.

₹ 26 ಕೋಟಿ ಸ್ಥಿರಾಸ್ತಿ ಹಾಗೂ ₹ 40 ಲಕ್ಷ ಚರಾಸ್ತಿ ಹೊಂದಿದ್ದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೃಷಿಯೇತರ ಭೂಮಿಯ ಪಾಲೇ ಹೆಚ್ಚು. ₹ 6.1 ಕೋಟಿ ಸಾಲ ಇರುವುದಾಗಿಯೂ ತೋರಿಸಿದ್ದಾರೆ.

ಚಿತ್ರದುರ್ಗದ ವಿ.ಪಿ.ಬಡಾವಣೆಯ ನಿವಾಸಿಯಾಗಿರುವ ನವೀನ್‌, ಬಿ.ಕಾಂ ಪದವೀಧರರು. ಬೆಂಗಳೂರಿನ ಸದಾಶಿವ ನಗರದಲ್ಲಿ ಮನೆ, ಹೆಬ್ಬಾಳದ ಆರ್‌ಎಂಝಡ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಇದೆ. ಹೊಳಲ್ಕೆರೆ ತಾಲ್ಲೂಕಿನ ಎನ್‌.ಜಿ.ಹಳ್ಳಿಯಲ್ಲಿ ನಾಲ್ಕು ಎಕರೆ ಹಾಗೂ ಹೊಸದುರ್ಗ ತಾಲ್ಲೂಕಿನ ತುಮ್ಮಿನಕೆರೆ ಗ್ರಾಮದಲ್ಲಿ ಎರಡು ಎಕರೆ ಕೃಷಿ ಭೂಮಿ ಇದೆ. ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ADVERTISEMENT

ಪತ್ನಿ ದೀಪಾ ಅವರ ಬಳಿ ₹ 12 ಲಕ್ಷ ಮೌಲ್ಯದ ಚರಾಸ್ತಿ ಇದೆ. ₹ 8 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಹಾಗೂ 2 ಕೆ.ಜಿ ಬೆಳ್ಳಿ ಇವರ ಕುಟುಂಬದಲ್ಲಿದೆ. ಪತಿ–ಪತ್ನಿ ಕೈಯಲ್ಲಿ ತಲಾ ₹ 5 ಲಕ್ಷ ಹಾಗೂ ಹಿರಿಯ ಪುತ್ರಿ ₹ 2.5 ಲಕ್ಷ ಹಣ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.