ADVERTISEMENT

‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 10:05 IST
Last Updated 16 ಜುಲೈ 2018, 10:05 IST

ಚಿತ್ರದುರ್ಗ: ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ರೂಪಿಸಿದ ‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ಗೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೋಮವಾರ ಚಾಲನೆ ನೀಡಿದರು.

ಒನಕೆ ಓಬವ್ವ ಸ್ತ್ರೀಶಕ್ತಿ ಒಕ್ಕೂಟವು ಕ್ಯಾಂಟೀನ್‌ ಮುನ್ನಡೆಸಲಿದ್ದು, 11 ಸದಸ್ಯರು ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಗರದ ವಿವಿಧೆಡೆ ಸೇವೆ ಒದಗಿಸಲಿದೆ. ಸಮೀಕ್ಷೆ ನಡೆಸಿ ಸ್ಥಳ ಹಾಗೂ ಸಮಯ ನಿಗಿದಪಡಿಸಲಾಗಿದೆ.

ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಲು ‘ಸಂಚಾರಿ ಕ್ಯಾಂಟೀನ್‌’ ಯೋಜನೆಯನ್ನು ರಾಜ್ಯ ಸರ್ಕಾರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿತ್ತು. ವಿಧಾನಸಭಾ ಚುನಾವಣೆ ಎದುರಾಗಿದ್ದರಿಂದ ಚಿತ್ರದುರ್ಗದಲ್ಲಿ ಈ ಸೇವೆಗೆ ಚಾಲನೆ ಸಿಗುವುದು ತಡವಾಯಿತು. ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗಿರುವ ಸಂಚಾರಿ ಕ್ಯಾಂಟೀನ್‌ ವ್ಯವಸ್ಥೆಯನ್ನು ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಲು ನಿಗಮ ಉತ್ಸುಕವಾಗಿದೆ.

ADVERTISEMENT

ಕ್ಯಾಂಟೀನ್‌ ಶುರು ಮಾಡಲು ಸ್ತ್ರೀಶಕ್ತಿ ಒಕ್ಕೂಟಕ್ಕೆ ನಿಗಮ ಬಡ್ಡಿರಹಿತ ಸಾಲ ನೀಡಿದೆ. ಕ್ಯಾಂಟೀನ್‌ ಶುರುವಾದ ಆರು ತಿಂಗಳ ಬಳಿಕ ಸಾಲ ಮರುಪಾವತಿಗೆ ಸೂಚಿಸಿದೆ. ಸಂಚಾರಿ ವಾಹನ ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದಲ್ಲಿ ಅಡುಗೆ ಮನೆ ನಿರ್ಮಿಸಲಾಗಿದೆ. ಕ್ಯಾಂಟೀನ್‌ಗೆ ಅಗತ್ಯವಿರುವ ಆಹಾರವನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. 11 ಸದಸ್ಯರಲ್ಲಿ ಮೂವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಉಳಿದ 8 ಸದಸ್ಯರು ಪಾಳಿವಾರು ಕೆಲಸ ಮಾಡುತ್ತಿದ್ದಾರೆ. ಇಡ್ಲಿ, ದೋಸೆ, ಟೀ, ಕಾಫಿಯನ್ನು ಸಂಚಾರಿ ವಾಹನದಲ್ಲಿ ಸಿದ್ಧಪಡಿಸಿ ನೀಡಲಾಗುತ್ತದೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಪಾತ್ರೆ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸ್ಟೌ, ಸಿಲಿಂಡರ್‌ ಹಾಗೂ ನೀರಿನ ಟ್ಯಾಂಕ್‌ ಕೂಡ ಇರುತ್ತವೆ. ಆಹಾರ ವಿತರಿಸಲು ಮೂವರು ಸದಸ್ಯರು ವಾಹನದೊಳಗೆ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಕೈತೊಳೆಯಲು ವಾಷ್‌ಬೇಸಿನ್‌ ಕೂಡ ಇರುತ್ತದೆ.

ಸಂಚಾರಿ ವಾಹನ ನಿಗದಿತ ಸ್ಥಳಕ್ಕೆ ತೆರಳಿ ಕ್ಯಾಂಟೀನ್‌ ತೆರೆಯುತ್ತದೆ. ಗ್ರಾಹಕರು ಕುಳಿತುಕೊಂಡು ಆಹಾರ ಸೇವಿಸಲು ಏಳು ಟೇಬಲ್‌, 30 ಕುರ್ಚಿಗಳನ್ನು ಹಾಕಲಾಗುತ್ತದೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ದೊಡ್ಡ ಗಾತ್ರದ ನಾಲ್ಕು ಛತ್ರಿಗಳು ಇರುತ್ತವೆ. ಹೋಟೆಲ್‌ಗಳಲ್ಲಿ ನೀಡುವ ಊಟ–ತಿಂಡಿಗಿಂತಲೂ ಕಡಿಮೆ ಬೆಲೆಗೆ ಆಹಾರ ಲಭ್ಯವಾಗುತ್ತದೆ.

‘ಕಟ್ಟಡದ ಬಾಡಿಗೆ, ಕಾರ್ಮಿಕರ ವೇತನ ಸೇರಿಸಿ ಹೋಟೆಲ್‌ಗಳಲ್ಲಿ ಊಟ–ಉಪಾಹಾರದ ಬೆಲೆ ನಿಗದಿಪಡಿಸಲಾಗುತ್ತದೆ. ಸಂಚಾರಿ ಕ್ಯಾಂಟೀನ್‌ಗೆ ಈ ಹೊರೆ ಇರುವುದಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ಆಹಾರ ಲಭ್ಯವಾಗುತ್ತವೆ. ಸರ್ಕಾರಿ ಕಚೇರಿ, ಕೋಟೆಯ ಸಮೀಪ ಸೇವೆ ಒದಗಿಸಿದರೆ ಖಂಡಿತ ಯಶಸ್ವಿಯಾಗುತ್ತದೆ’ ಎಂದು ಶಾಸಕ ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾ ನಾಯ್ಕ್‌, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ ಇದ್ದರು.

ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಮನೆಯ ಹೊರಗೆ ಊಟ ಮಾಡುವುದು ಕೆಲವೊಮ್ಮೆ ಅನಿವಾರ್ಯ. ಶುಚಿ, ರುಚಿ ಆಹಾರ ನೀಡಿದರೆ ಖಂಡಿತ ಯಶಸ್ವಿಯಾಗುತ್ತದೆ
-ಸೌಭಾಗ್ಯ ಬಸವರಾಜನ್‌ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.