ADVERTISEMENT

ಮೊಳಕಾಲ್ಮುರು | ಶೇಂಗಾಕ್ಕೆ ಸಿಗದ ಮಧ್ಯಂತರ ಪರಿಹಾರ

ಫಸಲ್‌ ಬಿಮಾ ಯೋಜನೆ: ರೈತರ ಗಾಯದ ಮೇಲೆ ಬರೆ; ತೊಗರಿಗೆ ಅನುಮತಿ ಸಿಗುವ ಭರವಸೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 3 ನವೆಂಬರ್ 2025, 8:39 IST
Last Updated 3 ನವೆಂಬರ್ 2025, 8:39 IST
   

ಮೊಳಕಾಲ್ಮುರು: ಮಳೆ ಕೊರತೆ, ರೋಗಭಾದೆಯಿಂದ ತೀವ್ರ ಸಂಕಷ್ಟದಲ್ಲಿರುವ ಶೇಂಗಾ ಬೆಳೆಗಾರರಿಗೆ ಫಸಲ್‌ ಬಿಮಾ ಯೋಜನೆಯಡಿ ಮಧ್ಯಂತರ ಪರಿಹಾರ ಸಿಗುವ ಭರವಸೆ ಹುಸಿಯಾಗಿದೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಮಂಗಾರು ಹಂಗಾಮಿನಲ್ಲಿ ಖುಷ್ಕಿ ಪ್ರದೇಶದಲ್ಲಿ ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡಲಾಗುತ್ತದೆ. ಎರಡೂ ತಾಲ್ಲೂಕುಗಳ ವಾಣಿಜ್ಯ ಬೆಳೆಯಾಗಿಯೂ ಶೇಂಗಾ ಗುರುತಿಸಿಕೊಂಡಿದೆ. ವರ್ಷಕ್ಕೆ ಒಂದು ಬೆಳೆ ಮಾತ್ರ ಬೆಳೆಯಲಾಗುತ್ತಿದ್ದು, ಈಗ ಬೆಳೆ ಕೈಕೊಟ್ಟಿರುವ ಕಾರಣ ಬರದ ಛಾಯೆ ಆವರಿಸಿದೆ. ವಿಮೆ ಪರಿಹಾರವೂ ಮರೀಚಿಕೆಯಾಗಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ವರ್ಷ ಮೊಳಕಾಲ್ಮುರು ತಾಲ್ಲೂಕಿನಲ್ಲಿ 21,000 ಹೆಕ್ಟೇರ್‌ನಲ್ಲಿ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ 49,825 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಮೊಳಕಾಲ್ಮುರಿನಲ್ಲಿ 10,500, ಚಳ್ಳಕೆರೆಯಲ್ಲಿ 30,424 ರೈತರು ಫಸಲ್‌ ಬಿಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿ ದ್ದಾರೆ. ಆರಂಭದಿಂದಲೂ ಒಂದಿಲ್ಲೊಂದು ತೊಂದರೆಗೆ ಸಿಲುಕಿದ್ದ ಬೆಳೆಗಾರರು ವಿಮೆ ಯೋಜನೆಯ ನಿಯಮದ ಪ್ರಕಾರ ಮಧ್ಯಂತರ ಪರಿಹಾರದ ನಿರೀಕ್ಷೆಯಲ್ಲಿದ್ದರು.

ADVERTISEMENT

‘ಬೆಳೆ ಕಟಾವು ಆರಂಭವಾಗಿರುವುದರಿಂದ ಶೇಂಗಾಕ್ಕೆ ಮಧ್ಯಂತರ ಪರಿಹಾರ ನೀಡಲು ಬರುವುದಿಲ್ಲ. ತೊಗರಿಗೆ ನೀಡಲು ಅವಕಾಶವಿರುವುದಾಗಿ ವಿಮಾ ಕಂಪನಿಯವರು ತಿಳಿಸಿದ್ದಾರೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎನ್‌.ವಿ. ಪ್ರಕಾಶ್ ಮಾಹಿತಿ ನೀಡಿದರು.

‘ತಿಂಗಳ ಹಿಂದೆ ಶೇಂಗಾ ಕಟಾವು ನಡೆದಿರಲಿಲ್ಲ. ಬೆಳೆ ಒಣಗಿತ್ತು. ಆಗ ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದೆವು. ಮನವಿಯನ್ನೂ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳು ಸಭೆ ಕರೆಯಲು ವಿಳಂಬ ಮಾಡಿದರು. ನಂತರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಿಮಾ ಕಂಪನಿ ಸಿಬ್ಬಂದಿ ಶೇ 25 ರಷ್ಟು ಮಧ್ಯಂತರ ಪರಿಹಾರಕ್ಕೆ ಅವಕಾಶವಿದೆ ಎಂದು ಹೇಳಿದ್ದರು. ನಾವು ಪೂರ್ಣ ವಿಮೆಗೆ ಮನವಿ ಮಾಡಿದ್ದರಿಂದ ಅದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಅಧಿಕಾರಿಗಳು ಹೇಳಿದ್ದರು. ಈಗ ಕಟಾವು ಮಾಹಿತಿಯಂತೆ ಪರಿಹಾರ ನಿಗದಿಯಾಗಲಿದೆ ಎನ್ನುತ್ತಿದ್ದಾರೆ’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.

‘ವಾಹನಗಳ ವಿಮೆ ಮಾದರಿಯಲ್ಲಿ ಫಸಲ್‌ ಬಿಮಾ ಯೋಜನೆಯ ನಿಯಮಗಳನ್ನು ಬದಲಾವಣೆ ಮಾಡಬೇಕು. ಈಗಿರುವ ಮಾನದಂಡ ರೈತ ವಿರೋಧಿಯಾಗಿದೆ. ಸರ್ಕಾರಗಳು ಪರೋಕ್ಷವಾಗಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿವೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಕಟಾವು ಮಾಡುವ ಜಮೀನಿನ ಸರ್ವೇ ಸಂಖ್ಯೆಯನ್ನೂ ಕಂಪನಿಯೇ ನಿರ್ಧಾರ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿತ್ತನೆಗೆ ಸಕಾಲಕ್ಕೆ ಮಳೆ ಬರಲಿಲ್ಲ. ತುಂತುರು ಮಳೆಗೆ ಗಿಡ ಬೆಳೆದಿದೆ. ಆದರೆ, ಕಾಯಿ ಕಟ್ಟಿಲ್ಲ. ಗಿಡವು ಬುಡುಸು ರೋಗ, ಬೆಂಕಿ ರೋಗಕ್ಕೆ ತುತ್ತಾಯಿತು. ಕಾಯಿ ಕಟ್ಟಿದಲ್ಲಿ ಮಾತ್ರ ರೈತರಿಗೆ ಹಣ ಸಿಗಲಿದೆ. ಎಲ್ಲೋ ಇರುವ ಮಳೆಮಾಪನ ಕೇಂದ್ರದ ವರದಿ ಆಧರಿಸಿ ನಮ್ಮ ಹಳ್ಳಿಗೂ ಮಳೆ ಬಂದಿದೆ ಎಂದರೆ ಹೇಗೆ. ಹತ್ತಾರು ವರ್ಷಗಳಿಂದ ಶೇಂಗಾ ಬೆಳೆಗಾರರು ತೊಂದರೆಯಲ್ಲಿದ್ದಾರೆ. ಆದರೆ, ಸರ್ಕಾರ ತಿರುಗಿಯೂ ನೋಡುತ್ತಿಲ್ಲ’ ಎಂದು ರೈತ ಕೊಂಡ್ಲಹಳ್ಳಿಯ ರಾಮಪ್ಪ ದೂರಿದರು.

ಜನಪ್ರತಿನಿಧಿಗಳು ಸಮಸ್ಯೆಯನ್ನು ಸರ್ಕಾರ ಗಮನಕ್ಕೆ ತಂದು ವಿಮಾ ಯೋಜನೆಯ ಮಾನದಂಡಗಳಿಗೆ ತಿದ್ದುಪಡಿ ತರದಿದ್ದಲ್ಲಿ ಪ್ರತಿವರ್ಷ ಈ ಭಾಗದ ವಿಮೆ ಪಾವತಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಮಧ್ಯಂತರ ಪರಿಹಾರ ನೀಡದಿರುವುದನ್ನು ಖಂಡಿಸಿ ರೈತಸಂಘ ಈ ವಾರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಸ್ಪಂದಿಸದಿದ್ದಲ್ಲಿ ಹೋರಾಟ ರೂಪಿಸಲಾಗುವುದು.

- ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೈತ ಮುಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.