ADVERTISEMENT

ಮೊಳಕಾಲ್ಮುರು: ಬಾರದ ಹದ ಮಳೆ; ಶೇಂಗಾ ಬಿತ್ತನೆಗೆ ತೊಡಕು

ಕೊಂಡ್ಲಹಳ್ಳಿ ಜಯಪ್ರಕಾಶ
Published 27 ಜುಲೈ 2024, 5:07 IST
Last Updated 27 ಜುಲೈ 2024, 5:07 IST
ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿ ಬಳಿ ಒಣಗಿದ ಭೂಮಿಗೆ ಟ್ರಾಕ್ಟರ್‌ ಮೂಲಕ ಬಿತ್ತನೆ ಮಾಡುತ್ತಿರುವುದು 
ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿ ಬಳಿ ಒಣಗಿದ ಭೂಮಿಗೆ ಟ್ರಾಕ್ಟರ್‌ ಮೂಲಕ ಬಿತ್ತನೆ ಮಾಡುತ್ತಿರುವುದು    

ಮೊಳಕಾಲ್ಮುರು: ಚಿತ್ರದುರ್ಗ ಜಿಲ್ಲೆಯ ಅರೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಆದರೆ, ಪ್ರತಿ ವರ್ಷದಂತೆ ಈ ವರ್ಷ ಕೂಡ ತಾಲ್ಲೂಕಿನ ವಿವಿಧೆಡೆ ಮಳೆ ಕೊರತೆಯಾಗಿದ್ದು ಶೇಂಗಾ ಬೆಳೆಗಾರರು ಒಂದೇ ಒಂದು ಹದ ಮಳೆಗಾಗಿ ನಿತ್ಯ ಮುಗಿಲು ನೋಡುತ್ತಿದ್ದಾರೆ.

ಹತ್ತಾರು ವರ್ಷಗಳಿಂದ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿ ಶೇಂಗಾ ಗುರುತಿಸಿಕೊಂಡಿದೆ. ಅದರಲ್ಲೂ ಹಿರೇಪುಷ್ಯ, ಚಿಕ್ಕಪುಷ್ಯ ಮಳೆಗೆ ಬಿತ್ತನೆ ಮಾಡಿದಲ್ಲಿ ಹೂವು ಕಟ್ಟಲು, ಹೂವು ನೆಲಕ್ಕೆ ಇಳಿಯಲು ವಾತಾವರಣ ಅನುಕೂಲವಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಈ ಮಳೆಗೆ ಅನೇಕ ಬೆಳೆಗಾರರು ಒಗ್ಗಿಕೊಂಡಿರುವ ಕಾರಣ ಬಿತ್ತನೆ ಜುಲೈನೊಳಗೆ ಮುಕ್ತಯವಾಗಬೇಕು ಎನ್ನುತ್ತಾರೆ.

ಆದರೆ ಜುಲೈ ಮುಗಿಯುತ್ತಾ ಬಂದಿದ್ದರೂ ಹದ ಮಳೆಯಾಗದ ಕಾರಣ ರೈತರು ಆತಂಕಗೊಂಡಿದ್ದಾರೆ. ಮೋಡ ಮುಚ್ಚಿನ ವಾತಾವರಣ, ತುಂತುರು ಮಳೆಯಿಂದ ನೆಲಕ್ಕೆ ಹದವಾಗುತ್ತಿಲ್ಲ. ಜೂನ್‌ ತಿಂಗಳಲ್ಲಿ ತಾಲ್ಲೂಕಿನ ವಾಡಿಕೆ ಮಳೆ 5.2 ಸೆಂ.ಮೀ ಇದ್ದು ವಾಸ್ತವವಾಗಿ 13.2 ಸೆಂ.ಮೀ ಮಳೆ ಬೀಳುವ ಮೂಲಕ ರೈತರಲ್ಲಿ ಉತ್ಸಾಹ ಮೂಡಿಸಿತ್ತು.

ADVERTISEMENT

ಇದಕ್ಕೆ ಪೂರಕವಾಗಿ ಹೊಲ ಹಸಲು, ಬಿತ್ತನೆಬೀಜ ದಾಸ್ತಾನು, ರಸಗೊಬ್ಬರ ಶೇಖರಣೆ ಮಾಡಿಕೊಂಡಿದ್ದರು. ಆದರೆ ಜುಲೈನಲ್ಲಿ ಒಂದು ಬಾರಿಯೂ ಹದವಾದ ಮಳೆಯಾಗಿಲ್ಲ. ವಾಡಿಕೆ ಮಳೆ 3.5 ಸೆಂ.ಮೀ.ಗೆ ಪ್ರತಿಯಾಗಿ ಕೇವಲ 2.5 ಸೆಂ.ಮೀ ಮಳೆಯಾಗಿದೆ. ತುಂತುರು ಬಂದಿದ್ದು ತೇವಾಂಶ ಗಾಳಿಗೆ ಹಾರಿ ಹೋಗಿದ್ದು ಶೇಂಗಾ ಬಿತ್ತನೆಗೆ ತೊಡಕಾಗಿದೆ. ಬಿತ್ತನೆ ಮಾಡಲು ಕನಿಷ್ಠ 6-7 ಇಂಚು ನಷ್ಟು ಭೂಮಿ ನೆನೆದಿರಬೇಕು. ಆದರೆ 2 ಇಂಚು ಸಹ ನೆನೆದಿಲ್ಲ ಎಂದು ರೈತರು ಹೇಳುತ್ತಾರೆ. ಜುಲೈ ತಿಂಗಳೊಳಗೆ ಬಿತ್ತೆನ ಪೂರ್ಣಗೊಳಿಸಬೇಕು ಎಂಬ ಹಟಕ್ಕೆ ಬಿದ್ದಿರುವ ಕೆಲ ರೈತರು ಒಣಭೂಮಿಗೆ ಶೇಂಗಾ ಬಿತ್ತನೆ ಮಾಡುತ್ತಿದ್ದಾರೆ. 

‘ತಾಲ್ಲೂಕಿನಲ್ಲಿ ದೇವಸಮುದ್ರ ಹೋಬಳಿಯಲ್ಲಿ ಒಂದಿಷ್ಟು ಮಳೆಯಾಗಿದೆ, ಅಲ್ಲಿ ಹತ್ತಿ, ರಾಗಿ, ಮೆಕ್ಕೆಜೋಳ, ಶೇಂಗಾ ಬಿತ್ತನೆ ಮಾಡಲಾಗಿದೆ. ಕಸಬಾ ಹೋಬಳಿಯಲ್ಲಿ ಬಿತ್ತನೆ ತೀವ್ರ ಕುಂಠಿತವಾಗಿದೆ. ಒಟ್ಟು 28,000 ಹೆಕ್ಟೇರ್‌ ಬಿತ್ತನೆ ಪ್ರದೇಶವಿದ್ದು, ಇದರಲ್ಲಿ ಶೇ 35-40 ರಷ್ಟು ಬಿತ್ತನೆ ಮಾಡಲಾಗಿದೆ. ಶುಕ್ರವಾರ ಮೊಳಕಾಲ್ಮುರು ಸುತ್ತಮುತ್ತ ಸ್ವಲ್ಪ ಮಳೆಯಾಗಿದ್ದು ಬಿತ್ತನೆ ಆರಂಭಿಸುವ ನಿರೀಕ್ಷೆಯಿದೆ‘ ಎಂದು ಕೃಷಿ ತಾಲ್ಲೂಕು ಸಹಾಯಕ ನಿರ್ದೇಶಕ ಪ್ರಕಾಶ್‌ ಹೇಳಿದರು.

‘ಈ ವರ್ಷ 5,500 ಕ್ವಿಂಟಲ್‌ ಬಿತ್ತನೆ ಬೀಜ  ವಿತರಣೆ ಮಾಡಲಾಗಿದೆ. ಇನ್ನೂ 1 ಸಾವಿರ ಟನ್‌ ದಾಸ್ತಾನು ಇದೆ. ಮಳೆ ಬಗ್ಗೆ ಆಶಾಭಾವನೆ ಇದೆ.  ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಸಲ ಹೆಚ್ಚಾಗಿ ಖರ್ಚಾಗಿದೆ. ಆಗಸ್ಟ್‌ 15 ತನಕವೂ ಶೇಂಗಾ ಬಿತ್ತನೆ ಮಾಡಬಹುದಾಗಿದೆ. ಪರ್ಯಾಯ ಬೆಳೆಗಳನ್ನು ಬಿತ್ತನೆ ಮಾಡಿ ಮಣ್ಣಿನ ಆರೋಗ್ಯ, ಹಣ ಉಳಿತಾಯ ಮಾಡಿ ಎಂಬ ಸಲಹೆಗೆ ರೈತರು ಕಿವಿಗೊಡುತ್ತಿಲ್ಲ‘ ಎಂದು ಅವರು ತಿಳಿಸುತ್ತಾರೆ.

ಶೇಂಗಾಕ್ಕೆ ಫಸಲ್‌ ಭಿಮಾ ವಿಮೆ ಮಾಡಿಸಲು ಜುಲೈ31 ಕೊನೆ ದಿನವಾಗಿದೆ. ಬಿತ್ತನೆ ಮಾಡದಿದ್ದರೂ ವಿಮೆ ಪಾವತಿಸಲು ತೊಂದರೆಯಿಲ್ಲ. ನಿಯಮದಂತೆ ಶೇ 25ರಷ್ಟು ಬಿತ್ತನೆ ಪ್ರಗತಿ ಆಗದಿದ್ದಲ್ಲಿ ಶೇ 25ರಷ್ಟು ಆರಂಭಿಕ ವಿಮೆ ಪಡೆಯಲು ರೈತರು ಅರ್ಹರಾಗುತ್ತಾರೆ. ಹಿಂದಿನ ವರ್ಷ ಹೆಚ್ಚಿನ ಪ್ರಮಾಣದ ವಿಮೆ ಹಣ ಬಂದಿದ್ದು, ಈ ಬಾರಿಯೂ ರೈತರು ಕಡ್ಡಾಯ ವಿಮೆ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ.

ಭೂಮಿಯಲ್ಲಿ ತೇವಾಂಶವಿಲ್ಲ; ಬಿತ್ತನೆ ಕುಂಠಿತ

ವಿ.ಧನಂಜಯ ನಾಯಕನಹಟ್ಟಿ

ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರುಮಳೆ ಬಾರದೆ ನಿರಂತರವಾಗಿ ಮೋಡಕವಿದ ವಾತವರಣವಿರುವ ಪ್ರಯುಕ್ತ ಹೋಬಳಿಯ ಬಹುತೇಕ ರೈತರ ಮಳೆಯಾಶ್ರಿತ ಬೆಳೆಯ ಬಿತ್ತನೆ ಕಾರ್ಯವು ಕುಂಠಿತವಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದು ನಾಯಕನಹಟ್ಟಿಯನ್ನು ಗುರ್ತಿಸಲಾಗಿದೆ.

ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸರಿಯಾಗಿ ಒಂದು ದಿನವೂ ಹೋಬಳಿಯಾದ್ಯಂತ ಹದ ಮಳೆಯಾಗಿಲ್ಲ. ಅಲ್ಪಸ್ವಲ್ಪ ಬಿದ್ದ ಮಳೆಯು ಆಷಾಡ ಮಾಸದ ರಭಸವಾಗಿ ಬೀಸುವ ಗಾಳಿಗೆ ತೇವಾಂಶ ಕಡಿಮೆಯಾಗಿದೆ. ಹದವಾದ ಮಳೆಯಾಗುವ ನಿರೀಕ್ಷೆಯಲ್ಲಿರುವ ರೈತರು ಈಗಾಗಲೇ ಬಿತ್ತನೆಗಾಗಿ ಜಮೀನು ಸಿದ್ಧಗೊಳಿಸಿದ್ದಾರೆ.

ಕೆಲ ರೈತರು ಸಾಂಪ್ರದಾಯಕವಾಗಿ ಪನರ್ವಸು(ಹಿರೇಪೂಸೆ) ಪುಷ್ಯಾಮಳೆ(ಚಿಕ್ಕಪೂಸೆ) ಮಳೆಯೇ ಬಿತ್ತನೆಗೆ ಉತ್ತಮವಾದ ತಿಥಿ ಎಂದು ಭಾವಿಸಿ ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆಯಿಂದ ನಾಯಕನಹಟ್ಟಿ ಪಟ್ಟಣಪಂಚಾಯಿತಿ ಸೇರಿ ಹೋಬಳಿಯ 8ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 46ಹಳ್ಳಿಗಳಿಗೆ ರೈತಸಂಪರ್ಕ ಕೆಂದ್ರದಿಂದ ರಿಯಾಯಿತಿ ದರದಲ್ಲಿ ಶೇಂಗಾ ವಿತರಿಸಿದ್ದಾರೆ.

ಇಲ್ಲಿಯವರೆಗೂ ಟಿಎಂವಿ-2 ಮತ್ತು ಕೆ.6 ತಳಿಯ ಬಿತ್ತನೆ ಶೇಂಗಾ ಬಿತ್ತೆನೆಕಾಯಿ ಎರಡೂ ಸೇರಿ ಒಟ್ಟು 4750 ಕ್ವಿಂಟಲ್ ತೊಗರಿ 50ಕ್ವಿಂಟಲ್ ಮೆಕ್ಕೆಜೋಳ 75 ಕ್ವಿಂಟಲ್ ಮಾರಾಟವಾಗಿದೆ. ಹೋಬಳಿಯಾಧ್ಯಂತ 24ಸಾವಿರ ಹೆಕ್ಟೇರ್ ಪ್ರದೇಶವಿದ್ದು ಇದರಲ್ಲಿ 18115 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.

ಶೇಂಗಾ ಬಿತ್ತನೆಗೆ ಆಗಸ್ಟ್ 19ರವರೆಗೂ ಸಮಯಾವಕಾಶವಿದ್ದು ಇಲ್ಲಿಯವರೆಗೂ 14500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತೆಯಾಗಬೇಕಿತ್ತು. ಆದರೆ ಕೇವಲ 8950 ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಮುಂಬರುವ ಹದಿನೈದು ದಿನದಲ್ಲಿ ಶೇಂಗಾ ಬಿತ್ತನೆಯ ಗುರಿ ತಲುಪಬಹುದು ಎಂಬ ಭರವಸೆ ಇದೆ ಎಂದು ಕೃಷಿ ಅಧಿಕಾರಿ ಎನ್.ಹೇಮಂತ್‌ನಾಯ್ಕ್ ಹೇಳುತ್ತಾರೆ. ‘ಈ ವರ್ಷ ಉತ್ತಮವಾಗಿ ಮಳೆಯಾಗುತ್ತದೆ ಎಂಬ ಭರವಸೆಯಿಂದ ಬಿತ್ತನೆಬೀಜ ಖರೀದಿಸಿದ್ದೇವೆ. ಹೋಬಳಿಯಲ್ಲಿ ಒಂದು ಕಡೆ ಮಳೆಬಂದರೆ ಮತ್ತೊಂದೆಡೆ ಮಳೆ ಇಲ್ಲ. ನಿರಂತವಾಗಿ ಮೋಡಕವಿದು ಕೃಷಿಚಟುವಟಿಕೆಗೆ ಅಡ್ಡಿಯಾಗಿದೆ’ ಎಂದು ಕೊಂಡಯ್ಯನಕಪಿಲೆ ಗ್ರಾಮದ ರೈತ ಚಿನ್ನಯ್ಯ ಹೇಳಿದರು. -

ಮತ್ತೆ ಮೂಡಿದ ಬರದ ಛಾಯೆ

- ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಮುಂಗಾರು ಹಂಗಾಮಿನಲ್ಲಿ ಬಿದ್ದ ಅತ್ಯಲ್ಪ ಮಳೆಯ ಕಾರಣ ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಕಾರ್ಯ ಕುಂಠಿತಗೊಂಡಿದ್ದು ಇದರಿಂದ ರೈತ ಸಮುದಾಯದಲ್ಲಿ ಈ ಬಾರಿ ಬರದ ಆತಂಕ ಮತ್ತಷ್ಟು ಹೆಚ್ಚಿಸಿದೆ. ತಾಲ್ಲೂಕಿನಲ್ಲಿ 73.40 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಇದುವರೆಗೆ 30.20 ಸಾವಿರ ಹೆಕ್ಟೇರ್‌ ಶೇಂಗಾ 2.50 ಸಾವಿರ ಹೆಕ್ಟೇರ್‌ ತೊಗರಿ ಸೇರಿ ಒಟ್ಟು 32.70 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಪೂರ್ವ ಮುಂಗಾರಿನಲ್ಲಿ ಬಿದ್ದ ತುಂತುರು ಮಳೆಗೆ ಅಲ್ಲಲ್ಲಿ ಸಾವೆ ನವಣೆ ಸಜೆ ಸಿರಿಧಾನ್ಯ ಬಿತ್ತಲಾಗಿದೆ. ಜನವರಿ ಫೆಬ್ರುವರಿ ಹಾಗೂ ಮಾರ್ಚ್‌ ಹೊರತುಪಡಿಸಿ ಏಪ್ರಿಲ್‌ನಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 48.3 ಸೆಂ.ಮೀ ವಾಡಿಕೆ ಮಳೆಗೆ 25.10 ಸೆಂ.ಮೀ ಮಳೆಯಾಗಿದೆ. ಜೂನ್‌ 15ರಿಂದ ಜುಲೈ 15ರವರೆಗೆ ಶೇಂಗಾ ಬಿತ್ತನೆಗೆ ಸೂಕ್ತ ಸಮಯ. ಜುಲೈ ತಿಂಗಳು ಮುಗಿತ ಬಂದರೂ ಬಿತ್ತನೆಗೆ ಸಾಕಾಗುವಷ್ಟು ನೆಲಕ್ಕೆ ಮಳೆ ಬಿದ್ದಿಲ್ಲ. ಮೋಡಕವಿದ ವಾತಾವರಣವಿದ್ದು ವಿಪರೀತ ಗಾಳಿ ಬೀಸುತ್ತಿದೆ. ಇದರಿಂದ ನೆಲಕ್ಕೆ ನಾಕೈದು ಹನಿ ಚೆಲ್ಲಿದ ಮೋಡಗಳು ಗಾಳಿ ಜೊತೆ ಓಡುತ್ತಿರುತ್ತದೆ. ಆದರೂ ಬಂದೇ ಬರುತ್ತದೆ ಎಂಬ ನಿರೀಕ್ಷೆಯಿಂದ ಕೆಲವರು ತುಂತುರು ಮಳೆಯ ಅರೆಬರೆ ಹಸಿಗೆ ಬೀಜ ಬಿತ್ತನೆ ಮಾಡಿದ್ದಾರೆ.

ಆರಿದ್ರ, ಪುನರ್ವಸು ಮಳೆಗೆ ಬಿತ್ತನೆ ಆಗಬೇಕಿತ್ತು. ಈಗ ಪುಷ್ಯ ಮಳೆ. ಬಿತ್ತನೆ ವಿಳಂಬವಾದರೆ ಬೆಳೆ ಇಳುವರಿ ಬರುವುದಿಲ್ಲ. ಕಾಯಿ ಕಟ್ಟುವುದಿಲ್ಲ. ಈಗ ಬಿತ್ತನೆ ಮಾಡಿದರೂ ಪ್ರಯೋಜನವಿಲ್ಲ ಎಂದು ರೈತ ಚಿಕ್ಕಣ್ಣ ಆತಂಕ ವ್ಯಕ್ತಪಡಿಸಿದರು.ಈ ಬಾರಿ ಅತ್ಯಲ್ಪ ಮಳೆ ಬಿದ್ದಿರುವುದರಿಂದ ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.

ವಿಶೇಷ ಪ್ಯಾಕೇಜ್ ಜಾರಿಮಾಡಬೇಕು ಎಂದು ರೈತ ಸಂಘದ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಸರ್ಕಾರವನ್ನು ಒತ್ತಾಯಿಸಿದರು. ‘ಬಿತ್ತನೆಗೆ ಅಗತ್ಯವಾಗುವಷ್ಟು ಮಳೆ ಬಿದ್ದಿಲ್ಲ. ಹಗುರ ಮಳೆ ಬಿದ್ದರೂ ಮಾಪನಕೇಂದ್ರದಲ್ಲಿ ದಾಖಲಾಗುತ್ತದೆ. ಹೀಗಾಗಿ ಬಿತ್ತನೆಗೆ ತೊಡಕಾಗಿದೆ’ ಎನ್ನುತ್ತಾರೆ ಕೃಷಿ ತಾಂತ್ರಿಕಾ ಅಧಿಕಾರಿ ಮೇಘನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.