ಮೊಳಕಾಲ್ಮುರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ವಾರದ ಸಂತೆ ನಡೆಸಲಾಗುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಘಟಕ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೃಷಿ ಕಚೇರಿ ಮುಂಭಾಗ ನಡೆಯುತ್ತಿದ್ದ ವಾರದ ಸಂತೆ ಸ್ಥಳವು ತಮಗೆ ಸೇರಿದ್ದು ಎಂದು ವ್ಯಕ್ತಿಯೊಬ್ಬರು ತಡೆಯಾಜ್ಞೆ ತಂದ ನಂತರ ಸಂತೆಯು ಬೀದಿಗೆ ಬಂದಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪರಿಣಾಮವಾಗಿ ಗ್ರಾಹಕರು, ವ್ಯಾಪಾರಿಗಳು ಜೀವಭಯದಲ್ಲಿ ಸಂತೆಗೆ ಬಂದು ಹೋಗಬೇಕಿದೆ ಎಂದು ದೂರಿದರು.
ಈಚೆಗೆ ಹಾಸನ ಜಿಲ್ಲೆಯಲ್ಲಿ ಗಣಪತಿ ಮೆರವಣಿಗೆ ಸಮಯದಲ್ಲಿ ಟ್ರಕ್ ಹರಿದು 10ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ. ಸಂತೆಯನ್ನು ಸ್ಥಳಾಂತರ ಮಾಡದಿದ್ದಲ್ಲಿ ಇಲ್ಲಿ ಅದಕ್ಕಿಂತಲೂ ದೊಡ್ಡ ಅನಾಹುತ ಸಂಭವಿಸುವ ಪರಿಸ್ಥಿತಿ ಇದೆ. ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳದಿದ್ದರೆ, ಹೋರಾಟ ನಡೆಸಲಾಗುವುದು. ಬದಲಿ ವ್ಯವಸ್ಥೆ ಆಗುವ ತನಕ ರೈತರಿಂದ ಜಕಾತಿ ವಸೂಲಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್, ಎಸ್.ಟಿ. ಚಂದ್ರಣ್ಣ, ವೀರಣ್ಣ, ದಾಸಪ್ಪ, ಮಂಜಣ್ಣ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.