ಮೊಳಕಾಲ್ಮುರು: ವ್ಯಕ್ತಿಯೊಬ್ಬರು ಇಲ್ಲಿನ ಕೃಷಿ ಇಲಾಖೆ ಕಚೇರಿ ಸಮೀಪ ನಡೆಯುತ್ತಿದ್ದ ವಾರದ ಸಂತೆ ಮೈದಾನ ನನಗೆ ಸೇರಿದೆ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕಾರಣ ಬುಧವಾರ ಆ ಸ್ಥಳದಲ್ಲಿ ನಡೆಯಬೇಕಿದ್ದ ಸಂತೆಯು ಏಕಾಏಕಿ ಮುಖ್ಯರಸ್ತೆ ಬದಿಗೆ ಸ್ಥಳಾಂತರವಾಯಿತು.
2 ವರ್ಷಗಳ ಹಿಂದೆ ಮುಖ್ಯರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಸಂತೆಯನ್ನು ಕೃಷಿ ಕಚೇರಿ ಬಳಿ ಸ್ಥಳಾಂತರ ಮಾಡಲಾಗಿತ್ತು. ₹ 1 ಕೋಟಿ ವೆಚ್ಚದಲ್ಲಿ ಅಲ್ಲಿ ಮೂಲಸೌಕರ್ಯ ಕಾಮಗಾರಿ ಪ್ರಗತಿಯಲ್ಲಿತ್ತು. ಜತೆಗೆ ಪಕ್ಕದಲ್ಲಿ ನೂತನವಾಗಿ ₹ 1.75 ಕೋಟಿ ವೆಚ್ಚದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣ ಕಾರ್ಯವೂ ನಡೆಯುತ್ತಿತ್ತು. ತಡೆಯಾಜ್ಞೆ ಕಾರಣ ಸಂತೆ ಸ್ಥಳಾಂತರವಾಗಿದ್ದು, ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆ.
ತಡೆಯಾಜ್ಞೆ ನೀಡಿರುವ ಮಾಹಿತಿ ಇಲ್ಲದ ವ್ಯಾಪಾರಿಗಳು ಬೆಳಿಗ್ಗೆ ಬಂದು ವ್ಯಾಪಾರ ಮಾಡಲು ಸ್ಥಳಕ್ಕಾಗಿ ತೀವ್ರ ತೊಂದರೆ ಅನುಭವಿಸಿದರು. ಸಿಕ್ಕ ಸಿಕ್ಕ ಕಡೆ ಕುಳಿತು ವ್ಯಾಪಾರ ಮಾಡಿದರು. ಹೊಣೆ ಹೊತ್ತಿರುವ ಪಟ್ಟಣ ಪಂಚಾಯಿತಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಬದಲಿ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಹಿಡಿಶಾಪ ಹಾಕಿದರು. ‘ತಡೆಯಾಜ್ಞೆ ತೆರವು ಮಾಡುವವರೆಗೂ ನಮ್ಮ ಪಾಡು ಏನು’ ಎಂದು ವ್ಯಾಪಾರಿಗಳು ಪ್ರಶ್ನಿಸಿದರು.
ತಾಲ್ಲೂಕಿನ ಕೊಂಡ್ಲಹಳ್ಳಿಯ ಲಕ್ಷ್ಮೀನಾರಾಯಣ ಎನ್ನುವವರು, ‘ಸಂತೆ ನಡೆಯುವ ಸ್ಥಳ ನಮಗೆ ಸೇರಿದೆ’ ಎಂದು ಹೈಕೋರ್ಟ್‌ನಲ್ಲಿ ದಾವೆ ಹಾಕಿದ್ದಾರೆ. ‘ಕೋರ್ಟ್ ಯಥಾಸ್ಥಿತಿ ಕಾಪಾಡಿ’ ಎಂದು ಆದೇಶ ನೀಡಿದೆ. ಇದಕ್ಕೂ ಮೊದಲು ಸ್ಥಳೀಯ ಸಿವಿಲ್ ನ್ಯಾಯಾಲಯವು ಜಿಲ್ಲಾಧಿಕಾರಿಯು ಸಂತೆಗೆ ಮಂಜೂರು ಮಾಡಿರುವ ಸರ್ವೆ ಸಂಖ್ಯೆ 4/4 ಎ2 ಜಾಗದ ಮಂಜೂರಾತಿಯನ್ನು ಎತ್ತಿ ಹಿಡಿದು ಆದೇಶ ನೀಡಿತ್ತು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದೇಶದ ಬಗ್ಗೆ ಮುಂದಿನ ಕ್ರಮಕ್ಕೆ ಚರ್ಚಿಸಲಾಗುವುದು ಎಂದು ಮುಖ್ಯಾಧಿಕಾರಿ ಲಿಂಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಾನಗಲ್– ರಾಯದುರ್ಗ ಹೆದ್ದಾರಿಯಲ್ಲಿ ವಾರದ ಸಂತೆ ನಡೆಯುವ ಅನಿವಾರ್ಯತೆ ಎದುರಾಗಿರುವ ಕಾರಣ ಸಂಬಂಧಪಟ್ಟವರು ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ನೆರವಿಗೆ ಬರಬೇಕು ಎಂದು ರೈತ ಸಂಘ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.