ADVERTISEMENT

ಮೊಳಕಾಲ್ಮುರು | ಗೌರಸಮುದ್ರ ಮಾರಮ್ಮ ಪರಿಷೆಯಲ್ಲಿ ಜನಸಾಗರ

ಭಕ್ತಿಗೆ ಅಡ್ಡಿಯಾಗದ ಬರ, ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:16 IST
Last Updated 20 ಸೆಪ್ಟೆಂಬರ್ 2023, 7:16 IST
ಚಳ್ಳಕೆರೆ ತಾಲ್ಲೂಕಿನ ಗೌರಸಮದ್ರದಲ್ಲಿ ಮಂಗಳವಾರ ನಡೆದ ಮಾರಮ್ಮದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು
ಚಳ್ಳಕೆರೆ ತಾಲ್ಲೂಕಿನ ಗೌರಸಮದ್ರದಲ್ಲಿ ಮಂಗಳವಾರ ನಡೆದ ಮಾರಮ್ಮದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು   

ಮೊಳಕಾಲ್ಮುರು: ಬಯಲುಸೀಮೆಯ ಪ್ರಮುಖ ಜಾತ್ರೆ ಎನಿಸಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಗೌರಸಮುದ್ರದಲ್ಲಿ (ಗೌರಸಂದ್ರ) ಮಂಗಳವಾರ ನಡೆದ ಮಾರಮ್ಮದೇವಿ ತುಂಬಲು ಪರಿಷೆಗೆ ಭಕ್ತರ ದಂಡು ಹರಿದುಬಂದಿತ್ತು.

ಮಾರಮ್ಮನಿಗೆ ಪ್ರತಿವರ್ಷ ಶ್ರಾವಣ ಮಾಸದ ನಂತರ ಬರುವ ಮಂಗಳವಾರ ತುಂಬಲು ಸ್ಥಳದಲ್ಲಿ ದೊಡ್ಡ ಪರಿಷೆ, ಒಂದು ತಿಂಗಳ ನಂತರ ಮರಿಪರಿಷೆ ನಡೆಯುವುದು ವಾಡಿಕೆ. ಮಾರಮ್ಮನ ಮೂಲ ಆಂಧ್ರಪ್ರದೇಶವಾಗಿದ್ದು, ಅಲ್ಲಿಂದಲೂ ಅಪಾರ ಭಕ್ತರು ಜಾತ್ರೆಗೆ ಬರುತ್ತಾರೆ. ಅಂತರರಾಜ್ಯಗಳ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಬೆಸೆಯುವ ಜಾತ್ರೆಯಾಗಿ ಇದು ಗುರುತಿಸಿಕೊಂಡಿದೆ.

ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ಬರಲಾರಂಭಿಸಿದರು. ದಾರಿಯಲ್ಲಿನ ತೋಟ, ಹೊಲದಲ್ಲಿ ಬೀಡು ಬಿಟ್ಟಿದ್ದರು. ಬೆಳಗಿನ ಜಾವದಿಂದ ತುಂಬಲಿನಲ್ಲಿ ದೇವಿ ದರ್ಶನ ಆರಂಭವಾಯಿತು. ಬೇವಿನಸೀರೆ ಹಕರೆ, ಬಾಯಿಗೆ ಬೀಗ, ಜಾನುವಾರುಗಳ ಪ್ರದಕ್ಷಿಣೆ, ಮುಡುಪುಗಳ ಸಲ್ಲಿಕೆ, ಸೀರೆ, ಬಳೆ ಅರ್ಪಣೆ ಮುಂತಾದ ಹರಕೆಗಳನ್ನು ಭಕ್ತರು ತೀರಿಸಿದರು.

ADVERTISEMENT
ಜಾತ್ರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಮಾರಮ್ಮದೇವಿ ಉತ್ಸವ ಮೂರ್ತಿ

ಬೆಳಿಗ್ಗೆ 10.10 ಗಂಟೆಗೆ ಗೌರಸಮುದ್ರದ ದೇವಸ್ಥಾನದಿಂದ ಹೊರಟ ಮಾರಮ್ಮದೇವಿ ಉತ್ಸವ ಮೂರ್ತಿ ಮೆರವಣಿಗೆ ತುಂಬಲಿಗೆ ಮಧ್ಯಾಹ್ನ 1.20 ಕ್ಕೆ ಆಗಮಿಸಿತು. ಚಾಮರ, ಡೊಳ್ಳು, ತಪ್ಪಡೆ ಬಡಿತ, ಪಂಜು ಸೇರಿದಂತೆ ಅನೇಕ ಬುಡಕಟ್ಟು ಸಂಸ್ಕೃತಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಹಕರೆ ಹೊತ್ತ ಭಕ್ತರು ದಾರಿಯುದ್ದಕ್ಕೂ ಈರುಳ್ಳಿ, ಸೂರುಬೆಲ್ಲ ತೂರಿದರು. ಭಕ್ತರು ತೂರಿದ ಮೆಣಸನ್ನು ಆರಿಸಿಕೊಂಡ ಇತರೆ ಭಕ್ತರು ಆರಿಸಿಕೊಂಡು ಮನೆಗೆ ಕೊಂಡ್ಯೊಯ್ದರು.

ತುಂಬಲು ಕಟ್ಟೆ ಮುಂಭಾಗದ ಕಂಬವನ್ನು ಭಕ್ತರು ಹತ್ತಿ ಎಣ್ಣೆದೀಪ ಬೆಳಗಿಸಿದರು. ಇದನ್ನು ಬಂದಿದ್ದ ಭಕ್ತರು ಕಾದಿದ್ದು ನೋಡುವುದು ಸಂಪ್ರದಾಯ. ಜಾತ್ರೆಯು ಬಾಡೂಟಕ್ಕೆ ಖ್ಯಾತಿಯಾಗಿದ್ದು, ದೇವಸ್ಥಾನ ಸುತ್ತಮುತ್ತ ಪ್ರಾಣಿಬಲಿ ನಿಷೇಧಿಸಿದ್ದ ಕಾರಣ ದಾರಿಯಲ್ಲಿನ ತೋಟಗಳು, ಹೊಲಗಳಲ್ಲಿ ಊಟಕ್ಕೆ ಏರ್ಪಾಡು ಮಾಡಲಾಗಿತ್ತು. ಜಾತ್ರೆಯಲ್ಲಿ ಬೆಂಡು ಬತ್ತಾಸು, ಮಂಡಕ್ಕಿ ಮಾರಾಟ ಜೋರಾಗಿತ್ತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಶಾಸಕ ಎನ್.ವೈ. ಗೋಪಾಲಕೃಷ್ಣ ಭಾಗವಹಿಸಿದ್ದರು. ಬುಧವಾರ ಓಕಳಿ, ಗುರುವಾರ ದೇವಿ ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ಜಾತ್ರೆಯ ವಿಹಂಗಮ ನೋಟ

ಒಂದು ತಿಂಗಳ ನಂತರ...

ದೊಡ್ಡಪರಿಷೆ ನಡೆದ ಐದು ಮಂಗಳವಾರ ನಂತರ (ಅ.17ರಂದು) ಮರಿಪರಿಷೆ ತುಂಬಲಿನಲ್ಲಿ ನಡೆಯುತ್ತದೆ. ಅಲ್ಲಿಯ ತನಕ ಸುತ್ತಮುತ್ತ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಸರದಿಯಂತೆ ಪ್ರತಿ ಮಂಗಳವಾರ ಮಾರಮ್ಮದೇವಿ ಜಾತ್ರೆ ಆಚರಿಸುತ್ತಾರೆ. ಮರಿಪರಿಷೆ ಆಚರಣೆ ಮೂಲಕ ವಾರ್ಷಿಕ ಜಾತ್ರೆಗೆ ತೆರೆಬೀಳುತ್ತದೆ.

ದೊಡ್ಡ ಪರಿಷೆ ಸಮಯದಲ್ಲಿ ದೇವಿಗೆ ಸಗರ ಸಾರಿಸಿದ ನಂತರ ಬೇರೆ ಆಚರಣೆ ಮಾಡುವಂತಿಲ್ಲ ಎಂಬ ನಿಯಮವಿದ್ದು ಈ ಕಾರಣಕ್ಕಾಗಿ ಇಲ್ಲಿ ಅನಾದಿ ಕಾಲದಿಂದಲೂ ಗಣಪತಿ ಹಬ್ಬ ಆಚರಿಸುವುದಿಲ್ಲ. ಅಡ್ಡಿಯಾಗದ ಬರ.. ಮಳೆ ಕೊರತೆಯಿಂದಾಗಿ ಶೇಂಗಾ ಒಣಗುತ್ತಿದ್ದು ಬರಗಾಲದ ಕಾರ್ಮೋಡ ಆವರಿಸಿದೆ. ಇದು ಜಾತ್ರೆ ಮೇಲೆ ಪರಿಣಾಮ ಬೀರುವ ಲೆಕ್ಕಾಚಾರವಿತ್ತು. ಆದರೆ ಕಳೆದ ವರ್ಷಗಳಿಗಿಂತ ಹೆಚ್ಚು ಭಕ್ತರು ಭಾಗವಹಿಸುವ ಮೂಲಕ ಭಕ್ತಿಗೆ ಬರವಿಲ್ಲ ಎನ್ನುವುದನ್ನು ಸಾಬೀತು ಮಾಡಿದರು. ಸಾರಿಗೆ ಅವ್ಯವಸ್ಥೆ ಸಂಪರ್ಕ ದಾರಿಗಳ ಅವ್ಯವಸ್ಥೆ ಸಾಮೂಹಿಕ ಶೌಚಾಲಯ ಕೊರತೆ ನಡೆವೆಯೂ ಭಕ್ತರ ಸಂಖ್ಯೆಗೆ ಕೊರರೆಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.