ADVERTISEMENT

ಹೊಸದುರ್ಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗಾಗಿ ಬಿಜೆಪಿಯಲ್ಲಿ ಪೈಪೋಟಿ

ಹೊಸದುರ್ಗದ 23 ವಾರ್ಡ್‌ಗಳ ಪುರಸಭೆಗೆ ಮೀಸಲು ಪ್ರಕಟ

ಎಸ್.ಸುರೇಶ್ ನೀರಗುಂದ
Published 10 ಅಕ್ಟೋಬರ್ 2020, 2:47 IST
Last Updated 10 ಅಕ್ಟೋಬರ್ 2020, 2:47 IST
ಹೊಸದುರ್ಗ ಪುರಸಭೆ ಕಾರ್ಯಾಲಯ
ಹೊಸದುರ್ಗ ಪುರಸಭೆ ಕಾರ್ಯಾಲಯ   

ಹೊಸದುರ್ಗ: ಇಲ್ಲಿನ ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷ, ಎರಡು ತಿಂಗಳು ಪೂರ್ಣಗೊಂಡ ಬಳಿಕ ಕೌನ್ಸಿಲ್‌ ರಚನೆಯಾಗುವ ಶುಭಗಳಿಗೆ ಕೂಡಿ ಬಂದಿದೆ.

23 ವಾರ್ಡ್‌ಗಳನ್ನು ಹೊಂದಿರುವ ಪುರಸಭೆಗೆ 2018ರ ಆ.31ರಂದು ಚುನಾವಣೆ ನಡೆದಿತ್ತು. 23 ಸ್ಥಾನಗಳ ಪೈಕಿ ಬಿಜೆಪಿ 14, ಕಾಂಗ್ರೆಸ್‌ 4 ಹಾಗೂ ಪಕ್ಷೇತರರು 5 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೇ ಪ್ರಥಮ ಬಾರಿ ಪುರಸಭೆ ಆಡಳಿತದ ಗದ್ದುಗೆ ಏರಲು ಬಿಜೆಪಿ ಉತ್ಸುಕವಾಗಿದೆ.

ಚುನಾವಣೆ ಫಲಿತಾಂಶ ಪ್ರಕಟವಾದ ಸಂಜೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿತ್ತು. ಆಗ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿತ್ತು.

ADVERTISEMENT

ಇಲ್ಲಿನ ಪುರಸಭೆಗೆ ಹಿಂದೆ ಇದ್ದ ಮೀಸಲಾತಿಯನ್ನೇ ಯಥಾವತ್ತಾಗಿ ಪ್ರಕಟಿಸಲಾಗಿದೆ. ಇದರಿಂದಾಗಿ ಇನ್ನುಳಿದ ವರ್ಗಗಳಿಂದ ಗೆದ್ದು ಬಂದಿರುವ ಸದಸ್ಯರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಪ್ರಕಟಿಸಿರುವ ಈ ಮೀಸಲಾತಿ ಬದಲಾಯಿಸಬೇಕು ಎಂದು ಗೆದ್ದ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬಿ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ. ಈಗ ಪ್ರಕಟಗೊಂಡಿರುವ ಮೀಸಲಾತಿ ಬಗ್ಗೆಯೂ ಕೆಲವು ಸದಸ್ಯರಿಗೆ ಅಸಮಾಧಾನವಿದೆ.

ಪಕ್ಷೇತರರಾಗಿ ಗೆದಿದ್ದ 6ನೇ ವಾರ್ಡ್‌ನ ಎಸ್‌.ಸಂತೋಷ್‌ಕುಮಾರ್‌, 8ನೇ ವಾರ್ಡ್‌ನ ಟಿ.ಸಂಪತ್‌ಕುಮಾರ್‌, 15ನೇ ವಾರ್ಡ್‌ನ ಗಿರಿಜಮ್ಮ ಹಾಗೂ 23ನೇ ವಾರ್ಡ್‌ನ ರಾಮಚಂದ್ರಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಬಿಜೆಪಿ ಸದಸ್ಯರ ಸಂಖ್ಯಾಬಲ 18ಕ್ಕೆ ಏರಿಕೆಯಾಗಿದೆ.

ಸದಸ್ಯರಾಗಿ ಆಯ್ಕೆಯಾಗಿರುವ 11ನೇ ವಾರ್ಡ್‌ನ ಎಂ.ಶ್ರೀನಿವಾಸ್‌, 17ನೇ ವಾರ್ಡ್‌ನ ಎಂ.ಮಂಜುನಾಥ್‌, 4ನೇ ವಾರ್ಡ್‌ನ ಸರೋಜಮ್ಮ ಡಾ.ಮಲ್ಲೇಶಪ್ಪ, 2ನೇ ವಾರ್ಡ್‌ನ ಪೂರ್ಣಿಮಾ ಮಹೇಶ್‌, 15ನೇ ವಾರ್ಡ್‌ ಗಿರಿಜಮ್ಮ ಅವರು ಹಿಂದುಳಿದ ವರ್ಗ ‘ಬಿ’ ವರ್ಗಕ್ಕೆ ಸೇರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 5 ಸದಸ್ಯರ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದೆ.ಆಕಾಂಕ್ಷಿಗಳು ಅಧ್ಯಕ್ಷ ಗಾದಿಗೆ ಈಗಾಗಲೇ ಲಾಬಿ ಆರಂಭಿಸಿದ್ದಾರೆ.

ಮಠಾಧೀಶರು ಹಾಗೂ ಸಚಿವರಿಂದ ಸ್ಥಳೀಯ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

***

ಪುರಸಭೆಯ ಸದಸ್ಯರು ಹಾಗೂ ಪಕ್ಷದ ಮುಖಂಡರ ಅಭಿಪ್ರಾಯ ಪಡೆದು ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಯಾರೆಂಬುದನ್ನು ನಿರ್ಧರಿಸಲಾಗುವುದು.

–ಗೂಳಿಹಟ್ಟಿ ಡಿ.ಶೇಖರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.