ADVERTISEMENT

ಓಬವ್ವಳ ಪುಣ್ಯಭೂಮಿ, ಶಕ್ತಿ ಕೇಂದ್ರವಾಗಲಿದೆ

ವಿಧಾನ ಪರಿಷತ್‌ ಸದಸ್ಯ ಪಿ.ಎಂ. ಮುನಿರಾಜು ಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 4:16 IST
Last Updated 8 ಆಗಸ್ಟ್ 2021, 4:16 IST
ಚಿತ್ರದುರ್ಗದ ಐತಿಹಾಸಿಕ ಕೋಟೆಯೊಳಗಿನ ವೀರವನಿತೆ ಒನಕೆ ಓಬವ್ವ ಸಮಾಧಿ ಸ್ಥಳಕ್ಕೆ ಶನಿವಾರ ವಿಧಾನ ಪರಿಷತ್ ಸದಸ್ಯ ಪಿ.ಎಂ. ಮುನಿರಾಜು ಗೌಡ ಭೇಟಿ ನೀಡಿದರು. ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಇದ್ದರು.
ಚಿತ್ರದುರ್ಗದ ಐತಿಹಾಸಿಕ ಕೋಟೆಯೊಳಗಿನ ವೀರವನಿತೆ ಒನಕೆ ಓಬವ್ವ ಸಮಾಧಿ ಸ್ಥಳಕ್ಕೆ ಶನಿವಾರ ವಿಧಾನ ಪರಿಷತ್ ಸದಸ್ಯ ಪಿ.ಎಂ. ಮುನಿರಾಜು ಗೌಡ ಭೇಟಿ ನೀಡಿದರು. ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಇದ್ದರು.   

ಚಿತ್ರದುರ್ಗ: ‘ವೀರವನಿತೆ ಒನಕೆ ಓಬವ್ವ ಸಮಾಧಿಯನ್ನು ವರ್ಷಾಂತ್ಯದೊಳಗೆ ಪುಣ್ಯಭೂಮಿ ಹಾಗೂ ಶಕ್ತಿ ಕೇಂದ್ರವನ್ನಾಗಿ ಮಾಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಂ. ಮುನಿರಾಜು ಗೌಡ (ತುಳಸಿ) ಭರವಸೆ ನೀಡಿದರು.

ಇಲ್ಲಿನ ಐತಿಹಾಸಿಕ ಕೋಟೆಯೊಳಗಿನ ಓಬವ್ವ ಸಮಾಧಿಗೆ ಶನಿವಾರ ಭೇಟಿ ನೀಡಿದ ಅವರು, ‘ಸಮಾಧಿ ಜೀರ್ಣೋದ್ಧಾರ ಕಾರ್ಯಕ್ಕೆ ಇದೀಗ ಚಾಲನೆ ದೊರೆತಿದೆ. ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಓಬವ್ವ ಪರಿವಾರ ಸೇರಿದಂತೆ ರಾಜ್ಯದ ವಿವಿಧೆಡೆ ಇರುವಂಥ ಓಬವ್ವ ಅಭಿಮಾನಿಗಳು ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಯಲ್ಲಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ಎಂದರು.

ADVERTISEMENT

‘ಸಾವಿರಾರು ಜನರ ತ್ಯಾಗ–ಬಲಿದಾನದಿಂದಾಗಿ ಚಿತ್ರದುರ್ಗದ ಕೋಟೆ ರಕ್ಷಣೆಯಾಗಿದೆ. ಅದರಲ್ಲಿ ಓಬವ್ವಳ ಪಾತ್ರ ಪ್ರಮುಖ. ಶಿಥಿಲಾವಸ್ಥೆಯಲ್ಲಿ ಇರುವ ಸಮಾಧಿ ಜೀರ್ಣೋದ್ಧಾರ ಆಗಬೇಕು ಎಂಬ ಕೂಗು ಮೂರು ವರ್ಷಗಳಿಂದ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ನಿಲುಮೆ ಎಂಬ ತಂಡದ ಮೂಲಕ ವ್ಯಾಪಕ ಅಭಿಯಾನ ನಡೆಸಲಾಗಿದೆ. ಈ ಕುರಿತು ಭಾರತೀಯ ಪುರಾತತ್ವ ಇಲಾಖೆ ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕಿ ಮಹೇಶ್ವರಿ ಅವರು ಜೀರ್ಣೋದ್ಧಾರಕ್ಕೆ ಸಮ್ಮತಿ ಸೂಚಿಸಿರುವುದು ಆಶಾದಾಯಕ ಬೆಳವಣಿಗೆ’ ಎಂದುತಿಳಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ‘ಓಬವ್ವ ಧೈರ್ಯ, ಸಾಹಸಕ್ಕೆ ಪ್ರತೀಕ. ಅದೇ ರೀತಿ ಮಹಿಳೆಯರು ಯಾವುದಕ್ಕೂ ಅಂಜದೆ ಪ್ರಬಲರಾಗಿ ವೀರ ನಾರಿಯರಾಗಬೇಕು ಎಂಬುದು ಗುರುಪೀಠದ ಆಶಯವಾಗಿದೆ’ ಎಂದುಹೇಳಿದರು.

‘ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶ. ಹಿಂದುಳಿದ ಸಮುದಾಯಗಳ ಮಹಿಳೆಯರು ಕೂಡ ಈಗಲೂ ಸಶಕ್ತರಾಗಿಲ್ಲ. ಸ್ತ್ರೀಯರು ಸ್ವಾವಲಂಬಿ ಆಗಬೇಕು. ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಅದಕ್ಕಾಗಿ ಸರ್ಕಾರ ಸೌಲಭ್ಯ ಕಲ್ಪಿಸುವ ಮೂಲಕ ಇವರನ್ನು ಮುಖ್ಯವಾಹಿನಿಗೆ ತಂದು ಬಲಗೊಳಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ಮುಖಂಡರಾದ ಸುರೇಶ್‌ ಸಿದ್ಧಾಪುರ, ಹನುಮಂತೇ ಗೌಡ, ಜಯಪಾಲಯ್ಯ, ಶಿವಪ್ರಕಾಶ್ ದಗ್ಗೆ, ನೆಲ್ಲಿಕಟ್ಟೆ ನಾಗರಾಜ್, ಭಾರ್ಗವಿ ದ್ರಾವಿಡ್, ತಿಪ್ಪೇಸ್ವಾಮಿ, ಛಲವಾದಿ ಸಮುದಾಯದ ಮುಖಂಡರಾದ ಅಣ್ಣಪ್ಪ, ನವೀನ್, ಪ್ರಹ್ಲಾದ್ಇದ್ದರು.

ಶೀಘ್ರ ದೆಹಲಿಗೆ ತೆರಳಲಿದೆ ನಿಯೋಗ
ಓಬವ್ವನ ಕಿಂಡಿ ಮತ್ತು ಸಮಾಧಿ ರಾಜ್ಯ ಅಷ್ಟೇ ಅಲ್ಲದೆ, ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೂ ಪ್ರೇರಣೆ ಆಗಬೇಕು. ಅದಕ್ಕಾಗಿ ಅಭಿವೃದ್ಧಿಗೊಳಿಸಬೇಕು ಎಂಬುದಾಗಿ ಪ್ರತಿಭಟನೆಗಳು ನಡೆದಿವೆ. ಸಮುದಾಯದವರ ಒತ್ತಾಯವೂ ಇದೇ ಆಗಿದೆ.

‘ಅಭಿವೃದ್ಧಿ ವಿಚಾರವಾಗಿ ಚರ್ಚಿಸಿ ಸೂಕ್ತ ಅನುದಾನ ಬಿಡುಗಡೆಗಾಗಿ ಇಲಾಖೆಯ ಕೇಂದ್ರ ಸಚಿವ ಕಿಶನ್‌ ರೆಡ್ಡಿ ಅವರ ಬಳಿ ಛಲವಾದಿ ಗುರುಪೀಠದ ಶ್ರೀಗಳೊಂದಿಗೆ ನಿಯೋಗ ತೆರಳಿ ಮನವಿ ಮಾಡಲಿದ್ದೇವೆ’ ಎಂದು ಮುನಿರಾಜು ಗೌಡ ತಿಳಿಸಿದರು.

***

ಓಬವ್ವಳ ಸಮಾಧಿ ಜೀರ್ಣೋದ್ಧಾರ ಆಗಲಿದೆ ಎಂಬ ವಿಷಯ ನಮಗೆ ಸಂತಸ ಉಂಟು ಮಾಡಿದೆ. ಸ್ತ್ರೀ ಕುಲಕ್ಕೆ ಓಬವ್ವ ಎಂದೆಂದಿಗೂ ಸ್ಫೂರ್ತಿಯಾಗಿದ್ದು, ಮಹಿಳೆಯರು ಜಾಗೃತರಾಗಬೇಕಿದೆ.
-ಬಸವನಾಗಿದೇವ ಸ್ವಾಮೀಜಿ, ಛಲವಾದಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.