ADVERTISEMENT

ವಚನಗಳ ಒಳಾರ್ಥ ತಿಳಿಯಲು ಅಧ್ಯಯನ ಅಗತ್ಯ

ವಚನ ವಿಶ್ಲೇಷಣೆ ಮತ್ತು ವ್ಯಕ್ತಿತ್ವದ ಪಥದರ್ಶನ; ಅಂಚೆ ಸಹಾಯಕ ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:47 IST
Last Updated 31 ಅಕ್ಟೋಬರ್ 2025, 5:47 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ವಚನ ಕಾರ್ತೀಕ ಕಾರ್ಯಕ್ರಮ
ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ವಚನ ಕಾರ್ತೀಕ ಕಾರ್ಯಕ್ರಮ   

ಚಿತ್ರದುರ್ಗ: ‘12ನೇ ಶತಮಾನದ ಶಿವಶರಣರ ವಚನಗಳು ಅಷ್ಟು ಸುಲಭವಾಗಿ ಮೇಲ್ನೋಟಕ್ಕೆ ಅರ್ಥವಾಗುವುದಿಲ್ಲ. ಆಳವಾದ ಅಧ್ಯಯನ ನಡೆಸಿದಾಗ ಮಾತ್ರ ಅದರ ಒಳಾರ್ಥ ತಿಳಿಯುತ್ತದೆ’ ಎಂದು ಅಂಚೆ ಸಹಾಯಕ ಆರ್‌.ತಿಪ್ಪೇಸ್ವಾಮಿ ಹೇಳಿದರು.

ನಗರದ ಮುರುಘಾ ಮಠದಲ್ಲಿ ಬುಧವಾರ ನಡೆದ ವಚನ ಕಾರ್ತಿಕ ಕಾರ್ಯಕ್ರಮದಲ್ಲಿ ಶಿವಶರಣ ಸೂಜಿಕಾಯಕದ ರಾಮಿತಂದೆಗಳ ಕುರಿತು ಮಾತನಾಡಿದ ಅವರು, ‘ಶರೀರವನ್ನು ಒಂದು ನಿರುಪಯುಕ್ತ ಸಾಧನವನ್ನಾಗಿ, ಆತ್ಮವನ್ನು ಚೈತನ್ಯಶಕ್ತಿಯಾಗಿ, ಭಗವಂತನನ್ನು ಸರ್ವವ್ಯಾಪಿಯಾಗಿ ನಿರೂಪಿಸುತ್ತ ಹೋಗುತ್ತಾರೆ. ಅವು ಭಕ್ತರ ವಿವೇಕಕ್ಕೆ ಮತ್ತು ತತ್ವಶಾಸ್ತ್ರಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟಿರುವುದನ್ನು ನಾವು ನೋಡಬಹುದಾಗಿದೆ’ ಎಂದರು.

‘ದೇಹ ಮತ್ತು ಆತ್ಮವನ್ನು ಶೂನ್ಯವಾದ ಮತ್ತು ಶುದ್ಧವಾದ ಅನುಭವಕ್ಕೆ ಸಿದ್ಧಪಡಿಸುವ ಮಾರ್ಗವನ್ನು ಇವರ ವಚನಗಳು ತಿಳಿಸುತ್ತವೆ. ರಾಮಿತಂದೆಯವರ ಪೂರ್ವಪರ ವಿಚಾರಗಳು ಸ್ಪಷ್ಟವಾಗಿ ಲಭ್ಯವಿಲ್ಲ. ಸೂಜಿಕಾಯಕದ ರಾಮಿತಂದೆಯ ವಚನಗಳು ಶರಣರ ಕಾಯಕದ ಧರ್ಮದ ವಿಚಾರಗಳನ್ನು ಪ್ರಸ್ತುತಪಡಿಸುತ್ತವೆ. ಸೇವಾಭಾವ ಆತ್ಮಸಂಯಮ, ನಿಷ್ಠೆ ಇವು ವಚನಗಳ ಪ್ರಮುಖ ಆಶಯವಾಗಿವೆ’ ಎಂದು ತಿಳಿಸಿದರು.

ADVERTISEMENT

‘ಸಿದ್ದಮಲ್ಲಪ್ಪ 17ನೇ ಶತಮಾನದವರಾಗಿದ್ದು ಅನೇಕ ವಚನಗಳು ಲಭ್ಯವಾಗಿವೆ. ಅವರ ವಚನಗಳು ಕೆಲವೊಂದು ಸರಳ ಮತ್ತು ಕಠಿಣ ಸ್ವರೂಪದವರಾಗಿದ್ದು, ಧರ್ಮ, ವೈರಾಗ್ಯ, ಭಕ್ತಿಯ ಬಗ್ಗೆ ತಮ್ಮ ವಚನಗಳಲ್ಲಿ ನಿರೂಪಿಸಿದ್ದಾರೆ’ ಎಂದು ಪ್ರಾಧ್ಯಾಪಕ ಚಂದ್ರಶೇಖರ ಕಂಬಳಿ ಹೇಳಿದರು.

‘ಸಿದ್ದಮಲ್ಲಪ್ಪನವರು ಹಂಪಿ ವಿರೂಪಾಕ್ಷ ವಿಜಯನಗರದ ಸಾಮ್ರಾಜ್ಯದ ಭಾಗದಲ್ಲಿದ್ದ ಒಂದು ಮಠದ ಅಧಿಕಾರಿ. ಅವರು ವಚನಗಳಲ್ಲಿ ಮೌಢ್ಯ ಬಿತ್ತರಿಸಬಾರದು ಮತ್ತು ಅದನ್ನು ನೋಡಿ ಸುಮ್ಮನಿರಬಾರದು ಖಂಡಿಸಬೇಕು ಎಂದಿದ್ದಾರೆ’ ಎಂದು ಮುರುಘಾ ಮಠದ ಸಾಧಕ ಗುರು ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ, ಕಲಾವಿದ ಉಮೇಶ್‌ ಪತ್ತಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.