ADVERTISEMENT

ಸೆ.5 ರವರೆಗೆ ಆರೋಪಿ ಶಿವಮೂರ್ತಿ ‌ಮುರುಘಾ ಶರಣರು ಪೊಲೀಸ್ ‌ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಆರೋಪಿ ಶಿವಮೂರ್ತಿ ‌ಮುರುಘಾ ಶರಣರು
ಆರೋಪಿ ಶಿವಮೂರ್ತಿ ‌ಮುರುಘಾ ಶರಣರು   

ಚಿತ್ರದುರ್ಗ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇದೇ 5ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಶುಕ್ರವಾರ ಆದೇಶಿಸಿದೆ.

ನ್ಯಾಯಾಂಗ ಬಂಧನದಲ್ಲಿದ್ದ ಶರಣರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ. ಕೋಮಲಾ, ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲು ಕಾರಾಗೃಹದ ಅಧೀಕ್ಷಕರು ಸಿದ್ಧತೆ ನಡೆಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆಗೆ ಹಾಜರಾದ ಕಾರಾಗೃಹದ ಅಧೀಕ್ಷಕಿ ಅಕ್ಕಮಹಾದೇವಿ, ಆರೋಪಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದಾಗಿ ಮಾಹಿತಿ ನೀಡಿದರಾದರೂ, ಪೂರಕ ದಾಖಲೆ ಹಾಜರುಪಡಿಸಲು ವಿಫಲರಾದರು. ಈ ಹಿನ್ನೆಲೆಯಲ್ಲಿ ಆರೋಪಿಯ ಖುದ್ದು ಹಾಜರಿಗೆ ತಾಕೀತು ಮಾಡಿದ ನ್ಯಾಯಾಧೀಶರು, ಬೆಂಗಳೂರಿಗೆ ಕರೆದೊಯ್ಯುವ ಕೋರಿಕೆಗೂ ಮನ್ನಣೆ ನೀಡಲಿಲ್ಲ.

ADVERTISEMENT

ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದ ಶರಣರನ್ನು ಸಂಜೆ 4.05ಕ್ಕೆ ನ್ಯಾಯಾಲಯಕ್ಕೆ ಕರೆತರಲಾಯಿತು. ಸದಾ ಧರಿಸುತ್ತಿದ್ದ ಹಾವುಗೆ ಅವರ ಕಾಲಿನಲ್ಲಿ ಕಾಣಲಿಲ್ಲ. ಕೋರ್ಟ್‌ ಪ್ರವೇಶಿಸುತ್ತಿದ್ದಂತೆಯೇ ಅವರು ನ್ಯಾಯಾಧೀಶರಿಗೆ ಕೈಮುಗಿದರು. ಕಟಕಟೆಯ ಪಕ್ಕದಲ್ಲಿ ನಿಂತ ಶ್ರೀಗಳು ಆಯತಪ್ಪಿ ಬೀಳುತ್ತಿದ್ದಾಗ ನೆರವಿಗೆ ಧಾವಿಸಿದವಕೀಲರು ಪಕ್ಕದಲ್ಲಿದ್ದ ಬೆಂಚಿನ ಮೇಲೆ ಕೂರಿಸಿದರು. ಅರ್ಧ ಗಂಟೆ ನಡೆದ ಕಲಾಪ ವೀಕ್ಷಿಸುತ್ತಿದ್ದಾಗ ಶ್ರೀಗಳ ಕಣ್ಣಾಲಿಗಳು ತುಂಬಿಕೊಂಡಿದ್ದವು.

ಆರೋಪಿಯನ್ನು 3 ದಿನ ಪೊಲೀಸ್‌ ವಶಕ್ಕೆ ನೀಡಿದ ನ್ಯಾಯಾಧೀಶರು, ಸೆ.5ರಂದು ಬೆಳಿಗ್ಗೆ 11ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹಾಗೂ ಆರೋಪಿಯ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚಿಸಿದರು. ಬಳಿಕ ಶ್ರೀಗಳನ್ನು ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ಮುಂದುವರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.