ADVERTISEMENT

ಆಡಳಿತಾಧಿಕಾರಿ ವಾಪಸ್‌ ಕರೆಸಿಕೊಳ್ಳಲು ಆಗ್ರಹ

ಮುರುಘಾ ಮಠದಲ್ಲಿ ಸರ್ಕಾರದ ಹಸ್ತಕ್ಷೇಪ: ಮಠಾಧೀಶರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 10:45 IST
Last Updated 20 ಡಿಸೆಂಬರ್ 2022, 10:45 IST
ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರಿಗೆ ಸಭೆಯ ನಿರ್ಣಯಗಳನ್ನು ನೀಡಿತು. ಗೋಕಾಕ ಶಾಖಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ ಇದ್ದಾರೆ. 
ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರಿಗೆ ಸಭೆಯ ನಿರ್ಣಯಗಳನ್ನು ನೀಡಿತು. ಗೋಕಾಕ ಶಾಖಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ ಇದ್ದಾರೆ.    

ಚಿತ್ರದುರ್ಗ: ಮುರುಘಾ ಮಠಕ್ಕೆ ನೇಮಕ ಮಾಡಿರುವ ಆಡಳಿತಾಧಿಕಾರಿಯನ್ನು ಸರ್ಕಾರ ಕೂಡಲೇ ವಾಪಸ್‌ ಕರೆಸಿಕೊಳ್ಳಬೇಕು. ಇಲ್ಲವಾದರೆ ಡಿ.26ರಂದು ಬೆಳಗಾವಿ ಅಥವಾ ಚಿತ್ರದುರ್ಗದಲ್ಲಿ ಧರಣಿ ನಡೆಸಲಾಗುವುದು ಎಂದು ಮಠಾಧೀಶರು ಎಚ್ಚರಿಕೆ ನೀಡಿದರು.

ಮುರುಘಾ ಮಠದಲ್ಲಿ ಮಂಗಳವಾರ ನಡೆದ ಮಠಾಧೀಶರ ಸಮಾಗಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯದ ವಿವಿಧೆಡೆಯ ಹಲವು ಸಮುದಾಯದ 30ಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಿರ್ಣಯಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರವಾನಿಸಲಾಯಿತು.

‘ಆಡಳಿತಾಧಿಕಾರಿ ನೇಮಕ ಮಾಡುವ ಮೂಲಕ ಮಠಧೀಶರ ಹಕ್ಕನ್ನು ಸರ್ಕಾರ ಕಸಿದುಕೊಂಡಿದೆ. ಮಠದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ಲಿಂಗಾಯತ ಸಮುದಾಯದ ಮಠಗಳ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ. ಐದು ವರ್ಷಗಳ ಹಿಂದೆ ರಾಮಚಂದ್ರಾಪುರ ಮಠ ಇಂತಹದೇ ಸ್ಥಿತಿ ಎದುರಿಸಿದಾಗ ಆಡಳಿತಾಧಿಕಾರಿ ನೇಮಕ ಮಾಡದ ಸರ್ಕಾರ, ಧ್ವಂಧ್ವ ನೀತಿ ಅನುಸರಿಸುತ್ತಿರುವುದು ಖಂಡನೀಯ’ ಎಂದು ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವಪ್ರಭು ಸ್ವಾಮೀಜಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದರು.

ADVERTISEMENT

‘ಶಿವಮೂರ್ತಿ ಶರಣರು ಹೈಕೋರ್ಟ್‌ ನಿರ್ದೇಶನದ ಪ್ರಕಾರ ಜನರಲ್‌ ಪವರ್‌ ಆಫ್‌ ಅಟಾರ್ನಿಯನ್ನು (ಜಿಪಿಎ) ತಮಗೂ ಹಾಗೂ ಎಸ್‌.ಬಿ.ವಸ್ತ್ರಮಠ ಅವರಿಗೂ ಹಸ್ತಾಂತರಿಸಿದ್ದರು. ಮುರುಘಾ ಮಠದಲ್ಲಿ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿತ್ತು. ಆಡಳಿತಾಧಿಕಾರಿ ಅಗತ್ಯ ಇಲ್ಲ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವರಿಕೆ ಮಾಡಿಕೊಡಲಾಗಿತ್ತು. ಮನವಿ ಪರಿಗಣಿಸದೇ ಆಡಳಿತಾಧಿಕಾರಿ ನೇಮಿಸಿದ್ದು ಬರಸಿಡಿಲು ಬಡಿದಂತೆ ಆಗಿದೆ. ಇಂತಹ ಸ್ಥಿತಿ ಉಳಿದ ಮಠಗಳಿಗೂ ಬರಬಹುದು’ ಎಂದರು.

ರಕ್ಷಣಾ ಕಾಯ್ದೆಗೆ ಒತ್ತಾಯ

ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಮಠಾಧೀಶರಿಗೆ ಕಿರುಕುಳ ನೀಡಲಾಗುತ್ತಿದೆ. ಮಠಾಧೀಶರ ರಕ್ಷಣೆಗೆ ಕಾಯ್ದೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಬಸವಪ್ರಭು ಸ್ವಾಮೀಜಿ ಮನವಿ ಮಾಡಿದರು.

‘ವರದಕ್ಷಿಣೆ, ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯ ರೀತಿಯಲ್ಲಿ ಪೋಕ್ಸೊ ಕಾಯ್ದೆಯೂ ದುರ್ಬಳಕೆ ಆಗುತ್ತಿದೆ. ಮಠಾಧೀಶರ ಹಕ್ಕಿಗೆ ಚ್ಯುತಿ ಉಂಟು ಮಾಡುವ ಪಿತೂರಿಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಯಾರೊಬ್ಬರೂ ಮಠಾಧೀಶರಾಗಲು ಮುಂದೆ ಬರುವುದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಗೋಕಾಕ ಶಾಖಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ, ‘ಕಾರ್ತಿಕ ಮಾಸದ ಪ್ರಯುಕ್ತ ದೇಗುಲ ಹಾಗೂ ಮಠಗಳಲ್ಲಿ ಜಾತ್ರೆ, ಉತ್ಸವ ನಡೆಯುತ್ತಿವೆ. ಹೀಗಾಗಿ, ಮಠಾಧೀಶರು ಸಭೆ ಸೇರಿ ಚರ್ಚಿಸುವುದು ಕೊಂಚ ವಿಳಂಬವಾಗಿದೆ. ಸಭೆಯ ನಿರ್ಣಯಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಸರ್ಕಾರ ಸ್ಪಂದಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಬಸವಕಲ್ಯಾಣದ ಶಿವಾನಂದ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಕಲಬುರ್ಗಿಯ ಸಿದ್ಧಬಸವ ಕಬೀರ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಕೊಪ್ಪಳದ ಸಿದ್ದಲಿಂಗ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.