
ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಟ. ಇಂತಹ ಪರಿಸ್ಥಿತಿಯ ಮಧ್ಯೆ ಬುಡಕಟ್ಟು ಸಮುದಾಯದ ಹಟ್ಟಿಗಳಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಅಂತರ್ಜಲ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡ ನಾಯಕನಹಟ್ಟಿ ಹೋಬಳಿಯ ಕವಲನಹಳ್ಳಿಯ ಭಾಗ್ಯಮ್ಮ ಅವರಿಗೆ ನಬಾರ್ಡ್ ಸಂಸ್ಥೆ ಎರಡು ಬಾರಿ ‘ಬೆಸ್ಟ್ ಅವಾರ್ಡ್’ ನೀಡಿ ಗೌರವಿಸಿದೆ. ಇದು ಜಿಲ್ಲೆಗೆ ಸಂದ ಮೊದಲ ಮಹಿಳಾ ಪ್ರಶಸ್ತಿ.
ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿ ಕವಲನಹಳ್ಳಿಯಲ್ಲಿ ತಮ್ಮ ಜಮೀನಿನ ತೋಟದ ಅಲ್ಲಲ್ಲಿ 60 ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಮ್ಯಾಸಬೇಡ ಸಮುದಾಯ ಈ ಕುಗ್ರಾಮದಲ್ಲಿ 260ಕ್ಕೂ ಹೆಚ್ಚು ಜನಸಂಖ್ಯೆ ಇದೆ.
10 ರಿಂದ 15 ಜನರು ಇರುವ ಕೂಡು ಕುಟುಂಬದ ಮಹಿಳೆ ಭಾಗ್ಯಮ್ಮ ಓದಿರುವುದು ಎಸ್ಸೆಸ್ಸೆಲ್ಸಿ. ಆದರೂ ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ಜಾಗೃತಿಯ ಬಗ್ಗೆ ಇವರಿಗೆ ಅಪಾರ ಜ್ಞಾನ.
2009ನೇ ಸಾಲಿನಲ್ಲಿ ಮೈರಾಡ ಸಂಸ್ಥೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಾಗ್ಯಮ್ಮ ತಮ್ಮ ಸುತ್ತಮುತ್ತಲ ಹಟ್ಟಿಗಳಲ್ಲಿ 28 ಮಹಿಳೆಯರನ್ನು ಸಂಘಟಿಸಿ ಶ್ರೀ ದುರ್ಗಾಂಬಿಕಾ ಹಾಗೂ ಎಲ್ಲಮ್ಮದೇವಿ ಜಲಾನಯನ ಸ್ವಸಹಾಯ ಮಹಿಳಾ ಸಂಘ ರಚಿಸಿದರು. ಸಂಘದ ಪರಿಕಲ್ಪನೆ, ಉದ್ದೇಶ, ನಾಯಕತ್ವದ ಗುಣ, ಉಳಿತಾಯ, ಜೀವನ ನಿರ್ವಹಣೆ, ಆದಾಯೋತ್ಪನ್ನ, ಸಮುದಾಯದ ಸಹಭಾಗಿತ್ವದ ಯೋಜನೆಗಳ ಅನುಷ್ಠಾನದ ಬಗೆಗಿನ ತಿಳಿವಳಿಕೆಗಳನ್ನು ಅಧಿಕಾರಿಗಳಿಂದ ಪಡೆದಿದ್ದಾರೆ.
‘ಸಂಸ್ಥೆ ಪ್ರೇರಣೆಯಿಂದ ಆರಂಭಿಸಿದ ಸಂಘದಲ್ಲಿ ಒಟ್ಟು ₹ 6 ಲಕ್ಷ ಉಳಿತಾಯವಿದ್ದು, ಬ್ಯಾಂಕಿನಲ್ಲಿ ₹ 2 ಲಕ್ಷ ಎಫ್‍ಡಿ ಇಡಲಾಗಿದೆ. ₹1ರ ಬಡ್ಡಿದರದಲ್ಲಿ ಮೈರಾಡ ಸಂಸ್ಥೆಯಿಂದ ಪಡೆದ ₹ 10 ಲಕ್ಷ ಸಾಲವನ್ನು ಮಹಿಳಾ ಸದಸ್ಯರ ಸ್ವ ಉದ್ಯೋಗಕ್ಕಾಗಿ ಬಳಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಭಾಗ್ಯಮ್ಮ.
‘ಜರ್ಮನ್ ಪ್ರಾಜೆಕ್ಟ್ (ಕೆಎಫ್‍ಡಬ್ಲುಸಿಸಿಎ) ಯೋಜನೆಯಡಿ ₹ 48 ಲಕ್ಷ ವೆಚ್ಚದಲ್ಲಿ ರೈತರ ಹೊಲದಲ್ಲಿ ಬದು, ಗುಂಡಿ, ಕಲ್ಲಿನಬದು, ಕೃಷಿಹೊಂಡ, ಹರಿಯುವ ನೀರನ್ನು ತಡೆಯಲು ಕೋಡಿ ನಿರ್ಮಾಣ, ಜಲ ಮರುಪೂರಣಕ್ಕಾಗಿ ಕೊಳವೆ ಬಾವಿಗಳ ಬಳಿ ಇಂಗುಗುಂಡಿ ನಿರ್ಮಾಣ, ಬಂಜರು ಭೂಮಿಯಲ್ಲಿ ಹಸಿರು ಸಸಿ ಹಾಗೂ ಹುಲ್ಲಿನ ಬೀಜ ಬಿತ್ತನೆ ಸೇರಿ 10 ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.
‘ಹವಾಮಾನ ಬದಲಾವಣೆ ಯೋಜನೆಯಡಿ ಬುಡಕಟ್ಟು ಸಮುದಾಯದ ಹಟ್ಟಿಗಳಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಅಂತರ್ಜಲ ವೃದ್ಧಿ, ಹಸಿರೀಕರಣ ಮಣ್ಣಿನ ಫಲವತ್ತತೆ, ಒಣಭೂಮಿಯಲ್ಲಿ ಆಳವಾದ ಉಳುಮೆ, ಡ್ರಿಪ್ ಅಳವಡಿಕೆ, ಮಣ್ಣಿನ ಸಂರಕ್ಷಣೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದ ಪರಿಣಾಮವಾಗಿ ರಾಗಿ, ಜೋಳ, ಈರುಳ್ಳಿ, ಸೊಪ್ಪು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಸಂಘದಲ್ಲಿ ದೊರೆತ ಸಾಲ ಸೌಲಭ್ಯದಿಂದ ಎಮ್ಮೆ, ಹಸು ಹಾಗೂ ಕುರಿ ಸಾಕಣೆಯಿಂದ ಹೈನುಗಾರಿಕೆ ಆರಂಭಿಸಿ ಇದರಿಂದ ಉತ್ತಮ ಜೀವನ ನಿರ್ವಹಿಸುತ್ತಿದ್ದಾರೆ’ ಎಂದು ಭಾಗ್ಯಮ್ಮ ತಿಳಿಸಿದರು.
‘ಧಾರವಾಡ, ಹುಬ್ಬಳ್ಳಿ, ಆಂಧ್ರಪ್ರದೇಶ, ಬಾಗಲಕೋಟೆ, ಬಬ್ಬೂರು ಫಾರಂ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಎಲ್ಲಾ ಮಹಿಳೆಯರು ಭಾಗವಹಿಸಿದ್ದೇವೆ. ಎಲ್ಲ ಸದಸ್ಯರೂ ಆರೋಗ್ಯ ವಿಮೆ ಹೊಂದಿದ್ದೇವೆ’ ಎಂದು ಹೇಳಿದರು.
*
ಸಂಘಗಳು ಕೆಲಸ ಉಳಿತಾಯ, ವ್ಯವಹಾರಗಳಷ್ಟೇ ಅಲ್ಲ. ಸಮುದಾಯದ ಸಹಭಾಗಿತ್ವದಲ್ಲಿ ವಿವಿಧ ಕೃಷಿ ಚಟುವಟಿಕೆ ಅಭಿವೃದ್ಧಿ ಪಡಿಸಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು.
-ಭಾಗ್ಯಮ್ಮ, ಪ್ರಶಸ್ತಿ ಪುರಸ್ಕೃತ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.