ADVERTISEMENT

ಸಮಸ್ಯೆ ಆಲಿಸದಿದ್ದರೆ ಕಠಿಣ ತೀರ್ಮಾನ: ನದಾಫ– ಪಿಂಜಾರ ಸಮುದಾಯದ ಮುಖಂಡರ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 18:19 IST
Last Updated 25 ಅಕ್ಟೋಬರ್ 2025, 18:19 IST
ಚಿತ್ರದುರ್ಗದಲ್ಲಿ ನಡೆದ ನದಾಫ್‌–ಪಿಂಜಾರರ ಸಮಾವೇಶದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಲೀಲ್‌ ಸಾಬ್‌ ಅವರು ಸಚಿವ ಡಿ.ಸುಧಾಕರ್‌, ಶಾಸಕ ಟಿ.ರಘುಮೂರ್ತಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಅರ್ಪಿಸಿದರು
ಚಿತ್ರದುರ್ಗದಲ್ಲಿ ನಡೆದ ನದಾಫ್‌–ಪಿಂಜಾರರ ಸಮಾವೇಶದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಲೀಲ್‌ ಸಾಬ್‌ ಅವರು ಸಚಿವ ಡಿ.ಸುಧಾಕರ್‌, ಶಾಸಕ ಟಿ.ರಘುಮೂರ್ತಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಅರ್ಪಿಸಿದರು   

ಚಿತ್ರದುರ್ಗ: ‘ಕಾಂಗ್ರೆಸ್‌ ಸರ್ಕಾರ ನದಾಫ– ಪಿಂಜಾರರ ಬಗ್ಗೆ ತಾತ್ಸಾರ ಭಾವ ತಾಳುತ್ತಿದೆ. ಸಮಸ್ಯೆ ಹೇಳಿಕೊಳ್ಳಲು ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿ ಭೇಟಿಗೆ ಯತ್ನಿಸಿದರೂ ಸಾಧ್ಯವಾಗಿಲ್ಲ. ನ.20ರೊಳಗೆ ಅವಕಾಶ ಸಿಗದಿದ್ದರೆ ಕಠಿಣ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ನದಾಫ– ಪಿಂಜಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಲೀಲ್‌ ಸಾಬ್‌ ಹೇಳಿದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ನದಾಫ– ಪಿಂಜಾರ ಸಂಘದ 33ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಾಸಕರು, ಸಚಿವರಿಗೆ ಸಂಕಷ್ಟ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಜನತಾ ದರ್ಶನದಲ್ಲಿ ಕೊಟ್ಟ ಮನವಿಗಳಿಗೆ ಬೆಲೆ ಇಲ್ಲದಂತಾಗಿದ. ಅಲ್ಲಿ ಕೊಟ್ಟ ಅರ್ಜಿಗಳನ್ನು ಕಸದ ಬುಟ್ಟಿಗೆ ಬಿಸಾಡುತ್ತಾರೆ. ಸರ್ಕಾರಕ್ಕೆ ಸಮುದಾಯದವರನ್ನು ಕಂಡರೆ ತಿರಸ್ಕಾರ ಇದ್ದಂತಿದೆ. ನಮ್ಮ ಅವಶ್ಯಕತೆ ಇಲ್ಲ ಎಂದಾದರೂ ತಿಳಿಸಲಿ. ನಾವು ನಿಗಮ– ಮಂಡಳಿಗಳಲ್ಲಿ ಸ್ಥಾನ ಕೇಳುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಲು ಭೇಟಿಗಾಗಿ ಸಮಯ ಕೇಳುತ್ತಿದ್ದೇವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ನಮ್ಮದು 19 ಲಕ್ಷ ಜನಸಂಖ್ಯೆ ಇದೆ. 2015ರ ಸಮೀಕ್ಷೆಯಲ್ಲಿ ಕೇವಲ 1 ಲಕ್ಷ ಎಂದು ತೋರಿಸಿದ್ದಾರೆ. ನಮ್ಮನ್ನು ಪ್ರವರ್ಗ–1ರಲ್ಲಿ ಪ್ರತ್ಯೇಕಿಸಿರುವುದು ಗೊಂದಲ ಸೃಷ್ಟಿಸಿದೆ. ನಮಗೆ ಪ್ರತ್ಯೇಕತೆ ಬೇಕಿಲ್ಲ. ಆದರೆ,  ಅಲ್ಪಸಂಖ್ಯಾತರ ಯೋಜನೆಗಳಲ್ಲಿ ನದಾಫ– ಪಿಂಜಾರರಿಗೆ ಶೇ 25ರಷ್ಟು ಮೀಸಲಾತಿ ಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಚಿವ ಡಿ.ಸುಧಾಕರ್‌, ‘ನದಾಫ– ಪಿಂಜಾರ ಸಮುದಾಯದ ಬಗ್ಗೆ ಮುಖ್ಯಮಂತ್ರಿಯವರಿಗೆ ವಿಶೇಷ ಪ್ರೀತಿ ಇದೆ. ಅವರ ಭೇಟಿಗಾಗಿ ಗಡುವು ನೀಡುವುದು ಬೇಡ. ಆದಷ್ಟು ಬೇಗ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರೊಂದಿಗೆ ಭೇಟಿಗೆ ಸಮಯ ನಿಗದಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.