ADVERTISEMENT

ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:21 IST
Last Updated 9 ಜುಲೈ 2025, 4:21 IST
ಜಿ.ಎಸ್‌.ಶ್ರೀದೇವಿ ಅವರು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರಿಗೆ ರಾಜೀನಾಮೆ ಸಲ್ಲಿಸಿದರು
ಜಿ.ಎಸ್‌.ಶ್ರೀದೇವಿ ಅವರು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರಿಗೆ ರಾಜೀನಾಮೆ ಸಲ್ಲಿಸಿದರು   

ಚಿತ್ರದುರ್ಗ: ನಗರಸಭೆ ಉಪಾಧ್ಯಕ್ಷೆ ಜಿ.ಎಸ್‌.ಶ್ರೀದೇವಿ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಪತ್ರವನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ನಗರಸಭೆ ಪೌರಾಯುಕ್ತೆ ರೇಣುಕಾ ಅವರಿಗೆ ಸಲ್ಲಿಸಿದರು.

ವಾರ್ಡ್ ಸಂಖ್ಯೆ 33ರಿಂದ ಆಯ್ಕೆಯಾಗಿದ್ದ ಅವರು, 2024ರ ಆಗಸ್ಟ್‌ನಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. 11 ತಿಂಗಳು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ‘ವೈಯಕ್ತಿಕ ಕಾರಣಗಳಿಂದಾಗಿ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಾಗದೇ ಇರುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ರಸ್ತೆಗಳಿಗೆ ನಾಮಕರಣ: ರಾಜೀನಾಮೆ ಸಲ್ಲಿಸುವುದಕ್ಕೂ ಮೊದಲು ಶ್ರೀದೇವಿ ಅವರು ನಗರದ ವಿವಿಧೆಡೆ ರಸ್ತೆಗಳಿಗೆ, ವೃತ್ತಗಳಿಗೆ ನಾಮಕರಣ ಮಾಡಿ ಫಲಕ ಅನಾವರಣ ಮಾಡಿದರು. ಜೋಗಿಮಟ್ಟಿ ರಸ್ತೆ 4ನೇ ಕ್ರಾಸ್‌ಗೆ ಮಹರ್ಷಿ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಿ ಫಲಕ ಅಳವಡಿಸಿದರು. ಜೋಗಿಮಟ್ಟಿ ರಸ್ತೆಯ 3ನೇ ಕ್ರಾಸ್‌ಗೆ ಎಪಿಜೆ ಅಬ್ದುಲ್‌ ಕಲಾಂ ವೃತ್ತ ಎಂದು ನಾಮಕರಣ ಮಾಡಿದರು.

1ನೇ ಕ್ರಾಸ್‌ಗೆ ಪೈಲ್ವಾನ್‌ ನಂಜಪ್ಪ ವೃತ್ತ ಎಂದು ನಾಮಫಲಕ ಅನಾವರಣಗೊಳಿಸಿದರು. ಸ್ಟೇಡಿಯಂ ರಸ್ತೆಗೆ ಸರ್ವಪಲ್ಲಿ ರಾಧಾಕೃಷ್ಣ ರಸ್ತೆ ನಾಮಕರಣ ಮಾಡಿ ಫಲಕ ಅಳವಡಿಸಿದರು. ನಂತರ ಜಿಲ್ಲಾಧಿಕಾರಿ, ಪೌರಾಯುಕ್ತರ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.

ADVERTISEMENT

‘ವೈಯಕ್ತಿಕ, ರಾಜಕೀಯ ಕಾರಣಗಳಿಗೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ, ರಾಜೀನಾಮೆಗೂ ಮೊದಲು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ ತೃಪ್ತಿ ಇದೆ’ ಎಂದು ಶ್ರೀದೇವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.