ADVERTISEMENT

ನಾಯಕನಹಟ್ಟಿ ದೇವಾಲಯ: ವರ್ಷ ಕಳೆದರೂ ಮಳಿಗೆಗಳಿಗಿಲ್ಲ ಹರಾಜು ಭಾಗ್ಯ!

ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ದೇವಾಲಯ; ಟೆಂಡರ್‌ ಪ್ರಕ್ರಿಯೆ ನನೆಗುದಿಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:56 IST
Last Updated 9 ಸೆಪ್ಟೆಂಬರ್ 2025, 7:56 IST
ನಾಯಕನಹಟ್ಟಿ ಪಟ್ಟಣದ ಒಳಮಠ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು
ನಾಯಕನಹಟ್ಟಿ ಪಟ್ಟಣದ ಒಳಮಠ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು   

ವಿ.ಧನಂಜಯ

ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಹಾಗೂ ಹೊರಮಠದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಮಳಿಗೆಗಳು ಬಿಕೋ ಎನ್ನುತ್ತಿವೆ.

‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ತತ್ವ ಸಾರಿದ ಕಾಯಕ ಯೋಗಿ ಎಂದೇ ಜನಮಾನಸದಲ್ಲಿ ಮನೆ ಮಾಡಿರುವ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿಗೆ ಲಕ್ಷಾಂತರ ಭಕ್ತಗಣವಿದೆ. ಪಟ್ಟಣದಲ್ಲಿ ಗುರು ತಿಪ್ಪೇರುದ್ರಸ್ವಾಮಿಯ ಒಳಮಠ ಮತ್ತು ಹೊರಮಠ ಎಂಬ ಎರಡು ದೇಗುಲಗಳಿವೆ. ವರ್ಷದ ಎಲ್ಲ ದಿನಗಳಲ್ಲೂ ಈ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಇದಕ್ಕಾಗಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ.

ADVERTISEMENT

ದೇವಾಲಯಕ್ಕೆ ಬರುವ ಭಕ್ತರು ಹೂವು ಹಣ್ಣು ಕಾಯಿಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಎರಡೂ ದೇವಾಲಯಗಳ ಮುಂಭಾಗದಲ್ಲಿ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳಿರಲಿಲ್ಲ. ದೇಗುಲದ ಮುಂಭಾಗದಲ್ಲಿ ಸ್ಥಳೀಯರೇ ಚಿಕ್ಕಪುಟ್ಟ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ಕೆಲವು ವೇಳೆ ಗೂಡಂಗಡಿಗಳು ರಸ್ತೆಯನ್ನು ಆಕ್ರಮಿಸುವ ಪರಿಣಾಮ ತಮ್ಮ ವಾಹನಗಳಲ್ಲಿ ಬರುವ ಭಕ್ತರಿಗೆ ಕಿರಿಕಿರಿ ಉಂಟಾಗುತ್ತದೆ. ಇದರಿಂದ ದೇವಾಲಯದ ಮುಂಭಾಗದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಎದುರಾಗುತ್ತದೆ. 

ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ 2021ರಲ್ಲಿ ಲೋಕೋಪಯೋಗಿ ಇಲಾಖೆಯು ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅಡಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಒಳಮಠದ ಮುಂಭಾಗದಲ್ಲಿ 17 ಕೊಠಡಿಗಳು, ಹೊರಮಠದ ಮುಂಭಾಗದಲ್ಲಿ 7 ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ವಿದ್ಯುತ್ ಸಂಪರ್ಕ ಒದಗಿಸಿದೆ. ಅವುಗಳನ್ನು ದೇವಾಲಯದ ಸುಪರ್ದಿಗೂ ನೀಡಿದೆ.

24 ಕೊಠಡಿಗಳನ್ನು ಒಂದು ವರ್ಷದ ಹಿಂದೆಯೇ ದೇವಾಲಯದ ಅಧೀನಕ್ಕೆ ನೀಡಿದ್ದರೂ, ವ್ಯಾಪಾರಿಗಳಿಗೆ ಲಭ್ಯವಾಗಿಲ್ಲ. ನಿಯಮಾವಳಿಯಂತೆ ಹರಾಜು ಪ್ರಕ್ರಿಯೆ ಆರಂಭಿಸಿಲ್ಲ. ಇದರಿಂದಾಗಿ ವ್ಯಾಪಾರಿಗಳು ಚಿಕ್ಕ ಚಿಕ್ಕ ಅಂಗಡಿಗಳಲ್ಲೇ ವ್ಯಾಪಾರ ವಹಿವಾಟು ಮುಂದುವರಿಸಿದ್ದಾರೆ. 

ಕಸದ ಕೂಪವಾದ ಮಳಿಗೆಗಳು: 

ವರ್ಷದ ಹಿಂದೆಯೇ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳನ್ನು 5 ತಿಂಗಳ ಹಿಂದೆಯೇ ಉದ್ಘಾಟಿಸಲಾಗಿದೆ. ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಇದೀಗ ಕಸದರಾಶಿ ಬಿದ್ದಿದೆ. ಎಲ್ಲೆಂದರಲ್ಲಿ ಗುಟ್ಕಾ, ಎಲೆ ಅಡಿಕೆ ತಂಬಾಕು ತಿಂದು ಉಗಿದಿರುವುದು ಕಂಡುಬರುತ್ತದೆ. ಕೊಠಡಿಗಳ ಒಳಭಾಗದಲ್ಲಿ ಜೇಡರ ಬಲೆಗಳಿವೆ. 

ಒಳಮಠದ ಮುಂಭಾಗದಲ್ಲಿ ಕೆಲವೇ ವರ್ಗದ ಜನರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ವಾಣಿಜ್ಯ ಮಳಿಗೆಗಳನ್ನು ಹರಾಜು ಪ್ರಕ್ರಿಯೆ ನಡೆಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ಸಮುದಾಯದವರಿಗೂ ಕೊಠಡಿಗಳು ಲಭ್ಯವಾಗುತ್ತವೆ ಎನ್ನುತ್ತಾರೆ ವರ್ತಕ ಪಿ.ರುದ್ರೇಶ.

ಟಿ.ರುದ್ರಮುನಿ
ಎಚ್.ಗಂಗಾಧರಪ್ಪ

ಸಕಾಲದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದರೆ ಲಕ್ಷಾಂತರ ಆದಾಯ ದೇಗುಲಕ್ಕೆ ಬರುತ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಣಿಜ್ಯ ಮಳಿಗೆಗಳು ಉದ್ಘಾಟನೆಗೊಂಡಿದ್ದರೂ ಬಳಕೆಗೆ ಸಿಗುತ್ತಿಲ್ಲ

-ಟಿ.ರುದ್ರಮುನಿ ಗ್ರಾಮಸ್ಥ

---

ಇನ್ನೆರೆಡು ತಿಂಗಳಲ್ಲಿ ಮೀಸಲಾತಿ ರೋಸ್ಟರ್ ಮಾನದಂಡದಂತೆ ಎಲ್ಲಾ ವಾಣಿಜ್ಯ ಮಳಿಗೆ ಕೊಠಡಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ಕಾರ್ತೀಕೋತ್ಸವದ ವೇಳೆಗೆ ಬಾಡಿಗೆಗೆ ನೀಡಲಾಗುವುದು

-ಎಚ್.ಗಂಗಾಧರಪ್ಪ ದೇವಾಲಯದ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.