ಚಿತ್ರದುರ್ಗ/ನಾಯಕನಹಟ್ಟಿ: ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಿಂದ ನಿರ್ಮಿಸಿರುವ ತರಕಾರಿ ಮಾರುಕಟ್ಟೆ, ಸಂತೆ ಮೈದಾನ, ಹಳ್ಳಿ ಸಂತೆ ಹಾಗೂ ಕಿರು ತರಕಾರಿ ಮಾರುಕಟ್ಟೆಗಳು ತ್ಯಾಜ್ಯ ಸಂಗ್ರಹಗಾರಗಳಾಗಿವೆ. ಇದರಿಂದ ವ್ಯಾಪಾರಿಗಳು ರಸ್ತೆಯಲ್ಲೇ ವಹಿವಾಟು ನಡೆಸುವಂತಾಗಿದೆ.
ಮಾರುಕಟ್ಟೆಗಳಲ್ಲಿ ಮೂಲ ಸೌಲಭ್ಯ ಮರೀಚಿಕೆಯಾಗಿರುವುದರಿಂದ ತರಕಾರಿ, ದವಸ, ಧಾನ್ಯ ತರುವವರಿಗೆ ಮಳೆ, ಗಾಳಿಯಿಂದ ರಕ್ಷಿಸುವ ವ್ಯವಸ್ಥೆ ಇಲ್ಲವಾಗಿದೆ. ರೈತರು, ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಶೌಚಾಲಯ ವ್ಯವಸ್ಥೆ ದೂರದ ಮಾತಾಗಿದೆ.
ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಿಂದ ಜಿಲ್ಲೆಯಲ್ಲಿ ಒಟ್ಟು 13 ಗ್ರಾಮೀಣ ಸಂತೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಎಪಿಎಂಸಿಯ ವಿವಿಧ ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ 2002ರಲ್ಲಿ ಚಿಕ್ಕಗೊಂಡನಹಳ್ಳಿ, 2015ರಲ್ಲಿ ₹30 ಲಕ್ಷ ವೆಚ್ಚದಲ್ಲಿ ಸಿರಿಗೆರೆ ಗ್ರಾಮ, 2020ರಲ್ಲಿ ₹ 75 ಲಕ್ಷ ವೆಚ್ಚದಲ್ಲಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಸಂತೆ ಕಟ್ಟೆ ನಿರ್ಮಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ, ಹೊಸದುರ್ಗ ತಾಲ್ಲೂಕಿನ ಬೆಲಗೂರು, ತುರವನೂರು, ಎಚ್.ಡಿ.ಪುರ, ಮುತ್ತಗದೂರು, ಮಾಡದಕೆರೆ, ಶ್ರೀರಾಂಪುರ, ನಾಗಸಮುದ್ರ, ನನ್ನಿವಾಳ, ಎಂ.ಡಿ.ಕೋಟೆಯಲ್ಲಿ ಲಕ್ಷಾಂತರ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಇವು ಎಲ್ಲಿವೆ ಎಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದೊಡ್ಡಸಿದ್ದವ್ವನಹಳ್ಳಿಯಲ್ಲಿ ನಿರ್ಮಿಸಿರುವ ಸಂತೆ ಕಟ್ಟೆಯಲ್ಲಿ ಈವರೆಗೆ ಒಂದೇ ಒಂದು ದಿನವೂ ಸಂತೆ ನಡೆದಿಲ್ಲ. ಊರಿನ ಹೊರಭಾಗದಲ್ಲಿ ನಿರ್ಮಿಸಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಗ್ರಾಮಸ್ಥರು.
ಬಹುತೇಕ ಕಡೆ ಗ್ರಾಮದ ಹೊರ ಭಾಗದಲ್ಲಿ ನಿರ್ಮಿಸಿರುವ ಕಾರಣ ಈವರೆಗೆ ಒಂದು ದಿನವೂ ವ್ಯಾಪಾರ ನಡೆದ ಹುರುಹು ಸಿಗುವುದಿಲ್ಲ. ಇವುಗಳು ಜಾನುವಾರು ಕಟ್ಟುವ ಕೊಟ್ಟಿಗೆ, ಕಾರು, ಬೈಕ್ ನಿಲ್ದಾಣ, ಇಟ್ಟಿಗೆ, ಮರಳು ಸಂಗ್ರಹಕ್ಕೆ ಹಾಗೂ ಮದ್ಯಪಾನಿಗಳ ಕೇಂದ್ರಗಳಾಗಿ ಬದಲಾಗಿವೆ.
ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು ಏಜೆನ್ಸಿಗಳ ಮೂಲಕ ಮಾರುಕಟ್ಟೆ ನಿರ್ಮಾಣ ಮಾಡಿದೆ. ಕುಡಿಯುವ ನೀರು, ಶೌಚಾಲಯ, ತರಕಾರಿ ಸ್ವಚ್ಛಗೊಳಿಸುವ ವ್ಯವಸ್ಥೆ, ಸೆಪ್ಟಿಕ್ ಟ್ಯಾಂಕ್ ಹಾಗೂ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾರುಕಟ್ಟೆ ವಿನ್ಯಾಸದಲ್ಲಿ ತಿಳಿಸಲಾಗಿದೆ. ಆದರೆ ಮಾರುಕಟ್ಟೆಗಳು ಈ ಎಲ್ಲ ಸೌಲಭ್ಯಗಳಿಂದಲೂ ವಂಚಿತವಾಗಿವೆ.
ನಾಯಕನಹಟ್ಟಿಯ ಸಂತೆ ಜಾಗದಲ್ಲಿ ಎಪಿಎಂಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಇದರಿಂದ ವಾರದ ಸಂತೆಗೆ ಜಾಗವಿಲ್ಲದಂತಾಗಿ, ರಾಜ್ಯ ಹೆದ್ದಾರಿಯಲ್ಲೇ ವ್ಯಾಪಾರ ವಹಿವಾಟು ನಡೆಸುವಂತಾಗಿದೆ. 48 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ಇಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತದೆ. ಆದರೆ ವ್ಯಾಪಾರಸ್ಥರಿಗೆ ಯಾವುದೇ ಮೂಲ ಸೌಲಭ್ಯವಿಲ್ಲದೆ ಹೈರಾಣಾಗಿದ್ದಾರೆ. ಸಂತೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಮಹಿಳೆಯರು ವ್ಯಾಪಾರ ನಡೆಸುವ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ. ಕೋವಿಡ್ ಬಳಿಕ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದೆ.
ಗ್ರಾಮೀಣ ಭಾಗದಲ್ಲಿ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ 2016–17ರಲ್ಲಿ ಜಾರಿಗೊಳಿಸಿದ ‘ಹಳ್ಳಿ ಸಂತೆ’ ಯೋಜನೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸಫಲತೆ ಕಾಣುತ್ತಿಲ್ಲ. ಬಹುತೇಕ ಕಡೆ ಕಾಮಗಾರಿ ಪೂರ್ಣಗೊಂಡಿದೆ ಎಂಬುದು ದಾಖಲೆಯಲ್ಲಿದೆ. ಆದರೆ ವಾಸ್ತವದ ಚಿತ್ರಣವೇ ಬೇರೆಯಾಗಿದೆ.
ಜಿಲ್ಲೆಯಲ್ಲಿ ನಿರ್ಮಿಸಿರುವ ತರಕಾರಿ ಹಾಗೂ ಸಂತೆಕಟ್ಟೆಗಳು ರೈತರು ಹಾಗೂ ವ್ಯಾಪಾರಸ್ಥರಿಂದ ದೂರವಾಗಿವೆ. ಅವೈಜ್ಞಾನಿಕ ಸ್ಥಳದಲ್ಲಿ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ನಿರ್ವಹಣೆಯಂತೂ ದೂರದ ಮಾತಾಗಿದೆಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ
ಮಳೆ ಬಂದರೆ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ಪ್ರಾರಂಭಕ್ಕೂ ಮುನ್ನವೇ ಅಧಿಕಾರಿಗಳು ಇತ್ತ ಗಮನಹರಿಸಿದರೆ ಉತ್ತಮ.ಮಂಜುಳಾ ವ್ಯಾಪಾರಿ ಚಳ್ಳಕೆರೆ
ಮೈದಾನದ ಜಾಗದಲ್ಲಿ ಸಮಸ್ಯೆ ಇರುವ ಕಾರಣ ಸೊಪ್ಪು-ತರಕಾರಿಯನ್ನು ರಸ್ತೆ ಬೀದಿ ಬದಿಯಲ್ಲಿ ಇಟ್ಟು ಮಾರಾಟ ಮಾಡಿ ಜೀವನ ಮಾಡುತ್ತಿದ್ದೇವೆ. ಸಂತೆ ಮೈದಾನಕ್ಕೆ ಜನ ಬರುವುದಿಲ್ಲ. ಮೈದಾನ ಜಾಗವನ್ನು ವ್ಯಾಪಾರಿ ಸ್ನೇಹಿಗೊಳಿಸಬೇಕಿದೆ.ಟಿ.ಲಿಂಗರಾಜು ವ್ಯಾಪಾರಿ ಚಳ್ಳಕೆರೆ
ಎಪಿಎಂಸಿಯಿಂದ ನಿರ್ಮಿಸಿರುವ ಹಳ್ಳಿ ಸಂತೆ ಕಟ್ಟೆಗಳನ್ನು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಸ್ತಾಂತರಿಸಲಾಗಿದೆ. ಅವುಗಳ ನಿರ್ವಹಣೆ ಹೊಣೆ ಅವರಿಗೆ ಸೇರಿರುತ್ತದೆ.ಬಿ.ಎಲ್.ಕೃಷ್ಣಪ್ಪ ಕಾರ್ಯದರ್ಶಿ ಎಪಿಎಂಸಿ
ಭಕ್ತರಿಗೆ ಪ್ರವಾಸಿಗರಿಗೆ ತೊಂದರೆ
ನಾಯಕನಹಟ್ಟಿ ದೇವಸ್ಥಾನಕ್ಕೆ ಪ್ರತಿ ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆಯ ಆಂಧ್ರ ಮತ್ತು ತೆಲಂಗಾಣದಿಂದಲೂ ಭಕ್ತರು ಪ್ರವಾಸಿಗರು ಬರುತ್ತಾರೆ. ರಸ್ತೆ ಮೇಲೆಯೇ ಸಂತೆ ನಡೆಸುವುದರಿಂದ ಪ್ರವಾಸಿಗರಿಗೆ ಹೊರಮಠ ದೇವಾಲಯದ ವಿಳಾಸ ತಿಳಿಯದೆ ಹಾಗೂ ದೇವಾಲಯದ ಬಳಿ ತೆರಳಲು ಸಾಕಷ್ಟು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ ಒಳಮಠದಿಂದ ಹೊರಮಠಕ್ಕೆ ಪಲ್ಲಕ್ಕಿ ಸೇವೆ ನಡೆಸಲಾಗುತ್ತದೆ. ಈ ವೇಳೆ ದೇವರ ಪಲ್ಲಕ್ಕಿ ಹೊತ್ತ ಭಕ್ತರಿಗೆ ಕಿರಿಕಿರಿ ಉಂಟಾಗುತ್ತಿದೆ.
ಮಳೆಗೆ ಕೆಸರು ಗದ್ದೆಯಾಗುವ ಸಂತೆ ಮೈದಾನ
ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ಅಪೂರ್ಣ ಕಾಮಗಾರಿಯ ಪರಿಣಾಮ ಇಲ್ಲಿನ ಪಾವಗಡ ರಸ್ತೆಯ ವಾರದ ಸಂತೆ ಮೈದಾನ ಅಲ್ಪ ಮಳೆಗೂ ಕೆಸರು ಗದ್ದೆಯಂತಾಗುತ್ತಿದೆ. ಹೀಗಾಗಿ ಮಳೆ ಬಂತೆಂದರೆ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿವಿಧ ವಾರ್ಡ್‍ಗಳಿಂದ ಹರಿದು ಬರುವ ಕೊಳಚೆ ಮತ್ತು ಮೈದಾನದ ತಗ್ಗು ಪ್ರದೇಶದ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥಿತ ಚರಂಡಿ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ. ಮೈದಾನದಲ್ಲಿ ತುಂಬಿರುವ ಕೆಸರು ನೋಡಿದರೆ ವ್ಯಾಪಾರ ಮಾಡಲು ಯಾರಿಗೂ ಮನಸ್ಸು ಬರುವುದಿಲ್ಲ. ‘ಸಂತೆ ಹರಾಜು ಕೂಗಿಕೊಂಡವರು ಪ್ರತಿದಿನ ವಾರ ತಪ್ಪದೇ ನೆಲಬಾಡಿಗೆ ವಸೂಲಿ ಮಾಡುತ್ತಾರೆ. ಕೊಡದಿದ್ದರೆ ತಕ್ಕಡಿ ಕೆ.ಜಿ ಕಲ್ಲು ಕಸಿದುಕೊಂಡು ದೌರ್ಜನ್ಯ ನಡೆಸುತ್ತಾರೆ. ಆದರೆ ಸಂತೆ ಮೈದಾನದ ಅಭಿವೃದ್ಧಿ ವಿಚಾರವನ್ನು ಕೇಳಿದರೆ ನಗರಸಭೆಗೆ ಹೋಗಿ ಎನ್ನುತ್ತಾರೆ’ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ. ‘ಸಂತೆ ಮೈದಾನದ ದುಃಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಸ್ವಚ್ಛತೆಯಲ್ಲಿ ನಗರಸಭೆ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ’ ಎಂದು ದೂರುತ್ತಾರೆ. ‘ಶಾಸಕ ಟಿ.ರಘುಮೂರ್ತಿಯವರ ಒತ್ತಡದ ಮೇರೆಗೆ ಸಂತೆ ಮೈದಾನದ ಅರ್ಧಭಾಗದ ತಗ್ಗು-ಗುಂಡಿಗಳಿಗೆ ಮಣ್ಣು ತುಂಬಿಸಿ ಸಿಮೆಂಟ್ ಹಾಕಿಸಲಾಗಿದೆ. ಇನ್ನುಳಿದ ಭಾಗಕ್ಕೂ ಮಣ್ಣು ಹೇರಿಸಿ ಸಿಮೆಂಟ್ ಹಾಕಿಸಬೇಕು. ಮಳೆ-ಗಾಳಿ ತಡೆಯಲು ಹಾಗೂ ನೆರಳಿನ ವ್ಯವಸ್ಥೆಗೆ ಶೆಡ್ ನಿರ್ಮಾಣ ಮಾಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂಬುವುದು ವರ್ತಕರ ಮನವಿ.
Cut-off box - ತರಕಾರಿ ಮಾರುಕಟ್ಟೆಗಳು ಅವ್ಯವಸ್ಥೆಯ ಆಗರ ಎಚ್.ಡಿ.ಸಂತೋಷ್ ಹೊಸದುರ್ಗ: ಪಟ್ಟಣದ ಕೆನರಾ ಬ್ಯಾಂಕ್ ಆವರಣ ಹಾಗೂ ಶ್ರೀರಾಂಪುರದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಿ ವರ್ಷಗಳೇ ಕಳೆದಿವೆ. ಸರಿಯಾದ ನಿರ್ವಹಣೆ ಹಾಗೂ ಸಮರ್ಪಕ ಬಳಕೆ ಇಲ್ಲದ ಕಾರಣ ಇವು ಇದ್ದೂ ಇಲ್ಲದಂತಾಗಿವೆ. ಶ್ರೀರಾಂಪುರದ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ನಿತ್ಯ ನೂರಾರು ಜನ ಬರುತ್ತಾರೆ. ವಹಿವಾಟು ಚೆನ್ನಾಗಿಯೇ ನಡೆಯುತ್ತದೆ. ಆದರೆ ತರಕಾರಿ ಮಾರುವವರಿಗೆ ಸೂಕ್ತ ಸ್ಥಳಾವಕಾಶವಿಲ್ಲ. ಚಿಕ್ಕದಾದ ಸ್ಥಳದಲ್ಲಿ ವ್ಯಾಪಾರಿಗಳು ಕೂರಲು ಆಗುತ್ತಿಲ್ಲ. ಜತೆಗೆ ಗಾಳಿ ಮಳೆಯಿಂದ ರಕ್ಷಣೆಯಿಲ್ಲದಂತಾಗಿದೆ. ಪಕ್ಕದಲ್ಲೇ ಬಾರ್ ಇರುವ ಕಾರಣ ಮದ್ಯದ ಬಾಟಲ್ ಹಾಗೂ ಕವರ್‌ಗಳ ರಾಶಿಯೇ ಬಿದ್ದಿದೆ. ಸ್ವಚ್ಛತೆ ಮರಿಚೀಕೆಯಾಗಿದೆ. 2021 ರಲ್ಲಿ ಅಂದಾಜು ₹60 ಲಕ್ಷ ವೆಚ್ಚದಲ್ಲಿ ಕಿರು ಮಾರುಕಟ್ಟೆ ನಿರ್ಮಿಸಲಾಗಿದೆ. ನಿರ್ಮಾಣ ಆಗಿ 4 ವರ್ಷ ಕಳೆದರೂ ಮೂಲ ಉದ್ದೇಶ ಮಾತ್ರ ಈಡೇರಿಲ್ಲ. ಈ ಬಗ್ಗೆ ಪುರಸಭೆ ಕಂಡು ಕಾಣದಂತಿದೆ. ತರಕಾರಿ ಮಾರುಕಟ್ಟೆಯಲ್ಲಿ 30 ಜನರು ಒಂದೆಡೆ ಕುಳಿತು ವ್ಯಾಪಾರ ಮಾಡಲು ಅವಕಾಶವಿದೆ. ಅಲ್ಲೂ ಕಸದ ರಾಶಿಯಿದೆ. ಮಲ ಮೂತ್ರ ವಿಸರ್ಜನೆಯಿಂದಾಗಿ ಅಕ್ಕ ಪಕ್ಕದ ಮಳಿಗೆಯವರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿಯಿದೆ. ಮಳೆ ಬಂದಾಗ ನೀರು ಆವರಿಸುತ್ತದೆ ಸುತ್ತಲೂ ಗಾಳಿ ಬೆಳಕಿಲ್ಲದೇ ಕಗ್ಗತ್ತಲಾಗಿದೆ. ಪಟ್ಟಣದ ಬಂಡೆ ಮಾರುಕಟ್ಟೆ ಹಾಗೂ ಗುರು ಒಪ್ಪತ್ತಿನಸ್ವಾಮಿ ಮಠದಲ್ಲಿ ರಸ್ತೆಯ ಬದಿಯಲ್ಲಿ ನಿತ್ಯ ತರಕಾರಿ ವ್ಯಾಪಾರ ನಡೆಯುತ್ತಿದೆ. ಪ್ರತಿ ಸೋಮವಾರ ಖಾಸಗಿ ಬಸ್ ನಿಲ್ದಾಣದ ಸಂತೆ ಹೊಂಡದಲ್ಲಿ ವ್ಯಾಪಾರ ನಡೆಯುತ್ತಿದೆ. ಇದರಿಂದಾಗಿ ಜನರಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಕಿರು ತರಕಾರಿ ಮಾರುಕಟ್ಟೆ ಕಟ್ಟಡದ ಕೆಳಭಾಗದಲ್ಲಿದೆ. ತರಕಾರಿ ವ್ಯಾಪಾರ ಮಾಡಲು ಉತ್ತಮ ಗಾಳಿ ಬೆಳಕಿನ ಅಗತ್ಯವಿದೆ. ಒಟ್ಟಾರೆ ಕಿರು ಮಾರುಕಟ್ಟೆಯಲ್ಲಿ ಯಾವುದೇ ಸೌಲಭ್ಯವಿಲ್ಲ. ‘ಕಿರು ತರಕಾರಿ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಹಾಗಾಗಿ ಸೂಕ್ತ ಸ್ಥಳ ಗುರುತಿಸಿ ಮಾರುಕಟ್ಟೆ ನಿರ್ಮಿಸಬೇಕು. ತರಕಾರಿ ವ್ಯಾಪಾರದಿಂದಲೇ ಜೀವನ ನಡೆಸುತ್ತಿರುವ ನಮಗೆ ಒಂದು ನೆಲೆ ಕಲ್ಪಿಸಿ’ ಎನ್ನುತ್ತಾರೆ ವ್ಯಾಪಾರಿ ನಾಗರತ್ನಮ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.