ADVERTISEMENT

ನಿಧಿಗಾಗಿ ನಂದಿ ವಿಗ್ರಹ ಭಗ್ನಗೊಳಿಸಿದ ಕಳ್ಳರು

ಐತಿಹಾಸಿಕ ಏಕಶಿಲಾ ರಾಮಲಿಂಗೇಶ್ವರ ಗುಹಾಂತರ ದೇವಾಲಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 12:32 IST
Last Updated 16 ಮಾರ್ಚ್ 2020, 12:32 IST
ನಾಯಕನಹಟ್ಟಿ ಸಮೀಪದ ರಾಮದುರ್ಗ ಹೊಸಗುಡ್ಡದಲ್ಲಿ ನಿಧಿ ಆಸೆಗಾಗಿ ನಂದಿವಿಗ್ರಹವನ್ನು ಭಗ್ನಗೊಳಿಸಿರುವುದು
ನಾಯಕನಹಟ್ಟಿ ಸಮೀಪದ ರಾಮದುರ್ಗ ಹೊಸಗುಡ್ಡದಲ್ಲಿ ನಿಧಿ ಆಸೆಗಾಗಿ ನಂದಿವಿಗ್ರಹವನ್ನು ಭಗ್ನಗೊಳಿಸಿರುವುದು   

ನಾಯಕನಹಟ್ಟಿ: ಸಮೀಪದ ರಾಮದುರ್ಗ ಹೊಸಗುಡ್ಡದ ಐತಿಹಾಸಿಕ ಏಕಶಿಲಾ ರಾಮಲಿಂಗೇಶ್ವರ ದೇವಾಲಯದ ನಂದಿ ವಿಗ್ರಹವನ್ನು ನಿಧಿಗಳ್ಳರು ನಿಧಿ ಆಸೆಗಾಗಿ ಭಾನುವಾರ ರಾತ್ರಿ ಭಗ್ನಗೊಳಿಸಿದ್ದಾರೆ.

ಈ ಗುಹಾಂತರ ದೇವಾಲಯವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಬಾದಾಮಿಯ ಗುಹಾಂತರ ದೇವಾಲಯ ಬಿಟ್ಟರೆ ರಾಜ್ಯದ ಎರಡನೇ ಅತಿದೊಡ್ಡ ಏಕಶಿಲಾ ಗುಹಾಂತರ ದೇವಾಲಯ ಎಂಬ ಖ್ಯಾತಿ ರಾಮಲಿಂಗೇಶ್ವರ ದೇವಾಲಯಕ್ಕಿದೆ. ಹಾಗಾಗಿ ನಿತ್ಯ ಪ್ರವಾಸಿಗರು, ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಇದು ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಾಲಯಕ್ಕೆ ಯಾವುದೇ ಬಂದೋಬಸ್ತ್ ವ್ಯವಸ್ಥೆ ಇಲ್ಲ. ಈ ಹಿಂದೆ ಹೊಸಗುಡ್ಡದಲ್ಲಿ ನಿಧಿಗಳ್ಳರು ಹಲವು ಬಾರಿ ನಿಧಿ ಶೋಧ ನಡೆಸಿ ಗುಡ್ಡವನ್ನು ಸ್ಫೋಟಿಸಿ ಕಂದಕಗಳನ್ನು ಸೃಷ್ಟಿಸಿದ್ದರು.

ADVERTISEMENT

ಹಲವು ಬಾರಿ ವಾಮಾಚಾರ ಮಾಡಿದ ಕುರುಹು ಇಲ್ಲಿ ಕಂಡು ಬಂದಿವೆ. ಇದೇ ನಂದಿ ವಿಗ್ರಹದ ಬಾಯಿಗೂ ಹಿಂದೆ ಹಾನಿ ಮಾಡಿದ್ದರು. ಆಗ ಗ್ರಾಮಸ್ಥರು ವಿಗೃಹ ವಿರೂಪವಾಗಿರುವುದನ್ನು ಕಂಡು ಹಿತ್ತಾಳೆಯ ಪಟ್ಟಿ ಮಾಡಿಸಿ ಬಾಯಿಯ ಸುತ್ತ ಕಟ್ಟಿಸಿದ್ದರು. ಆದರೆ ಭಾನುವಾರ ರಾತ್ರಿ ಮತ್ತೆ ನಂದಿ ವಿಗ್ರಹವನ್ನು ನಿಧಿಗಳ್ಳರು ಭಗ್ನಗೊಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದೇವಾಲಯಕ್ಕೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ಬಂಗಾರಪ್ಪ, ಸಣ್ಣೋಬಯ್ಯ, ಬಸವರಾಜ ಪೂಜಾರಿ ಆಗ್ರಹಿಸಿದ್ದಾರೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.