ADVERTISEMENT

ನರೇಗಾ: ಯಂತ್ರ ಬಳಕೆ ನಿಷೇಧಿಸಿ - ಶಾಸಕ ಗೂಳಿಹಟ್ಟಿ ಶೇಖರ್ ಎಚ್ಚರಿಕೆ

ಪಿಡಿಒಗಳಿಗೆ ಶಾಸಕ ಗೂಳಿಹಟ್ಟಿ ಶೇಖರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:19 IST
Last Updated 14 ಮೇ 2022, 2:19 IST
ಹೊಸದುರ್ಗದ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿದರು
ಹೊಸದುರ್ಗದ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿದರು   

ಹೊಸದುರ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಕಾಮಗಾರಿ ಮಾಡು
ವಾಗಿ ಯಂತ್ರಗಳನ್ನು ಬಳಕೆಯಾಗಬಾರದು ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಮಗಾರಿಯಲ್ಲಿ ಮಾನವ ದಿನಗಳ ಕುರಿತು ಪಿಡಿಒಗಳು ಪರಿಶೀಲನೆ ಮಾಡಬೇಕು. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ದ್ರವ ತ್ಯಾಜ್ಯ ನಿರ್ವಹಣೆ ಘಟಕ ಆರಂಭಿಸಬೇಕು. ಅರ್ಹರಿಗೆ ಕೆಲಸ ನಿರ್ವಹಿಸಲು ಅವಕಾಶ ಕೊಡಬೇಕು. ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಕಾಮಗಾರಿ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಪಂಚಾಯಿತಿವಾರು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ 15 ದಿನಗಳೊಳಗೆ ವರದಿ ಒಪ್ಪಿಸಬೇಕು ಎಂದು ಸೂಚಿಸಿದರು.

ADVERTISEMENT

ಕುಡಿಯುವ ನೀರು ಸಮಸ್ಯೆಗೆ ಪರಿಹಾರ:

ಪ್ರಸ್ತುತ ತಾಲ್ಲೂಕಿನಲ್ಲಿ ಕುಡಿಯುವ ನೀರಿಮ ಸಮಸ್ಯೆ ಕಡಿಮೆಯಿದೆ. ಅಗತ್ಯವಿದ್ದಲ್ಲಿ ಕೂಡಲೇ ಕೊಳವೆಬಾವಿ ಕೊರೆಸುವ ಕಾರ್ಯವಾಗಬೇಕು. ಶಿಥಿಲ ಸ್ಥಿತಿಯಲ್ಲಿರುವ ದೊಡ್ಡ ನೀರಿನ ಟ್ಯಾಂಕ್‌ಗಳನ್ನು ದುರಸ್ತಿ ಮಾಡಬೇಕು. ಮತ್ತೋಡು ಹೋಬಳಿಯಲ್ಲಿ ₹ 20 ಲಕ್ಷ ವೆಚ್ಚದಲ್ಲಿ 1 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕರ್ ಅನ್ನು ನಿರ್ಮಿಸಲಾಗಿದೆ. ನದಿಯ ನೀರು ಶುದ್ಧಗೊಳಿಸಿ, ಜನರಿಗೆ ಉತ್ತಮ ಗುಣಮಟ್ಟದ ನೀರು ಪೂರೈಸಲಾಗುವುದು. ಇದೇ ರೀತಿ ನದಿ ತೀರದ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮೂರು ವರ್ಷಗಳಲ್ಲಿ ಹೊಸದುರ್ಗ ನರೇಗಾದಡಿ ಉತ್ತಮ ಕೆಲಸ ಮಾಡಿದ್ದು, ಹಲವು ಕಾಮಗಾರಿ ಮಾಡುವ ಮ‌ೂಲಕ ಜಿಲ್ಲೆಯಲ್ಲೇ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳನ್ನು ಅಭಿನಂದಿಸಿದರು.

ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಿವಮೂರ್ತಿ, ಪಿಡಿಒಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.