ADVERTISEMENT

ಅಕಾಡೆಮಿ ಅನುದಾನ ಹೆಚ್ಚಲಿ: ಶಾಸಕ

‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:37 IST
Last Updated 1 ನವೆಂಬರ್ 2019, 15:37 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಹಮ್ಮಿಕೊಂಡಿರುವ ‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ವನ್ನು ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ಡೋಲು ಬಾರಿಸುವ ಮೂಲಕ ಶುಕ್ರವಾರ ಉದ್ಘಾಟಿಸಿದರು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಶಿವಮೂರ್ತಿ ಮುರುಘಾ ಶರಣರು, ಶ್ರೀನಿವಾಸ ಜಿ.ಕಪ್ಪಣ್ಣ ಇದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಹಮ್ಮಿಕೊಂಡಿರುವ ‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ವನ್ನು ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ಡೋಲು ಬಾರಿಸುವ ಮೂಲಕ ಶುಕ್ರವಾರ ಉದ್ಘಾಟಿಸಿದರು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಶಿವಮೂರ್ತಿ ಮುರುಘಾ ಶರಣರು, ಶ್ರೀನಿವಾಸ ಜಿ.ಕಪ್ಪಣ್ಣ ಇದ್ದಾರೆ.   

ಚಿತ್ರದುರ್ಗ: ನಾಟಕ ಅಕಾಡೆಮಿ ಸೇರಿದಂತೆ ಎಲ್ಲ ಅಕಾಡೆಮಿಗಳ ಅನುದಾನ ಏರಿಕೆ ಆಗಬೇಕು. ಆಗ ಮಾತ್ರ ಸಂಸ್ಕೃತಿ ಉಳಿಸುವ ಕೆಲಸ ಆಗುತ್ತದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

ಇಲ್ಲಿನ ಮುರುಘಾ ಮಠದಲ್ಲಿ ಆರು ದಿನ ಹಮ್ಮಿಕೊಂಡಿರುವ ‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನ ಸಾಲದು. ಪೆಟ್ರೋಲ್‌, ಪ್ರಯಾಣ ಭತ್ಯೆ ನೀಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಚಿತ್ರದುರ್ಗದಲ್ಲಿ ಎಲ್ಲ ಕಲೆಗಳೂ ಜೀವಂತವಾಗಿವೆ. ಕಲಾವಿದರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಲಾವಿದರಿಗೆ ಸರ್ಕಾರದ ಎಲ್ಲ ಸೌಲಭ್ಯ ಸಿಗಬೇಕು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಬೋಗಸ್‌ ಬಿಲ್‌ಗಳನ್ನು ಪಾವತಿಸಿ ಹಣ ಲಪಟಾಯಿಸುವ ಕೆಲಸ ನಡೆಯುತ್ತಿದೆ. ಇದನ್ನು ಸಚಿವ ಸಿ.ಟಿ. ರವಿ ಅವರ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಚಿತ್ರದುರ್ಗದಲ್ಲಿ ನಿತ್ಯವೂ ನಾಟಕ ನಡೆಯುತ್ತಿತ್ತು. ಎಸ್‌ಎಲ್‌ಎನ್‌ ಥಿಯೇಟರ್ ರಂಗಭೂಮಿಗೆ ಖ್ಯಾತಿ ಗಳಿಸಿತ್ತು. ಪ್ರತಿಹಳ್ಳಿಯಲ್ಲಿ ನಡೆಯುತ್ತಿದ್ದ ನಾಟಕಗಳು ಇಂದು ನಿಂತುಹೋಗಿವೆ. ಆದರೆ, ಮುರುಘಾ ಮಠ ನಾಟಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು, ‘ಇಡೀ ದೇಶದಲ್ಲಿ ಕನ್ನಡದ ಸಾತ್ವಿಕತೆ ದೊಡ್ಡದು. ಕನ್ನಡಿಗರು ಕೂಡ ಸಾತ್ವಿಕರು. ಕನ್ನಡ ಸಂಸ್ಕೃತಿಯನ್ನು ಕಟ್ಟುವ, ಹೃದಯಗಳನ್ನು ಬೆಸೆಯುವ ಕೆಲಸ ಆಗಬೇಕಿದೆ’ ಎಂದು ಸಲಹೆ ನೀಡಿದರು.

‘ಕರ್ನಾಟಕದ ನೆಲದಲ್ಲಿ ಅನೋನ್ಯತೆ ಇದೆ. ರಂಗಭೂಮಿಯ ಮೂಲಕ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಅಗತ್ಯವಿದೆ. ಇದು ಜನರ ಬದುಕಿನಲ್ಲಿ ಸಂವೇದನೆಯನ್ನು ಉಂಟು ಮಾಡುತ್ತದೆ’ ಎಂದರು.

ಸನ್ಮಾನ ಸ್ವೀಕರಿಸಿದ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ‘ಕನ್ನಡದ ಬದಲಿಗೆ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗೆ ಮೊರೆ ಹೋಗುತ್ತಿದ್ದೇವೆ. ಈ ಎರಡೂ ಭಾಷೆಗಳಿಗಿಂತ ಕನ್ನಡ ಭಾಷೆ ಶ್ರೇಷ್ಠವಾಗಿದೆ. ಕನ್ನಡದಷ್ಟೇ ಇಲ್ಲಿನ ರಂಗಭೂಮಿಯೂ ಹಳೆಯದು. ಕನ್ನಡ ರಂಗಭೂಮಿ ಭಾರತಕ್ಕೆ ಮಾದರಿಯಾಗಿದೆ. ಬಿ.ವಿ.ಕಾರಂತ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಸೇರಿದಂತೆ ಹಲವರು ರಂಗಭೂಮಿಗೆ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ಡೋಲು ಬಾರಿಸುವ ಮೂಲಕ ನಾಟಕೋತ್ಸವ ಉದ್ಘಾಟಿಸಿದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು. ಬೆಂಗಳೂರಿನ ಪಯಣ ತಂಡದ ಕಲಾವಿದರು ‘ನಮಗೇನು ಬೆಲೆಯಿಲ್ವಾ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.