ADVERTISEMENT

ಜಂತುಹುಳು ಸೋಂಕಿನಿಂದ ಮಕ್ಕಳ ರಕ್ಷಿಸೋಣ: ತಹಶೀಲ್ದಾರ್‌ ಬಿ.ಎಂ. ಗೋವಿಂದರಾಜು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:23 IST
Last Updated 10 ಫೆಬ್ರುವರಿ 2026, 5:23 IST
ಚಿತ್ರದುರ್ಗದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಬಿ.ಎಂ. ಗೋವಿಂದರಾಜು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಬಿತ್ತಿಪತ್ರ ಬಿಡುಗಡೆಗೊಳಿಸಿದರು
ಚಿತ್ರದುರ್ಗದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಬಿ.ಎಂ. ಗೋವಿಂದರಾಜು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಬಿತ್ತಿಪತ್ರ ಬಿಡುಗಡೆಗೊಳಿಸಿದರು   

ಪ್ರಜಾವಾಣಿ ವಾರ್ತೆ

ಚಿತ್ರದುರ್ಗ: ‘ಆರೋಗ್ಯವಂತ ಮಕ್ಕಳು ಸದೃಢ ದೇಶದ ಅಡಿಪಾಯ. ಆದ್ದರಿಂದ ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಪ್ರಮುಖವಾಗಿ ಜಂತುಹುಳು ಸೋಂಕಿನಿಂದ ರಕ್ಷಿಸಬೇಕಿದೆ’ ಎಂದು ತಹಶೀಲ್ದಾರ್‌ ಬಿ.ಎಂ. ಗೋವಿಂದರಾಜು ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂತರ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

‘ರಾಷ್ಟ್ರೀಯ ಕಾರ್ಯಕ್ರಮಗಳ ಯಶಸ್ವಿಗೆ ಪೂರ್ವಸಿದ್ಧತೆ ಮುಖ್ಯ. ಒಂದು ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ತಪ್ಪದೇ ಜಂತುಹುಳು ನಿವಾರಣಾ ಮಾತ್ರೆಯನ್ನು ಸೇವಿಸಬೇಕು’ ಎಂದರು.

‘ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಮಾತ್ರೆಗಳನ್ನು ವಿತರಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಾಲೆ ಬಿಟ್ಟಿರುವ ಯಾವುದೇ ಮಗು ಈ ಸೌಲಭ್ಯದಿಂದ ವಂಚಿತ ಆಗದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಈ ಬಾರಿ 1,14,291 ಮಕ್ಕಳನ್ನು ಗುರಿಯಾಗಿಸಿದ್ದು, ಫೆ.10 ರಂದು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂದು ಮಾತ್ರೆ ಪಡೆಯದವರಿಗೆ ಫೆಬ್ರವರಿ 17 ರಂದು ಮ್ಯಾಪ್‌–ಅಪ್‌ ಡೇ ಮೂಲಕ ಮಾತ್ರೆ ನೀಡಲಾಗುತ್ತದೆ. 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ವರ್ಷ ಮೇಲ್ಪಟ್ಟವರಿಗೆ 400 ಮಿ.ಗ್ರಾಂ ನ ಒಂದು ಪೂರ್ಣ ಮಾತ್ರೆಯನ್ನು ನೀಡಲಾಗುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್‌ ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ವೀಣಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ವೈದ್ಯಾಧಿಕಾರಿಗಳಾದ ಮಹೇಂದ್ರ, ಮಂಜುಳಾ, ವಾಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.