ನಾಯಕನಹಟ್ಟಿ: ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಧಾರವಾಗುವುದು ಗುಣಮಟ್ಟದ ಶಿಕ್ಷಕರಿಂದ ಮಾತ್ರ ಎಂದು ಐಐಎಸ್ಸಿ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಬಿ.ಸುಬ್ಬಾರೆಡ್ಡಿ ಹೇಳಿದರು.
ಹೋಬಳಿಯ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ಬುಧವಾರ ಒಡಿಶಾದ 110 ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶದ ಭವಿಷ್ಯ ಅಡಗಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಯಾದಾಗ ಮಾತ್ರ. ಹಾಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮೊದಲು ಗುಣಮಟ್ಟದ ಬೋಧನಾ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಕಲಿಕಾ ಕೌಶಲವಿರುವ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗಲು ಸಾಧ್ಯ ಎಂದರು.
ಗುಣಮಟ್ಟದ ಶಿಕ್ಷಣಕ್ಕೆ ಐಐಎಸ್ಸಿ ಪ್ರಖ್ಯಾತಿ ಪಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ 400 ಎಕರೆ ಭೂಮಿಯನ್ನು ಮತ್ತು ₹50,000ವನ್ನು ಆರಂಭಿಕ ಧನಸಹಾಯವಾಗಿ ನೀಡಿದ್ದರು. ಜೆಮ್‌ಷೆಡ್‌ಜಿ ಟಾಟಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದಿಂದ ಸಂಸ್ಥೆ ಆರಂಭವಾಯಿತು. ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಪಿಎಚ್‌ಡಿ ಸಂಶೋಧನೆ ಆರಂಭಕ್ಕೆ ಸಿದ್ಧತೆಗಳನ್ನು ನಡೆಯುತ್ತಿದೆ ಎಂದರು.
ಅಂಡಮಾನ್, ನಿಕೋಬರ್ ದ್ವೀಪಗಳು ಸೇರಿದಂತೆ ದೇಶದ ಎಲ್ಲೆಡೆಯ ಸುಮಾರು 25 ಸಾವಿರ ಶಿಕ್ಷಕರು ಇಲ್ಲಿ ತರಬೇತಿ ಪಡೆದಿದ್ದಾರೆ. ಬೆಳಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯವರೆಗೆ 11 ದಿನ ನಿರಂತರವಾಗಿ ತರಬೇತಿ ನೀಡಲಾಗುವುದು. ಸಂಸ್ಥೆಯ ನುರಿತ ಸಿಬ್ಬಂದಿ ಶಿಕ್ಷಕರ ಕಲಿಕೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಪ್ರೌಢಶಾಲೆ ಶಿಕ್ಷಕರು ಬೋಧನೆಗೆ ಸೀಮಿತರಾಗದೆ ಸಂಶೋಧನೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ತರಗತಿಯಲ್ಲಿ ಮಕ್ಕಳು ಪ್ರಶ್ನಿಸುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಡಾ.ಕೆ.ಆರ್.ಪ್ರಭು ಸಲಹೆ ನೀಡಿದರು.
ಡಾ.ಕಿಶೋರ್, ಡಾ.ರಾಘವೇಂದ್ರ, ಡಾ.ಪ್ರಸನ್ನ, ಎಂಜಿನಿಯರ್ ಹೇಮಂತ್‌ಕುಮಾರ್ ಸೇರಿದಂತೆ ಐಐಎಸ್ಸಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.