
ನಾಯಕನಹಟ್ಟಿ: ಮ್ಯಾಸಬೇಡ ಬುಡಕಟ್ಟು ಮತ್ತು ಮ್ಯಾಸಮಂಡಲದ ಸಂಪ್ರದಾಯದಂತೆ ಹೋಬಳಿಯ ಅಬ್ಬೇನಹಳ್ಳಿ ಸಮೀಪ ರಾಮಜ್ಜನ ತೋಟದಲ್ಲಿ ವಡಲೇಶ್ವರಸ್ವಾಮಿ ಮತ್ತು ಅಕ್ಕರಾಯಮ್ಮ ದೇವರ ಉತ್ಸವಗಳು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ನಡೆಯಿತು.
ಪುರಾತನ ಸಂಪ್ರದಾಯದ ವಡೆಲ್‌ದೇವರ ಉತ್ಸವವು ಶೂನ್ಯ ಮಾಸದಲ್ಲಿ ನಡೆಯುತ್ತದೆ. ಸೋಮವಾರದಿಂದ ಉತ್ಸವವು ಆರಂಭವಾಗಿ ಬುಧವಾರ ದೇವರನ್ನು ಗುಡಿತುಂಬಿಸುವುದರೊಂದಿಗೆ ಮುಕ್ತಾಯವಾಯಿತು.
ಹೋಬಳಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿರುವ ವಡಲೇಶ್ವರ ದೇವಸ್ಥಾನದಲ್ಲಿರುವ ವಡಲೇಶ್ವರ ಮತ್ತು ಅಕ್ಕರಾಯಮ್ಮ ದೇವರ ಪೆಟ್ಟಿಗೆಗಳನ್ನು ಸಮೀಪದ ಜಿನಿಗಿಹಳ್ಳಕ್ಕೆ ತೆಗೆದುಕೊಂಡು ಹೋಗಿ ಗಂಗಾಪೂಜೆ ಮಾಡಲಾಯಿತು. ನಂತರ ಅಬ್ಬೇನಹಳ್ಳಿ ಬಳಿಯ ರಾಮಜ್ಜನ ತೋಟಕ್ಕೆ ಮೆರವಣಿಗೆಯೊಂದಿಗೆ ತೆರಳಿ ತಂಗಲಾಯಿತು. ಮೊದಲೇ ಕಟ್ಟಿದ್ದ ಸೊಪ್ಪಿನ ಪೌಳಿಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು.
ಮಂಗಳವಾರ ಬೆಳಿಗ್ಗೆ ಎಂಟು ಗುಡಿಕಟ್ಟಿಗೆ ಸೇರಿದ ಅಣ್ಣತಮ್ಮಂದಿರು ಸೇರಿ ಕಾಸು ಮೀಸಲು ಅರ್ಪಿಸಿದರು. ನಂತರ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಸಲ್ಲಿಸಿದರು. ಮದ್ಯಾಹ್ನ 3 ಗಂಟೆಗೆ ವಡೆಲ್ ದೇವರಿಗೆ ಸೇರಿರುವಂತಹ ದೇವರ ಎತ್ತುಗಳನ್ನು ಪ್ರದಕ್ಷಿಣೆ ಹಾಕಿ ಮೆರಸಲಾಯಿತು. ಭಕ್ತರು ದೇವರ ಎತ್ತುಗಳಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದರು.
ಎಂಟು ಗುಡಿಕಟ್ಟಿಗೆ (ಹೆಡಿಗೆ) ಸೇರಿದ್ದ ಕೂಡ್ಲಿಗಿ, ಜಗಳೂರು, ಮೊಳಕಾಲ್ಮುರು, ಚಿತ್ರದುರ್ಗ ಸೇರಿ ವಿವಿಧ ತಾಲ್ಲೂಕುಗಳ ಸುಮಾರು 25 ಹಳ್ಳಿಗಳಿಂದ ಬಂದಿದ್ದ ಅಣ್ಣತಮ್ಮಂದಿರು ಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ ಕೋಲಾಟ, ಗೊಂಬೆಕುಣಿತ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳು ಭಕ್ತರ ಗಮನ ಸೆಳೆದವು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಸೇರಿ ವಿವಿಧ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.