ADVERTISEMENT

ಕೇಂದ್ರದ ವಿದ್ಯುತ್‌ ಖಾಸಗೀಕರಣ ನೀತಿ ವಿರುದ್ಧ ಅ.10ಕ್ಕೆ ಹೋರಾಟ

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:35 IST
Last Updated 28 ಸೆಪ್ಟೆಂಬರ್ 2022, 4:35 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಚಿತ್ರದುರ್ಗ: ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಉತ್ಪಾದನೆ ಮತ್ತು ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣ ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಅ.10ರಂದು ರಾಜ್ಯದ ಎಲ್ಲೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ರೈತರ ಸಮಸ್ಯೆ ಪ್ರತಿ ಕ್ಷಣಕ್ಕೂ ಉಲ್ಬಣ ಆಗುತ್ತಿದೆ. 383 ದಿನ ರೈತರು ದೆಹಲಿಯಲ್ಲಿ ಆಂದೋಲನ ನಡೆಸಿದರು. ಇದಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿತು. ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ ಮಾಡುವುದಿಲ್ಲ ಎಂಬದಾಗಿ ವಾಗ್ದಾನ ನೀಡಿತ್ತು. ಈಗ ಏಕಾಏಕಿ ಕಾಯ್ದೆ ರೂಪಿಸಲು ಮುಂದಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್‌ಸೆಟ್ ಇವೆ. ಇವುಗಳಿಗೆ ಈವರೆಗೆ ಉಚಿತ ವಿದ್ಯುತ್‌ ಪೂರೈಕೆ ಆಗುತ್ತಿತ್ತು. ಕಾಯ್ದೆ ತಿದ್ದುಪಡಿಯಾದರೆ ಭಾಗ್ಯ ಜೋತಿ, ಕುಟೀರ ಜ್ಯೋತಿ ಫಲಾನುಭವಿಗಳಿಗೂ ಉಚಿತ ವಿದ್ಯುತ್‌ ಸಂಪರ್ಕ ಸ್ಥಗಿತ ಆಗಲಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆ ಮುಚ್ಚಿ ಹೋಗಲಿವೆ. ರಾಜ್ಯದ ಗಮನಕ್ಕೆ ತರದೇ
ಈ ಮಸೂದೆ ಜಾರಿಗೊಳಿಸಲಾಗುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಕೊಡಗಿನಲ್ಲಿ ಸ್ಮಾರ್ಟ್ ಮೀಟರ್ ಹಾಕಲಾಗುತ್ತಿದೆ. ಕಾಫಿ ಬೆಳೆಗಾರರಿಗೆ ಮೊದಲು ಇದನ್ನು ಜಾರಿಗೆ ತರಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾಯ್ದೆಯ ಅನುಷ್ಠಾನದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಅಧಿಕಾರದಿಂದ ಕಿತ್ತು ಎಸೆಯುತ್ತೇವೆ. ಸ್ಮಾರ್ಟ್ ಮೀಟರ್ ಧ್ವಂಸ ಮಾಡುವುದು ಗೊತ್ತಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರಿನ ವಿಧಾನಸೌಧ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.

‘ಸಾಲ ವಸೂಲಿಗೆ ಕಾನೂನು ತಿದ್ದುಪಡಿ ತರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆಸ್ತಿ ಜಪ್ತಿಗೆ ನಿಷೇಧ ಮಾತ್ರ ಸಾಕಾಗದು. ರೈತರ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು. ರಸಗೊಬ್ಬರ ಬೆಲೆ ದುಬಾರಿ ಆಗಿದೆ. ಸಾಲ ಮುಕ್ತ ಕೃಷಿ ವ್ಯವಸ್ಥೆ ರೂಪಿಸಬೇಕು’ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ, ಶಿವಾನಂದ ಕುಗ್ವೆ, ಟಿ.ನುಲೇನೂರು ಎಂ.ಶಂಕರಪ್ಪ, ಕೆ.ಬಿ.ಭಕ್ತಯ್ಯ, ಎಂ.ಬಿ.ಮಧುಸೂದನ್, ಪ್ರಸನ್ನ, ಕೆ.ಪಿ.ಭೂತಯ್ಯ, ಗೋಪಾಲ್ ಇದ್ದರು.

ಪ್ರಧಾನಿ ಮೋದಿ ವಿರುದ್ಧ ಕಿಡಿ

‘ಮೋದಿ ಅವರು ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಎಲ್ಲರಿಗೂ ಸುಳ್ಳು ಆಶ್ವಾಸನೆ ನೀಡಿ ವಂಚಿಸಿದ್ದಾರೆ. ಕಾರ್ಪೋರೆಟ್ ಕಂಪನಿಗಳಿಗೆ ಅನುಕೂಲ ಆಗುವಂತಹ‌ ಕಾಯ್ದೆ ರೂಪಿಸಿದ್ದಾರೆ. ಆದರೆ, ರೈತರಿಗೆ ಕೃಷಿ ವಿರೋಧಿ ನೀತಿ ಜಾರಿಗೆ ತಂದು ಮಾರುಕಟ್ಟೆ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ರೈತ ಸಂಘದ ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ ಕಿಡಿಕಾರಿದರು.

‘ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲ. ನ್ಯಾಯಯುತ ದರ ನಿಗದಿ ಮಾಡುವವರೆಗೆ ವಿದ್ಯುತ್ ಉಚಿತ ನೀಡಬೇಕು. ಪಂಪ್‌ಸೆಟ್ ಬಳಸಿ ಕೃಷಿ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಲಿದೆ. ಏಳು ಗಂಟೆ ವಿದ್ಯುತ್ ನೀಡುತ್ತಿಲ್ಲ. ಈ ಕಿರುಕುಳದ ಸೌಲಭ್ಯಕ್ಕೆ ಮೀಟರ್ ಹಾಕುವ ನೈತಿಕತೆ ಸರ್ಕಾರಕ್ಕೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.