ADVERTISEMENT

ಸಾಣೆಹಳ್ಳಿ ರಂಗಶಾಲೆಗೆ ಸಾಂಸ್ಕೃತಿಕ ವಿಶ್ವವಿದ್ಯಾಲಯ ಸ್ಥಾನ: ಸಿಎಂ ಬೊಮ್ಮಾಯಿ

ಸಾಣೇಹಳ್ಳಿ ನಾಟಕೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 9:42 IST
Last Updated 9 ನವೆಂಬರ್ 2022, 9:42 IST
   

ಹೊಸದುರ್ಗ: ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಕಾರ್ಯ ಬೆಂಬಲಿಸುವುದು ನಮ್ಮ ಕರ್ತವ್ಯ. ಸಾಣೇಹಳ್ಳಿ ಶಿವಕುಮಾರ ರಂಗಶಾಲೆಯನ್ನು ಸಾಂಸ್ಕೃತಿಕ ವಿಶ್ವವಿದ್ಯಾಲಯವಾಗಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ತರಳಬಾಳು ಮಠದಿಂದ ಮಂಗಳವಾರ ನಡೆದ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಪ್ರತಿ ವರ್ಷವು ಸಾಣೇಹಳ್ಳಿ ಶಿವಸಂಚಾರ ಕಲಾತಂಡಕ್ಕೆ ಸರ್ಕಾರದಿಂದ ಅನುದಾನ‌ ನೀಡುತ್ತಿದ್ದೇವೆ. ಈ ವರ್ಷ ₹ 2 ಕೋಟಿ ಘೋಷಿಸಿದ್ದೇವೆ’ ಎಂದರು.

‘ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಮುಖ್ಯ.‌ ನಾವು ತಪ್ಪು ಮಾಡಿದರೆ ನಮಗೆ, ಮನೆತನಕ್ಕೆ ಕಷ್ಟ.‌ ಆದರೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಗುರುಗಳು ತಪ್ಪು ಮಾಡಿದರೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಗುರುಗಳು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಿರಬೇಕು. ಡಾ.ಪಂಡಿತಾರಾಧ್ಯಶ್ರೀ ಶ್ರೇಷ್ಠ ಗುರುಗಳಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಕರಾರು ರಹಿತ ಪ್ರೀತಿಯೇ ಪರಮ ಭಕ್ತಿ. ಆದರೆ ಈಗಿನ ಕಾಲದಲ್ಲಿ ದೇವರ ಜತೆಗೂ ಕರಾರು ಮಾಡುತ್ತೇವೆ. ಫಲ ಕೇಳಿ ಕಾಯಿ ಒಡೆಸುವ ಕೆಲಸ ಮಾಡುತ್ತಿದ್ದೇವೆ. ಗುರುವಿನಲ್ಲಿ ಲೀನವಾಗಿ ಜರುಗುವುದೇ ನಿಜವಾದ ಭಕ್ತಿ. ಅದನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು. ಸಾಣೇಹಳ್ಳಿಯಂತಹ ಪರಿಸರದಲ್ಲಿ ಹಲವು ಗಂಟೆ ಕಳೆಯಬೇಕು. ಆಗ ಅಧ್ಯಾತ್ಮ ಮನೋಭಾವ ಮೂಡುತ್ತದೆ’ ಎಂದು ತಿಳಿಸಿದರು.

‘ನಾಗರಿಕತೆ ಬೆಳೆಯುತ್ತಿದೆ. ಆದರೆ, ಸಂಸ್ಕೃತಿ ಏನಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು.‌ ಸಂಸ್ಕೃತಿ ಅದೋಗತಿಗೆ ಹೋಗಿದೆ. ನಾವು ಏನಾಗಿದ್ದೇವೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನಮ್ಮಷ್ಟಕ್ಕೆ ನಾವು ಬದುಕನ್ನು ಕಳೆಯಬೇಕು. ಮುಗ್ಧತೆ ವಿಕಾರವಾಗುತ್ತಿದೆ. ಮುಗ್ಧತೆ ಉಳಿಸಿಕೊಳ್ಳುವುದು ದೊಡ್ಡ ಸಾಧನೆ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟ’ ಎಂದು ತಿಳಿಸಿದರು.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ‘ಬ್ರಿಟಿಷರು ಮೆಕಾಲೆ ಶಿಕ್ಷಣದ ಪದ್ಧತಿ ಜಾರಿ ತಂದಿದ್ದರು. ಪ್ರಸ್ತುತ ಶಿಕ್ಷಣ ತನಗೋಸ್ಕರ ಹಾಗೂ ತನ್ನ ಸಂಪಾದನೆಗಾಗಿ ಎನ್ನುವಂತಿದೆ. ಮನುಷ್ಯನ ಇಚ್ಛೆಗೆ ತಕ್ಕಂತೆ ಶಿಕ್ಷಣ ಕಲಿಯುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ’ ಎಂದು ವಿವರಿಸಿದರು.

‘ಹಲವು ವರ್ಷಗಳ ನಂತರ 15,000 ಸಾವಿರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಮುಂದಿನ ವಾರದಲ್ಲಿ 1:1 ಪಟ್ಟಿ ಬಿಡುಗಡೆ ಮಾಡಲಾಗುವುದು. ರಂಗಭೂಮಿ ಸೇರಿದಂತೆ ಎಲ್ಲ ರಂಗದ ಶಿಕ್ಷಕರನ್ನು ಮುಂದಿನ ದಿನಗಳಲ್ಲಿ ನೇಮಕಾತಿ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು’ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದರಾದ ಶಿವಕುಮಾರ್ ಉದಾಸಿ, ಜಿ.ಎಂ.ಸಿದ್ದೇಶ್ವರ,ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿದರು. ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ತರೀಕೆರೆ ಶಾಸಕ ಸುರೇಶ್, ಕಡೂರು ಬೆಳ್ಳಿ ಪ್ರಕಾಶ್, ಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ, ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್‌.ದಿವಾಕರ್ ಅವರೂ ಕಾರ್ಯಕ್ರಮದಲ್ಲಿ ಇದ್ದರು.

‘ಚೈತನ್ಯ ತುಂಬುವ ಕಲೆ’

ಕಲೆ ಮನಸ್ಸಿನ ಕಲುಷಿತ ಭಾವನೆ ಕಳೆದು ಚಟುವಟಿಕೆಯಿಂದ ಜೀವನ ನಡೆಸಲು ಚೈತನ್ಯ ತುಂಬುತ್ತದೆ. ಸತ್ತಂತೆ ಇರುವ ಜನರನ್ನು ಬಡಿದೆಬ್ಬಿಸಿ ಸಮಾಜವನ್ನು ಜಾಗೃತಗೊಳಿಸುತ್ತದೆ ಎಂದುಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

‘26 ವರ್ಷಗಳಿಂದ ವಿಭಿನ್ನ ನಾಟಕಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಕಲಾವಿದರು ಮಾಡುತ್ತಿದ್ದಾರೆ. ಹೊರದೇಶದಲ್ಲೂ ನಾಟಕ ಪ್ರದರ್ಶನವಾಗುತ್ತಿವೆ. ಗುರುಗಳಿಗೆ ಶಿಷ್ಯರು, ಶಿಷ್ಯರಿಗೆ ಗುರು ಅಂಜಿ ಬಾಳಿದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ’ ಎಂದರು.

‘ಶಿವಕುಮಾರ ಪ್ರಶಸ್ತಿ ಪಡೆಯುವುದು ಹೆಮ್ಮೆಯ ಸಂಗತಿ ಎಂದು ಹಲವರು ಭಾವಿಸಿದ್ದಾರೆ. ಸಂಘಟಕ, ಲೇಖಕ, ಉಪನ್ಯಾಸಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಎಂ.ಜಿ ಈಶ್ವರಪ್ಪ ಅವರಿಗೆ ಪ್ರಶಸ್ತಿ ಸಂದಿರುವುದು ಸಂತಸದ ಸಂಗತಿ’ ಎಂದರು.

‘ಮಹಿಳೆಯರಲ್ಲಿ ಹಿಂಜರಿಕೆ ಮೂಡಿದೆ’

ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಮಠಾಧೀಶರ ಬಳಿಗೆ ಹೋಗಲು ಹಿಂಜರಿಯುವಂತಹ ದುಸ್ಥಿತಿ ಬಂದೊದಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬೇಸರ ವ್ಯಕ್ತಪಡಿಸಿದರು.

‘ವೀರಶೈವ ಸಮುದಾಯದಲ್ಲಿ 39 ಉಪಜಾತಿಗಳಾಗಿವೆ. ಎಲ್ಲರೂ ಒಗ್ಗೂಡುವುದು ಕಷ್ಟವಿದೆ. ಎಲ್ಲ ಉಪಜಾತಿಗಳು ಒಂದಾದರೆ ಶಕ್ತಿ ಪ್ರದರ್ಶನ ಸಾಧ್ಯವಿದೆ. ಈ ಒಂದಾಗುವ ಕೆಲಸಕ್ಕೆ ಮಠಾಧೀಶರ ಸಹಕಾರ ಅಗತ್ಯವಿದೆ’ ಎಂದು ಹೇಳಿದರು.

ಶಾಸಕ ಗೂಳಿಹಟ್ಟಿ ಶೇಖರ್ ಮನವಿಯಂತೆ ತಾಲ್ಲೂಕಿನ ವಾಣಿವಿಲಾಸ ಸಾಗರ ಅಣೆಕಟ್ಟಿಯ ಹಿನ್ನೀರಿನ ಸೇತುವೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಾಮಕರಣಕ್ಕೆ ಶೀಘ್ರ ಆದೇಶ.

- ಬಸವರಾಜ ಬೊಮ್ಮಾಯಿ, ಮುಖ್ಯ ಮಂತ್ರಿ

ಸಾರಸ್ವತ ಲೋಕದಲ್ಲಿ ಶ್ರೇಷ್ಠವಾದದ್ದು ನಾಟಕ. ರಂಗಚಟುವಟಿಕೆ ಚಿಂತನೆ ಗಮನಿಸಿದರೆ ಗುರುಗಳ ಸಾಮಾಜಿಕ ಚಿಂತನೆ ತಿಳಿಯುತ್ತೆ.

- ಎಂ.ಜಿ.ಈಶ್ವರಪ್ಪ, ಶಿವಕುಮಾರ ಪ್ರಶಸ್ತಿ ಪುರಸ್ಕೃತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.