ADVERTISEMENT

ಜಿಲ್ಲಾ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 4:26 IST
Last Updated 16 ನವೆಂಬರ್ 2022, 4:26 IST

ಚಿತ್ರದುರ್ಗ: ರಾಜ್ಯದ 9 ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳನ್ನು ನವೀಕರಣಗೊಳಿಸಿ, ಮೇಲ್ದರ್ಜೆಗೆ ಏರಿಸುವ ನೆಪದಲ್ಲಿ ಖಾಸಗೀಕರಣಕ್ಕೆ ಸರ್ಕಾರ ಹುನ್ನಾರ ನಡೆಸುತ್ತಿದೆ. ಇದನ್ನು ಜನಪರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತವೆ ಎಂದು ಜನಾರೋಗ್ಯ ಚಳವಳಿಯ ಡಾ.ಅಖಿಲಾ ತಿಳಿಸಿದರು.

‘ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಖಾಸಗಿ ಹಾಗೂ ಸರ್ಕಾರದ ಒಡಂಬಡಿಕೆಗೆ
ಸಂಬಂಧಿಸಿದ ಪ್ರತಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ಹರಾಜು ಪ್ರಕ್ರಿಯೆ ಮೂಲಕ ಖಾಸಗಿ ಸಂಸ್ಥೆ ಆಯ್ಕೆ ಮಾಡಿ ವೈದ್ಯಕೀಯ ಕಾಲೇಜು ತೆರೆಯಲು ಭೂಮಿ ಹಾಗೂ ಅನುದಾನ ನೀಡಲಾಗುತ್ತದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸರ್ಕಾರಿ
ಆಸ್ಪತ್ರೆ ಸೇವೆ ನೀಡತೊಡಗಿದರೆ ಉಚಿತ ಚಿಕಿತ್ಸೆ ಸಿಗುವುದು ಅನುಮಾನವಾಗುತ್ತದೆ. ಇದಕ್ಕೆ ಪೂರಕವಾದ ಹಲವು ನಿರ್ಬಂಧಗಳನ್ನು ಒಡಂಬಡಿಕೆಯಲ್ಲಿ ಉಲ್ಲೇಖಿಸುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ’ ಎಂದು ವಿವರಿಸಿದರು.

ADVERTISEMENT

‘ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇರುವ ಕೆಲವೇ ವೈದ್ಯರನ್ನು ಖಾಸಗಿ ಆಸ್ಪತ್ರೆ ಸೆಳೆಯುವ ಸಾಧ್ಯತೆ ಇದೆ. ಕಟ್ಟಡ ನಿರ್ಮಾಣ ಮಾಡುವ ಖಾಸಗಿ ಸಂಸ್ಥೆಗೆ ವೈದ್ಯಕೀಯ ಕಾಲೇಜು ಶುಲ್ಕ ನಿಗದಿಪಡಿಸುವ ಅಧಿಕಾರವನ್ನು ನೀಡಲಾಗುತ್ತದೆ. ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಸೇವೆ ಉತ್ತಮಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ತಾಯಿ ಮರಣ ಪ್ರಮಾಣ ಹೆಚ್ಚಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಲೋಪಗಳಿರುವುದು ನಿಜ. ಹಾಗಂತ ಖಾಸಗೀಕರಣ ಮಾಡುವುದು ಸರಿಯಾದ ಕ್ರಮವಲ್ಲ. ಇದು ಸರ್ಕಾರಿ ಸ್ವಾಮ್ಯದಲ್ಲಿ ಉಳಿಯಬೇಕಿದೆ’ ಎಂದು ಆಗ್ರಹಿಸಿದರು.

ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ, ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಕ್ಷೇತ್ರ ಖಾಸಗೀಕರಣ ಆಗುತ್ತಿದೆ. ಆರೋಗ್ಯ, ಶಿಕ್ಷಣ ಸರ್ಕಾರಿ
ಸೇವೆಯಾಗಿ ಉಳಿಯಬೇಕು. ಸರ್ಕಾರ ತಪ್ಪು ನಿರ್ಧಾರ ಕೈಗೊಳ್ಳಬಾರದು. ಸರ್ಕಾರಿ ವೈದ್ಯಕೀಯ ವ್ಯವಸ್ಥೆಗೆ ಖಾಸಗಿ ಸಹಭಾಗಿತ್ವ ಬೇಡ’ ಎಂದು
ಹೇಳಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಟಿ.ಷಫಿವುಲ್ಲಾ, ಸ್ವಾವಲಂಬಿ ಒಕ್ಕೂಟದ ಅರುಂಧತಿ, ಎಸ್ತರ್‌ ಸುನಂದ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.