ADVERTISEMENT

ಭ್ರಷ್ಟಾಚಾರ ಆರೋಪ ಸಾಬೀತುಪಡಿಸಲಿ: ರೇಣುಕಾಚಾರ್ಯ

ಫಲಾನುಭವಿಗಳಿಗೆ ಅರ್ಹತಾ ಪತ್ರ ವಿತರಣೆ ಕಾರ್ಯಕ್ರಮ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 4:56 IST
Last Updated 2 ಜನವರಿ 2022, 4:56 IST
ನ್ಯಾಮತಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು.
ನ್ಯಾಮತಿ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿದರು.   

ನ್ಯಾಮತಿ: ‘ಕೋವಿಡ್ ಸಮಯದಲ್ಲಿ ಲಕ್ಷಾಂತರ ರೂಪಾಯಿ ಭಷ್ಟಾಚಾರ ಮಾಡಿರುವೆ ಎಂದು ಆರೋಪಿಸುವವರು, ಆರೋಪವನ್ನು ಸಾಬೀತುಪಡಿಸಲಿ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಂಟುಂಬಗಳ ವಾರಸುದಾರರಿಗೆ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳ ಸಂತ್ರಸ್ತರಿಗೆ ಪರಿಹಾರ ವಿತರಣೆ ಮತ್ತು
ಸಾಮಾಜಿಕ ಭದ್ರತಾ ಯೋಜನೆಯಡಿ 652 ಜನರಿಗೆ ಮಂಜೂರಾತಿ ಆದೇಶ ಪತ್ರ ಹಾಗೂ ವೈಯಕ್ತಿಕವಾಗಿ ₹ 10 ಸಾವಿರ ನಗದು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಹಗಲಿರಳು ಶ್ರಮಿಸಿದ್ದೇನೆ. ಕೋವಿಡ್ ಕೇಂದ್ರಗಳಲ್ಲಿ ಸೋಂಕಿತರ ಜೊತೆಯಲ್ಲಿ ವಾಸವಿದ್ದು ಸಾಂತ್ವನ ಹೇಳಿರುವೆ. ಆದರೆ, ಕೆಲವರು ಮಾಸ್ಕ್, ಆಹಾರ ಕಿಟ್ ಸೇರಿ ₹ 70 ಲಕ್ಷ ಅವ್ಯವಹಾರ ಮಾಡಿರುವೆ ಎಂದು ಆರೋಪಿಸಿದ್ದಾರೆ. ನನ್ನ ತಾಯಿ ಪವಿತ್ರಳು. ಅವಳ ಮೇಲೆ ಅಣೆ ಮಾಡಿ ಹೇಳುವೆ ನಾನು ಒಂದು ರೂಪಾಯಿಯೂ ಭ್ರಷ್ಟಾಚಾರ ಎಸಗಿಲ್ಲ. ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಿ. ತಾಲ್ಲೂಕಿನ 37 ಸಮುದಾಯದ ಜನರು ನನಗೆ ಮತ ಹಾಕಿದ್ದಾರೆ. ನಾನು ಅವರ ಸೇವಕ’ ಎಂದು ಭಾವುಕರಾದ ರೇಣುಕಾಚಾರ್ಯ ಅವರು ವೇದಿಕೆಯ ಮುಂಭಾಗದಲ್ಲಿ ಸೇರಿದ್ದ ಜನರಿಗೆ ಮಂಡಿಯೂರಿ ನಮಸ್ಕರಿಸಿದರು.

ADVERTISEMENT

ತಹಶೀಲ್ದಾರ್ ಎಂ. ರೇಣುಕಾ, ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ, ಉಪತಹಶೀಲ್ದಾರ್ ನಾಗರಾಜಪ್ಪ, ಸವಳಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ, ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ಸಿ.ಕೆ. ರವಿಕುಮಾರ, ಬಿ.ಕೆ. ಕರಿಬಸಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ. ಕೊಟ್ರೇಶಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.