ADVERTISEMENT

ಸಿಲಿಂಡರ್‌ ಸ್ಫೋಟ: ತಿಂಡಿ ಹೋಟೆಲ್‌ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:36 IST
Last Updated 4 ಡಿಸೆಂಬರ್ 2021, 2:36 IST
ಚಿಕ್ಕಜಾಜೂರಿನಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ನಡೆಸುತ್ತಿದ್ದ ತಿಂಡಿ ಹೋಟೆಲ್‌ ಹೊತ್ತಿ ಉರಿಯಿತು.
ಚಿಕ್ಕಜಾಜೂರಿನಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ನಡೆಸುತ್ತಿದ್ದ ತಿಂಡಿ ಹೋಟೆಲ್‌ ಹೊತ್ತಿ ಉರಿಯಿತು.   

ಚಿಕ್ಕಜಾಜೂರು: ಇಲ್ಲಿನ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯ ಹೋಟೆಲ್‌ಗೆ ಕಿಡಿಗೇಡಿಗಳು ಶುಕ್ರವಾರ ಬೆಂಕಿ ಹಚ್ಚಿದ ಪರಿಣಾಮ ಸಿಲಿಂಡರ್‌ ಸ್ಫೋಟಗೊಂಡು ಇಡೀ ಪೆಟ್ಟಿಗೆ ಅಂಗಡಿ ಸುಟ್ಟು ಹೋಗಿದೆ.

‘ಮಧ್ಯಾಹ್ನ ಹೋಟೆಲ್‌ ಮುಚ್ಚಿಕೊಂಡು ಮನೆಗೆ ಹೋಗಿದ್ದೆವು. ಸಂಜೆ ಏಳು ಗಂಟೆ ಸುಮಾರಿಗೆ ಯಾರೋ ಫೋನ್‌ ಮಾಡಿ, ಹೋಟೆಲ್‌ಗೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದರು. ಬಂದು ನೋಡಿದಾಗ ಇಡೀ ಹೋಟೆಲ್‌ ಸುಟ್ಟುಹೋಗಿತ್ತು. ತಕ್ಷಣ ಹೊಳಲ್ಕೆರೆಯ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದೆವು’ ಎಂದು ಅಂಗಡಿ ಮಾಲೀಕ ನಾಗರಾಜ್‌ ತಿಳಿಸಿದರು.

ಬೆಂಕಿ ಹಚ್ಚಿರುವ ಶಂಕೆ: ‘ಮನೆಗೆ ತೆರಳಿದ ನಂತರ ನಾವು ಯಾರೂ ಇಲ್ಲಿಗೆ ಬಂದಿರಲಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು’ ಎಂದು ನಾಗರಾಜ್‌ ಅವರ ಮಗಳು ಶೃತಿ ತಿಳಿಸಿದರು.

ADVERTISEMENT

ಘಟನೆಯಲ್ಲಿ ಯಾರ ಜೀವಕ್ಕೂ ಅನಾಹುತವಾಗಿಲ್ಲ. ಚಿಕ್ಕಜಾಜೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು.

ವಿದ್ಯುತ್‌ ಸಂಪರ್ಕ ಸ್ಥಗಿತ: ಬೆಂಕಿ ಹೊತ್ತಿಕೊಂಡಿದ್ದ ಹೋಟೆಲ್‌ ಮೇಲ್ಭಾಗದಲ್ಲಿಯೇ ವಿದ್ಯುತ್‌ ತಂತಿಗಳು ಹಾದು ಹೋಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ಕತ್ತಲೆ ಆವರಿಸಿತ್ತು. ರಾತ್ರಿ 8.40ಕ್ಕೆ ಬೆಂಕಿ ನಂದಿದ ನಂತರ ವಿದ್ಯುತ್‌ ಸಂಪರ್ಕ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.