ADVERTISEMENT

ನಿಜಲಿಂಗಪ್ಪ ವಸ್ತುಸಂಗ್ರಹಾಲಯಕ್ಕೆ ₹ 86 ಲಕ್ಷ ವೆಚ್ಚ

ಎಸ್‌ಎನ್‌ ನಿವಾಸ, ಸ್ಮಾರಕಕ್ಕೆ ಭೇಟಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:31 IST
Last Updated 9 ಜುಲೈ 2025, 4:31 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌ ತಂಗಡಗಿ ಮಂಗಳವಾರ ಸೀಬಾರ ಬಳಿಯ ಎಸ್‌.ನಿಜಲಿಂಗಪ್ಪ ಸ್ಮಾರಕಕ್ಕೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌ ತಂಗಡಗಿ ಮಂಗಳವಾರ ಸೀಬಾರ ಬಳಿಯ ಎಸ್‌.ನಿಜಲಿಂಗಪ್ಪ ಸ್ಮಾರಕಕ್ಕೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು   

ಚಿತ್ರದುರ್ಗ: ‘ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಅಭಿವೃದ್ಧಿಪಡಿಸಲು ₹ 86 ಲಕ್ಷ ವೆಚ್ಚ ಮಾಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಮಂಗಳವಾರ ನಗರದ ನಿಜಲಿಂಗಪ್ಪನವರ ನಿವಾಸ ಹಾಗೂ ಸೀಬಾರ ಬಳಿಯ ನಿಜಲಿಂಗಪ್ಪ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ನಂತರ ಅವರು ಮಾತನಾಡಿದರು.

‘ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ನಿಜಲಿಂಗಪ್ಪ ಅವರ ನಿವಾಸ ಖರೀದಿ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ₹ 5 ಕೋಟಿ ಹಣ ಬಿಡುಗಡೆ ಮಾಡಿದೆ. ಇದರಲ್ಲಿ ಈಗಾಗಲೇ ₹ 4.18 ಕೋಟಿಗೆ ನಿವಾಸ ಖರೀದಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಮನೆಯ ನವೀಕರಣ ಹಾಗೂ ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಉಳಿಕೆ ₹ 82 ಲಕ್ಷ ಸೇರಿ ಒಟ್ಟು ₹ 86 ಲಕ್ಷ ಹಣ ಲಭ್ಯವಿದೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರನಾಯಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪನವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಬಾಳಿ ಬದುಕಿದ ನಿವಾಸಕ್ಕೆ ಬೆಲೆ ಕಟ್ಟಲಾಗದು. ಹಿರಿಯ ಮುಖಂಡರಾದ ಹನುಮಂತಪ್ಪ ಹಾಗೂ ಎಸ್.ನಿಜಲಿಂಗಪ್ಪನವರ ಮಗ ಕಿರಣ್ ಶಂಕರ್ ಅವರು ಟ್ರಸ್ಟ್‌ ಸ್ಥಾಪಿಸಿ ಸ್ಮಾರಕ ನಿರ್ಮಿಸಿ, ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ನಿವಾಸವನ್ನೂ ವಸ್ತುಸಂಗ್ರಹಾಲಯವನ್ನಾಗಿ ಮಾಡುವ ದೃಷ್ಟಿಯಿಂದ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿ ಕೂಡ ಉತ್ಸುಕತೆಯಿಂದ ಆಸಕ್ತಿ ವಹಿಸಿದ್ದಾರೆ’ ಎಂದು ಹೇಳಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೂ ಈ ಕುರಿತು ಸೂಚನೆ ನೀಡಿದ್ದೇನೆ. ನಿವಾಸದ ಮೂಲ ವಿನ್ಯಾಸಕ್ಕೆ, ಗೋಡೆಗಳಿಗೆ ಯಾವುದೇ ಧಕ್ಕೆ ಆಗದಂತೆ ನವೀಕರಣ ಮಾಡಬೇಕು. ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಒಳಗೊಂಡಂತೆ ಸಮಿತಿ ರಚಿಸಿ ಸಲಹೆ ಪಡೆಯಲಾಗುವುದು. ಲಭ್ಯವಿರುವ ₹ 86 ಲಕ್ಷ ಸೇರಿ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು. ಚಿತ್ರದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಎಸ್. ನಿಜಲಿಂಗಪ್ಪ ಅವರ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡುವ ರೀತಿಯಲ್ಲಿ ಸ್ಮಾರಕ ಅಭಿವೃದ್ಧಿ ಮಾಡಲಾಗುವುದು’ ಎಂದು ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ನಾಮಕರಣದ 50ನೇ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಇದರ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ ಪುತ್ಥಳಿ ಸ್ಥಾಪಿಸಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ನಮ್ಮ ಅವಧಿಯಲ್ಲಿ ನೆರವೇರಿಸಿರುವುದು ಸೌಭಾಗ್ಯ. ಎಸ್.ನಿಜಲಿಂಗಪ್ಪನವರ ನಿವಾಸವನ್ನು ವಸ್ತು ಸಂಗ್ರಹಾಯಲಯವನ್ನಾಗಿ ಮಾಡುತ್ತಿರುವ ಹೊತ್ತಿನ್ಲಲಿ ನಾನು ಸಚಿವನಾಗಿರುವುದು ಹೆಮ್ಮೆ ವಿಷಯ’ ಎಂದರು.

‘ಸರ್ಕಾರ ಮಠಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿಲ್ಲ. ನಿಯಮಾನುಸಾರ ಶೇ 25ರಷ್ಟು ಹಣ ಮೀಸಲಿರಿಸಿ ಅನುದಾನ ಘೋಷಿಸಬೇಕಿದೆ. ಸರ್ಕಾರ ಆರ್ಥಿಕ ಶಿಸ್ತು ಪಾಲನೆ ಮಾಡುತ್ತಿದೆ. ಇದೇ ರೀತಿ ವಿವಿಧ ಸಮುದಾಯಗಳ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಲು ₹ 5 ಕೋಟಿ ಮೂಲ ಧನ ಇರಿಸಬೇಕು. ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ಧಿ  ನಿಗಮಕ್ಕೆ ₹ 5 ಕೋಟಿ ನೀಡಿ, ಕಂಪನಿ ಕಾಯ್ದೆಯಡಿ ನೋಂದಣಿ ಮಾಡಿಸಲಾಗಿದೆ’ ಎಂದು ಹೇಳಿದರು.

ಇದೇ ವೇಳೆ ನಿಜಲಿಂಗಪ್ಪ ಸ್ಮಾರಕದಲ್ಲಿರುವ ಅವರ ಛಾಯಾಚಿತ್ರ ವೀಕ್ಷಣೆ ಮಾಡಿದರು. ಎಸ್. ನಿಜಲಿಂಗಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ಗೌರವಾಧ್ಯಕ್ಷ ಎ.ಹನುಮಂತಪ್ಪ, ಗೌರವ ಕಾರ್ಯದರ್ಶಿ ಕಿರಣ್ ಶಂಕರ್, ಟ್ರಸ್ಟಿಗಳಾದ ಮೋಹನ್ ಕುಮಾರ್ ಕೊಂಡಜ್ಜಿ, ಕೆಇಬಿ ಷಣ್ಮುಖಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಇದ್ದರು.

ದುರ್ಗೋತ್ಸವಕ್ಕೆ ಪ್ರಸ್ತಾವ ಸಲ್ಲಿಸಿ

‘ಕೋಟೆನಾಡು ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಣೆ ಮಾಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಈ ಬಾರಿ ಉತ್ತಮ ಮಳೆಯಾಗಿದ್ದು ಅಣೆಕಟ್ಟೆಗಳು ತುಂಬಿ ತುಳುಕುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ಮಾಡುವುದು ತಪ್ಪಲ್ಲ’ ಎಂದು ಶಿವರಾಜ ತಂಗಡಗಿ ಹೇಳಿದರು. ‘ಈ ಹಿಂದೆ ಎರಡು ಬಾರಿ ದುರ್ಗೋತ್ಸವ ಆಯೋಜಿಸಲಾಗಿತ್ತು. ದುರ್ಗೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಿದರೆ ನಿಶ್ಚಿತವಾಗಿ ಆಚರಣೆ ಮಾಡಲಾಗುವುದು. ಮುಖ್ಯಮಂತ್ರಿ ಸಹ ದುರ್ಗೋತ್ಸವ ಆಚರಣೆಗೆ ಅವಕಾಶ ಹಾಗೂ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.