ADVERTISEMENT

ಹಿರಿಯೂರು: ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ

ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಸಿಕ್ಕ–ಸಿಕ್ಕ ವಾಹನ ಏರುವ ಗ್ರಾಮೀಣ ಮಕ್ಕಳು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:59 IST
Last Updated 25 ಸೆಪ್ಟೆಂಬರ್ 2021, 5:59 IST
ಹಿರಿಯೂರಿನ ಶಾಲೆ–ಕಾಲೇಜುಗಳಿಗೆ ತಾಲ್ಲೂಕಿನ ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ, ದೊಡ್ಡಗಟ್ಟ, ಕೂನಿಕೆರೆ, ಲಕ್ಕವ್ವನಹಳ್ಳಿ ಭಾಗದಿಂದ ನಿತ್ಯ ಓಡಾಡುವ ವಿದ್ಯಾರ್ಥಿಗಳು ಟಾಟಾ ಏಸ್ ವಾಹನದಿಂದ ಗುಂಪು–ಗುಂಪಾಗಿ ಇಳಿಯುತ್ತಿರುವುದು.
ಹಿರಿಯೂರಿನ ಶಾಲೆ–ಕಾಲೇಜುಗಳಿಗೆ ತಾಲ್ಲೂಕಿನ ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ, ದೊಡ್ಡಗಟ್ಟ, ಕೂನಿಕೆರೆ, ಲಕ್ಕವ್ವನಹಳ್ಳಿ ಭಾಗದಿಂದ ನಿತ್ಯ ಓಡಾಡುವ ವಿದ್ಯಾರ್ಥಿಗಳು ಟಾಟಾ ಏಸ್ ವಾಹನದಿಂದ ಗುಂಪು–ಗುಂಪಾಗಿ ಇಳಿಯುತ್ತಿರುವುದು.   

ಹಿರಿಯೂರು: ತಾಲ್ಲೂಕಿನ ಲಕ್ಕವ್ವನಹಳ್ಳಿ, ಕೂನಿಕೆರೆ, ದೊಡ್ಡಗಟ್ಟ, ಕಾತ್ರಿಕೇನಹಳ್ಳಿ, ಅಮ್ಮನಹಟ್ಟಿ, ಕುರುಬರಹಳ್ಳಿ ಮಾರ್ಗವಾಗಿ ವಾಣಿ ವಿಲಾಸಪುರಕ್ಕೆ ಹೋಗುವ ರಸ್ತೆಯಲ್ಲಿ ಶಾಲೆ–ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಕಣ್ಣಿಗೆ ಕಂಡ ವಾಹನ ಏರಿ ಹೋಗುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ, ದೊಡ್ಡಗಟ್ಟ, ಕೂನಿಕೆರೆ, ಲಕ್ಕವ್ವನಹಳ್ಳಿಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿರಿಯೂರಿಗೆ ಶಿಕ್ಷಣ ಪಡೆಯಲು ಬರುತ್ತಾರೆ. ಅದೇ ರೀತಿ ಕಾತ್ರಿಕೇನಹಳ್ಳಿ, ಅಮ್ಮನಹಟ್ಟಿ, ಕುರುಬರಹಳ್ಳಿಯ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಪಿಯು ವ್ಯಾಸಂಗಕ್ಕೆ ವಾಣಿ ವಿಲಾಸಪುರಕ್ಕೆ ಹೋಗುತ್ತಾರೆ. ಈ ಮಾರ್ಗದಲ್ಲಿ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣಕ್ಕೆ ಟಾಟಾ ಏಸ್, ಆಟೊಗಳನ್ನು ಹಿಡಿದು ವಿದ್ಯಾರ್ಥಿಗಳು ಹೋಗುವುದುಂಟು.

ಈ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಮೂರ್ನಾಲ್ಕು, ಆಟೊದಲ್ಲಿ 10–15, ಟಾಟಾ ಏಸ್ ವಾಹನದಲ್ಲಿ 20–25 ಜನ ಪ್ರಯಾಣಿಸುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಅವಘಡಗಳು ಸಂಭವಿಸಿದಲ್ಲಿ ಸಾವು–ನೋವಿನ ಪ್ರಮಾಣ ಹೇಳಲಾಗದು. ಜೊತೆಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರಯಾಣಿಕರಿದ್ದರೆ ಸಾವು–ನೋವು ಆದವರಿಗೆ ವಿಮೆ
ಬರುವುದಿಲ್ಲ.

ADVERTISEMENT

ಒತ್ತಾಯ: ಹಿರಿಯೂರಿನಿಂದ ಲಕ್ಕವ್ವನಹಳ್ಳಿ, ದೊಡ್ಡಗಟ್ಟ, ಕಾತ್ರಿಕೇನಹಳ್ಳಿ, ಕುರುಬರಹಳ್ಳಿ ಮಾರ್ಗವಾಗಿ ಹೊಸದುರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ಸು ಓಡಿಸಿದಲ್ಲಿ ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ, ಹಣ್ಣು–ಹಾಲು–ತರಕಾರಿ ಮಾರಲು ಬರುವ ರೈತರಿಗೆ ಅನುಕೂಲವಾಗುತ್ತದೆ. ಸಂಭವನೀಯ ಅವಘಡಗಳನ್ನು ತಪ್ಪಿಸಿದಂತಾಗುತ್ತದೆ ಎಂದು ಪುನೀತ್ ಪಟೇಲ್, ಎಸ್. ಸಂತೋಷ್, ಮನೋಜ್ ನಾಯ್ಕ್, ಸುದರ್ಶನ್, ವರ್ಷಿತಾ, ಅಂಬುಜ, ಕುಸುಮಾ, ಕೀರ್ತನ, ರಮ್ಯಾ, ಕಾವ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.