ADVERTISEMENT

ಕೋವಿಡ್‌ ರೋಗಿಗಳ ಸೇವೆ ಪುಣ್ಯದ ಕೆಲಸ: ಮಹಾಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:21 IST
Last Updated 4 ಮೇ 2021, 5:21 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   

ಚಳ್ಳಕೆರೆ: ‘ಕೋವಿಡ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದು ಪುಣ್ಯದ ಕೆಲಸ. ಆರೋಗ್ಯದ ಸೇವೆಯ ಕೆಲಸದಲ್ಲಿ ಜಾತಿ-ಧರ್ಮ ಯಾವುದೂ ಅಡ್ಡ ಬರುವುದಿಲ್ಲ. ಸೋಂಕಿತರ ಒಡನಾಡಿಯಾಗಿರುತ್ತೇವೆ. ಇದರಿಂದ ಪ್ರೀತಿ, ಗೌರವವು ಹೆಚ್ಚುತ್ತದೆ...’

ಇದು ಚಳ್ಳಕೆರೆ ನಗರದ ಸರ್ಕಾರಿ ಜನರಲ್ ಆಸ್ಪತ್ರೆಯ ಶುಶ್ರೂಷಕಿ ಹೊನ್ನಾವತಿ ಅವರ ಮನದಾಳದ ಮಾತು.

‘ಕೋವಿಡ್‍ಗೆ ಧೈರ್ಯವೇ ಮದ್ದು. ಸೋಂಕಿತರ ಜತೆಗೆ ಆಸ್ಪತ್ರೆಗೆ ಬರುವವರನ್ನು ಮತ್ತು ಅನಗತ್ಯವಾಗಿ ಓಡಾಡುವ ಜನರನ್ನು ಮೊದಲು ನಿಯಂತ್ರಿಸಬೇಕು. ವೈದ್ಯರು ಹೇಳುವುದನ್ನು ತಪ್ಪದೇ ಪಾಲಿಸಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ADVERTISEMENT

‘ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿದಾಗ ಎಲ್ಲಿಲ್ಲದ ಸಂತೋಷ ಆಗುತ್ತದೆ. ನಿತ್ಯ ಕನಿಷ್ಠ 2–3 ಗಂಟೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತೇವೆ. ಕಿಟ್ ಧರಿಸಿದಾಗ ಉಸಿರು ಕಟ್ಟುತ್ತದೆ. ತಲೆ ಸುತ್ತು ಬಂದಂತಾಗಿ ಸುಸ್ತು ಆಗುತ್ತದೆ. ಆದರೂ ಈ ಸಂದರ್ಭದಲ್ಲಿ ಕಷ್ಟಗಳನ್ನು ಸಹಿಸಿಕೊಂಡು ಕೆಲಸ ಮಾಡಬೇಕಿರುವುದು ಅನಿವಾರ್ಯ’ ಎನ್ನುತ್ತಾರೆ ಹೊನ್ನಾವತಿ.

ನೊಂದವರ ನೋವಿನ ಅರಿವು
ಚಳ್ಳಕೆರೆ:
‘ನೊಂದವರ ನೋವು ನಿಜವಾಗಿ ಅರ್ಥವಾಗುವುದು ಕೋವಿಡ್ ಕೇಂದ್ರದಲ್ಲಿ. ಕೆಲಸ ಕಷ್ಟ ಆದರೂ ಚಿಕಿತ್ಸೆಯನ್ನು ನಂಬಿ ಬಂದ ಜನರ ನೋವಿಗೆ ಮಿಡಿಯಲೇಬೇಕು. ಇದರಿಂದಲೇ ರೋಗಿಗಳಿಗೆ ಅರ್ಧ ಕಾಯಿಲೆ ವಾಸಿಯಾಗುತ್ತದೆ’.

ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಶಕಿ ಮಹಾಲಕ್ಷ್ಮೀ ಅವರ ದೃಢವಾದ ಮಾತಿದು.

‘ರೋಗಿಗಳ ಸೇವೆಯಿಂದ ಮಾನಸಿಕ ನೆಮ್ಮದಿಯು ಇದೆ. 5–6 ವರ್ಷ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಈಗ ನಗರದ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆಸ್ಪತ್ರೆಗೆ ಬಂದ ತಕ್ಷಣ ಮನೆಯಲ್ಲಿ ಸಮಸ್ಯೆಗಳು ಮರೆತು ಹೋಗುತ್ತವೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಜತೆಗೆ ಕೆಲಸ ಮಾಡಲು ಉತ್ಸಾಹ ಹೆಚ್ಚುತ್ತದೆ’ ಎನ್ನುತ್ತಾರೆ ಅವರು.

‘ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣುವ ಸಂಸ್ಕೃತಿ ದೂರ ಮಾಡಬೇಕು. ವೈದ್ಯರ ಸಲಹೆ, ಉತ್ತಮ ಚಿಕಿತ್ಸೆ ಪಡೆದರೆ ಕೋವಿಡ್ ಭಯಾನಕ ರೋಗವೇ ಅಲ್ಲ. ಹೆಚ್ಚು ಭಯ–ಭೀತರಾಗುವ ಬದಲಿಗೆ ವಿದ್ಯಾವಂತರು ರೋಗಿಗಳಲ್ಲಿ ಆತ್ಮ ಸ್ಥೈರ್ಯ ತುಂಬಬೇಕು. ಹೊರಗಡೆಯಿಂದ ಮನೆಗೆ ಪ್ರವೇಶಿಸುವಾಗ ಕೈ-ಕಾಲು ಮುಖ ತೊಳೆದು, ನಂತರ ಉಡುಪನ್ನು ಬದಲಿಸಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.