ಚಿತ್ರದುರ್ಗ: ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಭದ್ರಾ ಬಲದಂಡೆಯಿಂದ ಜಿಲ್ಲೆಗೆ ನೀರು ಪೂರೈಸುವುದಕ್ಕೆ ದಾವಣಗೆರೆ ಜಿಲ್ಲೆಯವರು ಅಡ್ಡಿಪಡಿಸುತ್ತಿರುವುದು ಖಂಡನೀಯ. ಕುಡಿಯುವ ನೀರು, ತಿನ್ನುವ ಅನ್ನಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ ಅಪರಾಧ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಆದೇಶ ನೀಡಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ಭಾರತೀಯ ಸಂವಿಧಾನ ಕುಡಿಯುವ ನೀರು, ಅನ್ನಕ್ಕೆ ಬೇಲಿ ಹಾಕಿಲ್ಲ, ನೀರು ಯಾರ ಸ್ವತ್ತೂ ಅಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಪೂರ್ಣಗೊಂಡಿದ್ದು, ಮುಖ್ಯಮಂತ್ರಿಯವರು ಕೂಡಲೇ ಇದನ್ನು ಉದ್ಘಾಟಿಸಬೇಕು. ನೂರಾರು ಕೋಟಿ ಖರ್ಚು ಮಾಡಿ ಪೂರ್ಣಗೊಳಿಸಿರುವ ಯೋಜನೆಗೆ ಅಡ್ಡಿಪಡಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹೊಸದುರ್ಗ ತಾಲ್ಲೂಕಿನ 346 ಜನವಸತಿ ಪ್ರದೇಶ, ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ 117 ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಕಲ್ಪಿಸಲು ಅಪಾರ ಹಣ ವೆಚ್ಚ ಮಾಡಲಾಗಿದೆ. ಬಿಜೆಪಿ ಸರ್ಕಾರವೇ ಈ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದೆ. ದಾವಣಗೆರೆ– ಚಿತ್ರದುರ್ಗ ಜಿಲ್ಲೆಗಳು ಹಿಂದೂಸ್ತಾನ ಹಾಗೂ ಪಾಕಿಸ್ತಾನ ಅಲ್ಲ. ಕೂಡಲೇ ದಾವಣಗೆರೆ ಜಿಲ್ಲೆಯವರು ಹೋರಾಟ ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.
‘ಮಹಾರಾಷ್ಟ್ರದ ಜತ್ ತಾಲ್ಲೂಕಿನ ಜನರು ಕೃಷ್ಣಾ ನದಿ ನೀರಿಗಾಗಿ ಹೋರಾಟ ಮಾಡುತ್ತಿದ್ದರು. ನೀರಿಗಾಗಿ ಅವರು ಮಹಾರಾಷ್ಟ್ರ ಬಿಟ್ಟು ಕರ್ನಾಟಕಕ್ಕೆ ಸೇರಲು ಸಿದ್ಧರಿದ್ದರು. ಮಾನವೀಯತೆ ದೃಷ್ಟಿಯಿಂದ ನಾವು ಆ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ನೀಡಿದ್ದೇವೆ. ಬೇಸಿಗೆಯಲ್ಲಿ ಕೃಷ್ಣಾ, ಭೀಮಾ ನದಿ ಒಣಗಿದಾಗ ನಮಗೆ ಮಹಾರಾಷ್ಟ್ರದವರು ಕೊಯ್ನಾ ಜಲಾಶಯದಿಂದ ಕುಡಿಯುವ ನೀರು ಕೊಡುತ್ತಾರೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷವಾದರೂ ರಾಜಕಾರಣ ಮಾಡಬಾರದು’ ಎಂದರು.
‘ಮುಖ್ಯಮಂತ್ರಿಯವರು ದಿನಾಂಕ ನಿಗದಿ ಮಾಡಿ ಯೋಜನೆಯನ್ನು ಲೋಕಾರ್ಪಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಜಿಲ್ಲೆಯ ರೈತರ ಜೊತೆಗೂಡಿ ಹೋರಾಟ ನಡೆಸುವ ಬಗ್ಗೆ ಚರ್ಚಿಸಲಾಗುವುದು. ಜನರ ಜೊತೆ ನಾವೂ ಹೋರಾಟಕ್ಕೆ ಇಳಿಯುತ್ತೇವೆ. ಮೂಲ ಸೌಕರ್ಯ ಒದಗಿಸುವ ಯೋಜನೆಗಳಿಗೆ ಅಡ್ಡಿಪಡಿಸುವವರ ವಿರುದ್ಧ ಸರ್ಕಾರ ಕೂಡ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ಈಗ ನಾವು ಸೌಮ್ಯವಾಗಿ ಉತ್ತರ ನೀಡುತ್ತಿದ್ದೇವೆ. ಮುಂದೆ ಸರ್ಕಾರ, ಕುಡಿಯುವ ನೀರಿನ ಯೋಜನೆಗೆ ಚಾಲನೆ ಕೊಡಿಸದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ಕೆಲ ಸಣ್ಣಮನಸ್ಸಿನ ಜನರು ಪ್ರಚಾರಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ಕುಡಿಯುವ ನೀರು ಎಲ್ಲರಿಗೂ ದೊರೆಯಬೇಕು. ಅದಕ್ಕೆ ಅಡ್ಡಿಪಡಿಸುವುದು ಅತ್ಯಂತ ಸಣ್ಣತನದ ನಡೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರಿ ಗಿರೀಶ್, ವಕ್ತಾರ ನಾಗರಾಜ್ ಬೇದ್ರೆ, ಹೊಸದುರ್ಗ ಪುರಸಭೆಯ ಉಪಾಧ್ಯಕ್ಷರಾದ ಗಿರಿಜಾ, ರಾಜೇಶ್ವರಿ ಆನಂದ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿ.ಪಂ.ಮಾಜಿ ಸದಸ್ಯ ಗುರುಸ್ವಾಮಿ ಉಪಸ್ಥಿತರಿದ್ದರು.
‘ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡ್ಡಿಪಡಿಸುತ್ತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಹಾಳು ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಬಿಜೆಪಿಗೂ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಈ ಕುರಿತು ರಾಜ್ಯ ರಾಷ್ಟ್ರ ಮುಖಂಡರಿಗೆ ಅವರ ವಿರುದ್ಧ ದೂರು ನೀಡಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು. ‘ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಸಿ ಎಸ್‌ಟಿ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೇಣುಕಾಚಾರ್ಯ ಸೇರಿದಂತೆ ಇತರ ಮುಖಂಡರು ದಲಿತ ಸಮುದಾಯಗಳ ಜನರಿಗೆ ನೀರು ಕೊಡಲು ನಿರಾಕರಿಸುತ್ತಿದ್ದಾರೆ. ನಾಲೆ ಸೀಳಿ ನೀರು ಒದಗಿಸುವುದರಿಂದ ಜಲಾಶಯಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಈಗಾಗಲೇ ವರದಿ ನೀಡಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆಯವರು ಹೋರಾಟ ಕೈಬಿಡಬೇಕು’ ಎಂದು ಒತ್ತಾಯಿಸಿದರು. ‘ಇದೇ ಭದ್ರಾ ನಾಲೆ ಸೀಳಿ ಭದ್ರಾವತಿವರೆಗೂ ನೀರು ಕೊಂಡೊಯ್ಯಲಾಗಿದೆ. 21 ಕಡೆ ನಾಲೆ ಸೀಳಿ ದಾವಣಗೆರೆ ಜಿಲ್ಲೆಯ ವಿವಿಧೆಡೆ ನೀರು ಸರಬರಾಜು ಮಾಡಲಾಗುತ್ತಿದೆ. ಆಗ ಇಲ್ಲದ ವಿರೋಧ ಚಿತ್ರದುರ್ಗ ಜಿಲ್ಲೆಯ ವಿಚಾರಕ್ಕೆ ಏಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.