ADVERTISEMENT

ನೈರ್ಮಲ್ಯಕ್ಕೆ ಬೇಕಾಗಿದೆ ಪಂಚಾಯಿತಿ ಗಮನ

ರಸ್ತೆಗಳಾದ ಚರಂಡಿಗಳು ಎಲ್ಲೆಲ್ಲೂ ಗಬ್ಬು ವಾಸನೆ ನೀರಿಗಾಗಿ ಕಾಯುತ್ತಿರುವ ಗ್ರಾಮಜನತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:50 IST
Last Updated 17 ಡಿಸೆಂಬರ್ 2020, 6:50 IST
ಭರಮಸಾಗರ ಸಮೀಪ ಕೋಡಿಹಳ್ಳಿ ಗ್ರಾಮದಲ್ಲಿಯ ಚರಂಡಿಗಳು ತ್ಯಾಜ್ಯದಿಂದ ಹೂಳು ತುಂಬಿವೆ.
ಭರಮಸಾಗರ ಸಮೀಪ ಕೋಡಿಹಳ್ಳಿ ಗ್ರಾಮದಲ್ಲಿಯ ಚರಂಡಿಗಳು ತ್ಯಾಜ್ಯದಿಂದ ಹೂಳು ತುಂಬಿವೆ.   

ಭರಮಸಾಗರ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕೆರೆಗೆ ನೀರು ತುಂಬಿಸುವಂತಹ ದೊಡ್ಡ ಯೋಜನೆಗಳು, ತಾಲ್ಲೂಕು ಕೇಂದ್ರಕ್ಕೆ ಹೋರಾಟ ಕೇಳಿ ಬರುತ್ತಿರುವ ಈ ಹೋಬಳಿ ಈ ಹಿಂದೆ ಹಲವು ಮುಖಂಡರ ವಿಧಾನಸಭಾ ಕ್ಷೇತ್ರವಾಗಿತ್ತು. ಇದರಿಂದಾಗಿ ಈ ಭಾಗದ ಹಳ್ಳಿ ರಾಜಕೀಯ ಚುರುಕುಗೊಂಡಿದೆ.

ಗ್ರಾಮಗಳ ಮಟ್ಟದಲ್ಲಿಯೇ ರಾಜಕೀಯ ಗಟ್ಟಿಗೊಳಿಸಿ ಮುಂದಿನ ದಿನಗಳಲ್ಲಿ ತಾಲ್ಲೂಕು, ಜಿಲ್ಲಾ ಪಂಚಾಯಿತಿಯಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಯೋಚನೆಯಲ್ಲಿರುವ ಮುಖಂಡರಿಗೆ ಗ್ರಾಮದ ಅಭಿವೃದ್ಧಿ ಹೇಗೆ ಎಂಬ ಪ್ರಶ್ನೆ ಸಹಜವಾಗಿದೆ. ಹೋಬಳಿಯಲ್ಲಿ 10 ಗ್ರಾಮ ಪಂಚಾಯಿತಿಗಳ 178 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 65 ಕಂದಾಯ ಗ್ರಾಮಗಳು ಸೇರಿವೆ. ‌ಗ್ರಾಮಗಳ ಕೆಲ ಭಾಗಗಳು ಮುದ್ದಾಪುರ, ಹಿರೇಗುಂಟನೂರು ವ್ಯಾಪ್ತಿಗೆ ಒಳಪಟ್ಟಿವೆ. ಎಲ್ಲಾ ಹಳ್ಳಿಗಳಲ್ಲೂ ಒಂದಿಲ್ಲೊಂದು ಸಮಸ್ಯೆಗಳು ಇವೆ.

ಚಿತ್ರದುರ್ಗ - ದಾವಣಗೆರೆ ಅವಳಿ ಜಿಲ್ಲೆಯ ಮಧ್ಯದಲ್ಲಿರುವ ಈ ಭಾಗದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ, ಸೂಳೆಕೆರೆಯ ಶಾಂತಿಸಾಗರದಿಂದ ಕುಡಿಯುವ ನೀರಿನ ವ್ಯವಸ್ಥೆ, ಕ್ಷೇತ್ರದಲ್ಲಿಯ ಸಂಪರ್ಕ ರಸ್ತೆ ಕಾಮಗಾರಿಗಳ ಅನುಷ್ಠಾನದಿಂದಾಗಿ ಹೋಬಳಿಯ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾನ ಗಿಟ್ಟಿಸುವುದು ಒಂದು ಪ್ರತಿಷ್ಠೆಯಾಗಿದೆ. ಕೊರೊನಾ ಸಮಯದಲ್ಲಿ ನಗರಗಳಿಂದ ಕೆಲಸ ತೊರೆದು ಬಂದ ಯುವಕರು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಾತರರಾಗಿದ್ದಾರೆ. ಹೀಗಿದ್ದರೂ ಹೋಬಳಿಯಲ್ಲಿ ಸಮಸ್ಯೆ ತಾಂಡವವಾಡುತ್ತಲೇ ಇದೆ.

ADVERTISEMENT

ಶಾಲೆಗಳಲ್ಲಿ ಅನೈರ್ಮಲ್ಯ: ಹೋಬಳಿಯ ಎಲ್ಲಾ ಗ್ರಾಮದ ಒಳರಸ್ತೆಗಳು ಶೇ 80 ಸಿ.ಸಿ ರಸ್ತೆಗಳಾಗಿದ್ದರೂ ಶಾಲಾ ಸುತ್ತಮುತ್ತ ಅನೈರ್ಮಲ್ಯ, ಅಂತ್ಯಕ್ರಿಯೆಗೆ ರುದ್ರಭೂಮಿ, ಕುಡಿಯುವ ನೀರಿನ ಸಮಸ್ಯೆ ಇದೆ. ಹೆಸರಿಗೆ ಮಾತ್ರ ಬಯಲು ಬಹಿರ್ದೆಸೆ ಮುಕ್ತ ಎಂಬ ಪಟ್ಟಿ ಇದೆ. ಎಲ್ಲಾ ಗ್ರಾಮಗಳಲ್ಲೂ ಬಯಲು ಬಹಿರ್ದೆಸೆ ಕಾಣಬರುತ್ತದೆ. ಹೋಬಳಿ ಕೇಂದ್ರವಾದ ಭರಮಸಾಗರದಲ್ಲಿಯೇ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಕೋಗಂಡೆ ಪಂಚಾಯಿತಿಗೆ ಸೇರಿದ ನಂದೀಹಳ್ಳಿ, ಬಹದ್ದೂರುಘಟ್ಟ, ಕೋಡಿಹಳ್ಳಿ, ಕಾಲಗೆರೆ ಪಂಚಾಯಿತಿಗೆ ಸೇರಿದ ಹುಲ್ಲೇಹಾಳು, ನೆಲ್ಲಿಕಟ್ಟೆ ನವಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಲ್ಲಿ ತ್ಯಾಜ್ಯದ ಹೂಳು ತುಂಬಿದ್ದು, ಸೊಳ್ಳೆಗಳ ತಾಣವಾಗಿವೆ.

200 ಮನೆಗಳಿರುವ ಕೋಗುಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮತದಾರರಿದ್ದಾರೆ. ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿದ್ದು, ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಗ್ರಾಮವನ್ನು ಪ್ರತಿನಿಧಿಸಲಿದ್ದಾರೆ. ರಸ್ತೆಬದಿ ನಿರ್ಮಿಸಿರುವ ಬಾಕ್ಸ್ ಚರಂಡಿಗಳು ತುಂಬಿ ತುಳುಕುತ್ತಿವೆ. ಕೆಲಭಾಗದಲ್ಲಿ ಸೊಳ್ಳೆಗಳು ಗೂಡುಕಟ್ಟಿವೆ, ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನೂ ಕೆಲವೆಡೆ ಸಂಪೂರ್ಣ ಮಣ್ಣು ತುಂಬಿ ಬ್ಲಾಕ್ ಆಗಿವೆ. ಚರಂಡಿ ಇದ್ದರೂ ನೀರು ಸರಾಗವಾಗಿ ಹರಿಯುತ್ತಿಲ್ಲ.

ಬೀದಿ ದೀಪಗಳು ಇದ್ದರೂ ಬೆಳಕು ಸೂಸುವುದು ಅಪರೂಪ. ಮಿನಿ ಟ್ಯಾಂಕ್ ನಿರ್ಮಿಸಿದ್ದು, ಸ್ವಚ್ಛತೆ ಕಂಡು ಎಷ್ಟೋ ವರ್ಷಗಳಾಗಿವೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಲ್ಲಿಗೆ ಒಂದು ಶುದ್ಧ ಕುಡಿಯುವ ನೀರಿನ ಘಟಕ ಬೇಕೆಂಬುದು ಜನರ ಬೇಡಿಕೆಯಾಗಿದೆ. ವಸತಿ ಸೌಲಭ್ಯಕ್ಕೆ ಕಾಯುತ್ತಿರುವ ಬಡವರ ಸಂಖ್ಯೆ ಹೆಚ್ಚಾಗಿದೆ. ಕಾಲಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ನೆಲ್ಲಿಕಟ್ಟೆ, ನವಗ್ರಾಮಗಳಲ್ಲಿಯೂ ಯಳಗೋಡು ಪಂಚಾಯಿತಿ ವ್ಯಾಪ್ತಿಯ ಹುಲ್ಲೇಹಾಳು ಗ್ರಾಮಗಳಲ್ಲಿಯೂ ಹಲವು ಸಮಸ್ಯೆಗಳಿವೆ. ಗ್ರಾಮದಲ್ಲಿ ಒಂದು ಗ್ರಂಥಾಲಯ, ಅಂಚೆ ಕಚೇರಿ ಬೇಕೆಂಬುದು ಇಲ್ಲಿನ ಗ್ರಾಮಸ್ಥರ ಬೇಡಿಕೆ.

‘ಬ್ಯಾಲಹಾಳು ಗ್ರಾಮ ಪಂಚಾಯಿತಿಗೆ ಸೇರಿದ ಬೇಡರ ಶಿವನ ಕೆರೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶಾಂತಿ ಸಾಗರದ ನೀರಿನ ಸರಬರಾಜಿಗೆ ಪೈಪ್‌ಲೈನ್‌ ಅಳವಡಿಸಿದ್ದರೂ ನೀರು ಮಾತ್ರ ಬಂದಿಲ್ಲ. 5 ವರ್ಷಗಳಿಂದ ನೀರಿಗಾಗಿ ಪರಿತಪಿಸುವಂತಾಗಿದೆ’ ಎನ್ನುತ್ತಾರೆ ಗ್ರಾಮದ ನಾಗರಾಜ್.

ಭರಮಸಾಗರದಿಂದ ಬಹದ್ದೂರುಘಟ್ಟ, ಕೋಗುಂಡೆ, ಕೋಡಿಯಳ್ಳಿ, ಕಾಲ್ಗೆರೆ, ಕಾಕಬಾಳು ಗ್ರಾಮಗಳಿಗೆ ಈ ಹಿಂದೆ ಬಸ್‌ಗಳ ಸೌಲಭ್ಯವಿತ್ತು. ಈಗ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಆಟೊ, ಟ್ರ್ಯಾಕ್ಟರ್ ಹಾಗೂ ಬೈಕ್‌ಗಳನ್ನು ಆಶ್ರಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.