ಯಾದಗಿರಿ ನಗರ ಠಾಣೆ ಎಸ್ಐ ಪರಶುರಾಮ್ ಅವರ ಸಾವಿಗೆ ಕಾರಣರು ಎನ್ನಲಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಿರಿಯೂರು ತಾಲ್ಲೂಕು ಸಮಿತಿ ವತಿಯಿಂದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಹಿರಿಯೂರು: ‘ಕೇಳಿದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ದಲಿತ ಅಧಿಕಾರಿಯೊಬ್ಬರನ್ನು ಕರ್ತವ್ಯದಲ್ಲಿದ್ದ ಸ್ಥಳದಲ್ಲಿ ಒಂದು ವರ್ಷವೂ ಇರಲು ಬಿಡದೆ ವರ್ಗಾವಣೆ ಮಾಡಿಸಿರುವ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲ್ಲೂಕು ಸಮಿತಿ ವತಿಯಿಂದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
‘ಪರಿಶಿಷ್ಟ ಜಾತಿಗೆ ಸೇರಿದ್ದ ಎಸ್ಐ ಪರಶುರಾಮ್ ಅವರ ಸಾವು ಸಂಶಯಾಸ್ಪದವಾಗಿದೆ. ಯಾದಗಿರಿ ನಗರ ಠಾಣೆಯಿಂದ ವರ್ಷದ ಒಳಗೆ ಸೈಬರ್ ಠಾಣೆಗೆ ವರ್ಗಾವಣೆ ಮಾಡಿದ್ದರಿಂದ ಅವರು ಖಿನ್ನತೆಗೆ ಒಳಗಾಗಿರುವ ಸಾಧ್ಯತೆ ಇದೆ’ ಎಂದು ದೂರಿದರು.
‘ಶಾಸಕ ಹಾಗೂ ಅವರ ಪುತ್ರ ₹ 30– ₹ 40 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ದಲಿತ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿಸಲಾಗಿದೆ ಎಂದು ಪರಶುರಾಮ್ ಅವರ ಪತ್ನಿ ಆರೋಪಿಸಿದ್ದಾರೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಸೇನೆಯ ಮುಖಂಡರು ಒತ್ತಾಯಿಸಿದರು.
‘ರಾಜ್ಯದಲ್ಲಿ ದಲಿತ ಕುಟುಂಬಗಳಿಗೆ, ದಲಿತ ಮಹಿಳೆಯರಿಗೆ, ದಲಿತ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ. ಗೃಹ ಸಚಿವರು ಈಗಲಾದರೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮುಂದಾಗಬೇಕು. ಪರಶುರಾಮ್ ಕುಟುಂಬದವರಿಗೆ ಸೂಕ್ತ ನ್ಯಾಯ ಕೊಡಿಸಬೇಕು’ ಎಂದು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ. ರಾಮಚಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಆರ್. ರಾಘವೇಂದ್ರ, ಶಿವರಾಜ್ ಕುಮಾರ್, ಗೋವಿಂದಪ್ಪ, ಸಾಧಿಕ್ ಚನ್ನಗಿರಿ, ಲಕ್ಷ್ಮಣರಾವ್, ಗಿರೀಶ್, ವೀರೇಂದ್ರ, ರಾಘವೇಂದ್ರ, ಮಂಜುನಾಥ್, ಬುಡೇನ್ ಆಲಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.