ADVERTISEMENT

ಚಿತ್ರದುರ್ಗ| ಅನ್ಯ ಆಸ್ಪತ್ರೆಗಳಿಗೆ ಶಿಫಾರಸು; ಡಿ.ಸಿ ಅಸಮಾಧಾನ

ಆರೋಗ್ಯ ರಕ್ಷಾ ಸಮಿತಿ ಸಭೆ; ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರ ಎರವಲು ಸೇವೆ ಪಡೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:05 IST
Last Updated 9 ಜನವರಿ 2026, 7:05 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು   

ಚಿತ್ರದುರ್ಗ: ‘ತುರ್ತು ಚಿಕಿತ್ಸೆಗಾಗಿ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬಂದಾಗ ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ದೂರಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜನೆಗೊಂಡಿದ್ದು, ಎರಡೂ ಕಡೆ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಆದರೂ ಹೊರಗಿನ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿರುವುದು ಸರಿಯಲ್ಲ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳನ್ನು ಬೇರೆಡೆಗೆ ಶಿಫಾರಸು ಮಾಡುವುದು ನಿಲ್ಲಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ತಜ್ಞ ವೈದ್ಯರು ತಕ್ಷಣಕ್ಕೆ ಲಭ್ಯವಿಲ್ಲದಿದ್ದರೆ, ಕೂಡಲೇ ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರ ಎರವಲು ಸೇವೆ ಪಡೆಯಬೇಕು. ಆ ಮೂಲಕ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

‘ರೋಗಿಗಳಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಗಮನಹರಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಸಿಬ್ಬಂದಿ ಕೆಲಸದ ಸಮಯದಲ್ಲಿ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವ ಕುರಿತು ದೂರು ಕೇಳಿಬಂದಿದೆ. ಅಂದಾಜು 100 ಜನ ಗ್ರೂಪ್ ಡಿ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಎಲ್ಲಿಯೂ ಸ್ವಚ್ಛತೆ ಕಂಡು ಬರುವುದಿಲ್ಲ. ವೈದ್ಯಕೀಯ, ಅರೆ ವೈದ್ಯಕೀಯ, ಕ್ಲರಿಕಲ್, ನರ್ಸ್, ಗ್ರೂಪ್ ‘ಡಿ’ ನೌಕರರಿಗೆ ದಿನಕ್ಕೆ 4 ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಗೆ ಅಗತ್ಯವಿರುವ ಔಷಧೋಪಕರಣಗಳ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರು ಆರ್ಥಿಕ ವೆಚ್ಚದ ಅಧಿಕಾರದಡಿ ಖರ್ಚು ಮಾಡಿದ ವೆಚ್ಚದ ಮಾಹಿತಿಯನ್ನು ಜಿಲ್ಲಾ ಆಸ್ಪತ್ರೆ ಅಧೀಕ್ಷಕರ ಆದೇಶಗಳ ಸಹಿತ ವರದಿ ನೀಡಬೇಕು. ರಾಜ್ಯ ಔಷಧ ಉಗ್ರಾಣದಿಂದ ಸರಬರಾಜು ಆಗುವ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಹೊರತು ಪಡಿಸಿ, ಬೇರೆ ಔಷಧಗಳ ಖರೀದಿಗೆ ಮಾತ್ರ ಟೆಂಡರ್ ಕರೆಯಬೇಕು’ ಎಂದರು.

‘ಔಷಧೋಗ್ರಾಣದಿಂದ ಸರಬರಾಜು ಮಾಡಿದ ಔಷಧ ಹಾಗೂ ಉಪಕರಣಗಳು ರೋಗಿಗಳ ಬಳಕೆ ಯೋಗ್ಯವಾಗಿಲ್ಲ ಎಂದೆನಿಸಿದರೆ ಕೂಡಲೇ ವರದಿ ನೀಡಬೇಕು. ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗುವುದು. ಒಂದು ವೇಳೆ ಸರಬರಾಜು ಆದ ಔಷಧಗಳಿಗೆ ಮತ್ತೊಮ್ಮೆ ಟೆಂಡರ್ ಕರೆದು ಔಷಧಗಳನ್ನು ಪಡೆದಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

‘ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರ ನೇತೃತ್ವದಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿಯಲ್ಲಿ ಬದಲಾವಣೆ ತರಬೇಕು. ಜೋಗಿಮಟ್ಟಿ ವೃತ್ತ ಸಂಪರ್ಕಿಸುವ ಜಿಲ್ಲಾ ಆಸ್ಪತ್ರೆಯ ಮುಂದಿನ ರಸ್ತೆಯನ್ನು ಹಾಕರ್ ಜೋನ್ ಆಗಿ ಪರಿವರ್ತನೆ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಬೇಕು. ಇದರೊಂದಿಗೆ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು’ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಪಿ.ರವೀಂದ್ರ ಮಾಹಿತಿ ನೀಡಿ, ‘ಜಿಲ್ಲಾ ಆಸ್ಪತ್ರೆಯಲ್ಲಿ ಏಪ್ರಿಲ್ 2025ರಿಂದ ಡಿಸೆಂಬರ್‌ರವರೆಗೆ ಒಟ್ಟು 4,948 ಹೆರಿಗೆಗಳಾಗಿವೆ. ಈ ಪೈಕಿ 1,449 ಸಹಜ, 3,499 ಸಿಜೇರಿಯನ್ ಹೆರಿಗೆಗಳಾಗಿವೆ. ಒಟ್ಟು 3,27,453 ಹೊರ ರೋಗಿಗಳು, 40,477 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 1,274 ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 5,710 ಸಿ.ಟಿ. ಸ್ಕ್ಯಾನ್, 9,750 ಎಂ.ಆರ್.ಐ ಸ್ಕ್ಯಾನ್ ಮಾಡಲಾಗಿದೆ’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್, ನಗರಸಭೆ ಆಯುಕ್ತೆ ಲಕ್ಷ್ಮಿ, ವೈದ್ಯಾಧಿಕಾರಿ ಡಾ.ಆನಂದ್ ಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಶೀತಲ್ ಪ್ರಶಾಂತ, ಕೋಟೇಶ್, ಟಿ.ಆರ್.ಕಿರಣ್‍ಶಂಕರ್, ಗೋವಿಂದರಾಯ ಇದ್ದರು.

ಸಿಜೇರಿಯನ್‌; ವಿವರಣೆ ನೀಡದ ರವೀಂದ್ರ

‘ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಕೆಡಿಪಿ ಸಭೆಗಳಲ್ಲಿ ಕಳವಳ ವ್ಯಕ್ತವಾಗಿತ್ತು. ಸಹಜ ಹೆರಿಗೆಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಆದರೂ ಸಹಜ ಹೆರಿಗೆಗಳಿಗೆ ಹೋಲಿಸಿದರೆ ಸಿಜೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಸೂಕ್ತ ವಿವರಣೆಗಳನ್ನು ಮಾಹಿತಿ ಪುಸ್ತಕದಲ್ಲಿ ನೀಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾದವರ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು. ಇದರೊಂದಿಗೆ ಪ್ರಥಮ ಬಾರಿಗೆ ಸಿಜೇರಿಯನ್ ಹೆರಿಗೆಯಾದವರು ಹಾಗೂ ಎರಡನೇ ಬಾರಿಗೆ ಸಿಜೇರಿಯನ್ ಹೆರಿಗೆಯಾದವರ ವಿವರವನ್ನು ಪ್ರತ್ಯೇಕವಾಗಿ ನೀಡಬೇಕು. ಇವುಗಳನ್ನು ತುಲನಾತ್ಮವಾಗಿ ವಿಶ್ಲೇಷಿಸಿದಾಗ ಮಾತ್ರವೇ ಹೆರಿಗೆ ವಿಚಾರದಲ್ಲಿ ಜಿಲ್ಲಾ ಆಸ್ಪತ್ರೆ ಸುಧಾರಿಸಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದು ಬರುತ್ತದೆ. ಮುಂದಿನ ಕೆಡಿಪಿ ಪ್ರಗತಿ ಪರಿಶೀಲನೆ ಹೊತ್ತಿಗೆ ಸಂಪೂರ್ಣ ವಿವರ ನೀಡಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.