ಹೊಳಲ್ಕೆರೆ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಮಾದರಿಯಲ್ಲೇ ವೇತನ ನೀಡಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಒತ್ತಾಯಿಸಿದರು.
ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಮಾತನಾಡಿದರು.
ದೇಶದ 24 ರಾಜ್ಯಗಳು ತಮ್ಮ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ನೀಡುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಇದು ಜಾರಿಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ಇತರೆ ಭತ್ಯೆಗಳಲ್ಲಿ ಶೇ 20 ರಷ್ಟು ವ್ಯತ್ಯಾಸ ಇದೆ. ಕೇಂದ್ರ ಸರ್ಕಾರಿ ನೌಕರರಷ್ಟೇ ಕೆಲಸ ಮಾಡಿದರೂ ನಮ್ಮ ನೌಕರರು ಅವರಿಗಿಂತ ₹ 20 ರಿಂದ ₹ 30 ಸಾವಿರ ಕಡಿಮೆ ವೇತನ ಪಡೆಯುತ್ತಿದ್ದಾರೆ. ಬಿಹಾರದಂತಹ ಬಡ ರಾಜ್ಯದಲ್ಲೂ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ನಮ್ಮ ರಾಜ್ಯದ ನೌಕರರು ಮಾತ್ರ ಕಡಿಮೆ ವೇತನ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸಿದ್ದು, ಅದು ಜಾರಿಯಾಗುವಾಗ ನಮಗೂ ಅವರ ಸಮಾನವಾದ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ 2.8 ಲಕ್ಷ ಹುದ್ದೆಗಳು ಖಾಲಿ ಇವೆ. ಶೇ 40 ರಷ್ಟು ಹುದ್ದೆಗಳಿಗೆ ನೇಮಕಾತಿ ಆಗದಿದ್ದರೂ, ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ನಮ್ಮ ನೌಕರರ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಸರ್ಕಾರಿ ನೌಕರರು ಕರ್ತವ್ಯದ ಜೊತೆಗೆ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನಮ್ಮ ನೌಕರರು ಸರ್ಕಾರಕ್ಕೆ ₹ 1,200 ಕೋಟಿ ದೇಣಿಗೆ ನೀಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ನೌಕರರ ಹಿತ ಕಾಯುವ 25 ಆದೇಶಗಳನ್ನು ಹೊರಡಿಸಿತು. ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡಬೇಕಿದ್ದು, ಒಂದು ತಿಂಗಳ ಒಳಗೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿ ಆಗುವ ಭರವಸೆ ಇದೆ ಎಂದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. 5.5 ಲಕ್ಷ ಸರ್ಕಾರಿ ನೌಕರರಿಗೆ ಸರ್ಕಾರ ಪ್ರತೀ ವರ್ಷ ₹ 2.15 ಕೋಟಿ ವೇತನ ನೀಡುತ್ತಿದ್ದು, ನೌಕರರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಜನಸಾಮಾನ್ಯರಿಗೆ ಸ್ಪಂದಿಸಿ ಕೆಲಸ ಮಾಡಿ. ಬಡವರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ಕಿವಿಮಾತು ಹೇಳಿದರು.
ಉತ್ತಮ ಸೇವೆ ಸಲ್ಲಿಸಿದ ನೌಕರರನ್ನು ಸ್ನಾನಿಸಲಾಯಿತು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಶಪ್ಪ, ಗೌರವಾಧ್ಯಕ್ಷ ಲೋಕೇಶ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ, ಗೌರವಾಧ್ಯಕ್ಷ ಎಸ್. ಬಸವರಾಜು, ಉಪಾಧ್ಯಕ್ಷ ಆರ್. ಮೋಹನ ಕುಮಾರ್, ಸಿದ್ದಬಸಪ್ಪ, ಹರ್ಷ, ಜಿಲ್ಲಾ ಘಟಕದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಎನ್.ಪಿ.ಎಸ್. ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ನಾಗನಗೌಡ, ತಹಶೀಲ್ದಾರ್ ವಿಜಯಕುಮಾರ, ತಾಲ್ಲೂಕು ಪಂಚಾಯಿತಿ ಇಒ ಪಿ. ವಿಶ್ವನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶ್ರೀನಿವಾಸ್, ಎ. ಮಲ್ಲಿಕಾರ್ಜುನ, ಆರ್. ಶ್ರೀನಿವಾಸ್, ರಾಜಪ್ಪ, ಎನ್. ಶಿವಮೂರ್ತಿ, ನಿಜಲಿಂಗಪ್ಪ, ಸಿದ್ದರಾಮಪ್ಪ, ಗಿರೀಶ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ನೌಕರರು ಇದ್ದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಕೆಎಸ್‌ಆರ್‌ಟಿಸಿ ಅಧ್ಯಕ್ಷನಾಗಿದ್ದಾಗ ಅಪಘಾತದಲ್ಲಿ ಮೃತಪಡುವ ಸಾರಿಗೆ ನೌಕರರಿಗೆ ₹ 1.13 ಕೋಟಿ ವಿಮೆ ಬರುವ ಯೋಜನೆ ಜಾರಿಗೊಳಿಸಿದ್ದೆ. ಎಲ್ಲಾ ಸರ್ಕಾರಿ ನೌಕರರಿಗೂ ಇಂತಹ ಸೌಲಭ್ಯ ಸಿಗಬೇಕು.ಎಂ.ಚಂದ್ರಪ್ಪ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.